ADVERTISEMENT

ವಾಚಕರ ವಾಣಿ: ಸಮಯಸಾಧಕತನದ ನಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 19:30 IST
Last Updated 1 ಸೆಪ್ಟೆಂಬರ್ 2022, 19:30 IST

ತಮ್ಮನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಸೋಮಣ್ಣನವರು ಸಿದ್ದರಾಮಯ್ಯನವರ ಬೇನಾಮಿ ಆಸ್ತಿ ಹಾಗೂ ‘ರೀ ಡೂ’ ವ್ಯವಹಾರಗಳ ಬಗೆಗೆ ಪ್ರತ್ಯಾರೋಪ ಮಾಡಿದ್ದಾರೆ (ಪ್ರ.ವಾ., ಆ. 29). ಗೊತ್ತಿದೆ, ಕಾಲ ಬಂದಾಗ ಬಿಚ್ಚು ತ್ತೇನೆ- ಎನ್ನುವುದು ಸಮಯಸಾಧಕತನ. ಚುನಾವಣಾ ಪ್ರಚಾರ ಆರಂಭವಾದಾಗ ಸಕಾಲವೇ ಸ್ವಾಮಿ? ಮೈಸೂರಿನ, ಬಾದಾಮಿಯ ಹಾಗೂ ಸಿದ್ದರಾಮಯ್ಯನವರು ಸ್ಪರ್ಧಿಸಲಿರುವ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಇದು ಆಸಕ್ತಿಯ ವಿಷಯ. ಈಗಲೇ ಬಹಿರಂಗಪಡಿಸಬಾರದೇಕೆ? ಬೇನಾಮಿ ಆಸ್ತಿಗಳ ಬಗೆಗೆ ಪೂರ್ವಾನ್ವಯ ಕ್ರಮ ಕೈಗೊಳ್ಳಲಾಗದು ಎಂಬ ನ್ಯಾಯಾಲಯದ ಇತ್ತೀಚಿನ ತೀರ್ಪು ಇಬ್ಬರಿಗೂ ಗೊತ್ತಿರುತ್ತದೆ.

ಲೋಕಾಯುಕ್ತಕ್ಕೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವ ಅಧಿಕಾರವನ್ನು ಇನ್ನೂ ಕೊಟ್ಟಿಲ್ಲ. ಜನಪ್ರತಿನಿಧಿಗಳ ಬಗೆಗಿನ ದೂರುಗಳಿಗಾಗಿ ಇರುವ ವಿಶೇಷ ನ್ಯಾಯಾಲಯದಲ್ಲೂ ಅಹವಾಲು ಸಲ್ಲಿಸಿದಾಗ ಪ್ರಕ್ರಿಯೆ ಆರಂಭವಾಗುವುದು ಸ್ವಾಭಾವಿಕ. ಈ ಹಿನ್ನೆಲೆಯಲ್ಲಿ ಸೋಮಣ್ಣನವರು ಅಗತ್ಯ ಅಫಿಡವಿಟ್ ಜತೆಗೆ ದೂರು ದಾಖಲಿಸಿದರೆ ಮೇಲಿನ ಆರೋಪಗಳನ್ನು ಗಂಭೀರವಾಗಿ ಮಾಡಿದ್ದಾರೆ ಎಂದು ಪರಿಗಣಿಸಬಹುದು. ಹಿಂದೊಮ್ಮೆ ನಾಯಕರಿಬ್ಬರು ಧರ್ಮಸ್ಥಳದಲ್ಲಿ ಆಣೆ, ಪ್ರಮಾಣದ ಸವಾಲು ಹಾಕಿದ್ದು ನೆನಪಿಗೆ ಬರುತ್ತಿದೆ. ತಾವು ನಡೆದುಕೊಳ್ಳುವ ಮಠಕ್ಕೆ ಬಂದು ತಮ್ಮ ನಿರಪರಾಧಿತ್ವ ಸಾಬೀತು ಮಾಡಲಿ ಎಂಬ ಸವಾಲನ್ನು ಸೋಮಣ್ಣನವರು ಹಾಕುವುದಿಲ್ಲ ಎಂದು ಆಶಿಸೋಣ. ವಸತಿ ನೀಡಿಕೆ ವಿವಾದದ ಬಗೆಗೆ ಒಂದು ಪ್ರಕ್ರಿಯೆ (ವಿಶೇಷ ಕಾರ್ಯಪಡೆ) ಆರಂಭವಾದಂತೆ ಈ ಹೊಸ ಆರೋಪದ ಬಗೆಗೂ ಕಾರ್ಯಾಚರಣೆ ಆಗುವುದು ಸೋಮಣ್ಣನವರಿಗೆ ಬೇಕಿಲ್ಲವೆ?

-ಎಚ್. ಎಸ್.ಮಂಜುನಾಥ, ಗೌರಿಬಿದನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.