ADVERTISEMENT

ವಾಚಕರ ವಾಣಿ | ಭಾಷಾಭಿಮಾನ: ವೈಜ್ಞಾನಿಕ ನಿಲುವಿರಲಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 20:00 IST
Last Updated 17 ಮಾರ್ಚ್ 2022, 20:00 IST

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಹೊರತುಪಡಿಸಿ ಅನ್ಯ ಭಾಷೆಯ ಪುಸ್ತಕಗಳಿಗೆ ಅವಕಾಶ ನೀಡುವುದಿಲ್ಲ’ ಎಂಬ ಹೇಳಿಕೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕನ್ನಡ ಭಾಷೆಯ ಬಗ್ಗೆ ತಮ್ಮಲ್ಲಿರುವ ಸಂಕುಚಿತ ಮನೋಭಾವ ಮತ್ತು ಭಾಷಾ ಮೌಢ್ಯವನ್ನು ಅನಾವರಣಗೊಳಿಸಿದ್ದಾರೆ.

ಒಂದು ಭಾಷೆಯ ಬೆಳವಣಿಗೆ ಮತ್ತು ಉನ್ನತಿಯು ಬೇರೊಂದು ಭಾಷೆಯೊಂದಿಗಿನ ತನ್ನ ಕೊಡು-ಕೊಳ್ಳುವಿಕೆಯನ್ನು ಅವಲಂಬಿಸಿರುತ್ತದೆ ಎನ್ನುವ ಭಾಷಾಶಾಸ್ತ್ರಜ್ಞರ ವೈಜ್ಞಾನಿಕ ನಿಲುವನ್ನು ತಿಳಿಹೇಳಬೇಕಾದ ಅನಿವಾರ್ಯ ಬಂದೊದಗಿದೆ. ಬಿಎಂಶ್ರೀ ಅವರ ‘ಇಂಗ್ಲಿಷ್ ಗೀತಗಳು’ ಕನ್ನಡ ಕಾವ್ಯವು ಹೊಸಮಾರ್ಗವನ್ನು ಸೃಷ್ಟಿಸಿಕೊಳ್ಳಲು ಹೇಗೆ ಕಾರಣವಾಯಿತು ಎನ್ನುವುದನ್ನು ಮತ್ತೊಮ್ಮೆ ನಾವು ಮನಗಾಣಬೇಕಾಗಿದೆ.

ತೆಲುಗು, ಮರಾಠಿ, ತಮಿಳು ಮತ್ತಿತರ ಭಾಷೆಗಳಸೊಗಡನ್ನು ನಮ್ಮ ಸಾಹಿತಿಗಳು ಕನ್ನಡಕ್ಕೆ ತಂದಿದ್ದು ಮತ್ತು ಕನ್ನಡದಿಂದ ಆ ಭಾಷೆಗಳಿಗೆ ಕೊಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಇಷ್ಟಾಗಿಯೂ ಬೇರೆ ಭಾಷೆಯ ಪುಸ್ತಕಗಳಿಗೆ ಅವಕಾಶವಿಲ್ಲ ಎನ್ನುವುದು ಎಷ್ಟು ಸರಿ? ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಬದಲಿಸಿ, ‘ಕನ್ನಡ ಜಾತ್ರೆಗೆ ಬರುವ ಕನ್ನಡ ಸಹೃದಯರೇ, ನಿಮಗೊಂದು ಮತ್ತು ನಿಮ್ಮವರಿಗೊಂದು ಕನ್ನಡ ಪುಸ್ತಕವನ್ನು ಕೊಂಡುಕೊಳ್ಳಿ’ ಎಂದು ಹೇಳಿದ್ದರೆ ಅರ್ಥಪೂರ್ಣವಾಗುತ್ತಿತ್ತೇನೊ?
-ಎಚ್.ವಿ.ಪ್ರಕಾಶ್,ರಟ್ಟೀಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.