ADVERTISEMENT

ಶಿಕ್ಷಕರ ಕೊರತೆ: ಬೇಕು ತುರ್ತು ಪರಿಹಾರ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 19:31 IST
Last Updated 15 ಡಿಸೆಂಬರ್ 2020, 19:31 IST

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯನ್ನು ನೀಗಿಸಲು ಎಂಜಿನಿಯರಿಂಗ್ ಪದವೀಧರರನ್ನು ನೇಮಿಸುವ ಕುರಿತು ಶಿಕ್ಷಣ ತಜ್ಞರಿಂದ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಂಜಿನಿಯರಿಂಗ್ ಪದವೀಧರರು ತಮ್ಮ ಕ್ಷೇತ್ರದಲ್ಲಿ ಕೆಲಸ ಸಿಗದ ಕಾರಣಕ್ಕೆ ಶಿಕ್ಷಕರಾಗಿ ನೇಮಕವಾದಲ್ಲಿ, ತಾತ್ಕಾಲಿಕವಾಗಿಯಷ್ಟೇ ಆ ವೃತ್ತಿಯಲ್ಲಿ ಮುಂದುವರಿಯುತ್ತಾರೆ. ಬೇರೆ ಕೆಲಸ ಹುಡುಕುವುದಕ್ಕೇ ಸದಾ ಅವರ ಮನಸ್ಸು ಹಾತೊರೆಯುತ್ತಿರುತ್ತದೆ. ಇದರಿಂದ ಅವರು ಶಿಕ್ಷಕ ಕೆಲಸ ಬಿಡುವ ಪ್ರಮಾಣ ಖಂಡಿತವಾಗಿ ಜಾಸ್ತಿ ಇರುತ್ತದೆ. ಇದು ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಲೆನೋವಾಗಿ ಪರಿಣಮಿಸಬಹುದು.

ಕಳೆದ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಒಟ್ಟಾರೆ ಅರ್ಹತೆ ಪಡೆದ ಅಭ್ಯರ್ಥಿಗಳ ಪ್ರಮಾಣ ಕಡಿಮೆ ಇತ್ತು. ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆ ಎಂಬುದು ಆತಂಕಕಾರಿ. ಹಾಗಿದ್ದಲ್ಲಿ ಬಿ.ಇಡಿ, ಡಿ.ಇಡಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿನ ಪರಿಣಾಮಕಾರಿಯಾದ ಶಿಕ್ಷಣ ಸಿಗುತ್ತಿದೆ ಎನ್ನುವುದರ ಬಗ್ಗೆಯೇ ಅನುಮಾನ ಮೂಡುತ್ತದೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ಉಳಿಸಿಕೊಳ್ಳುವುದಕ್ಕಾಗಿ ಆಕರ್ಷಕ ಸವಲತ್ತುಗಳಾದ ಹೆಚ್ಚಿನ ಪ್ರಮಾಣದ ಗ್ರಾಮೀಣ ಸೇವೆ ಭತ್ಯೆ, ವೇಳೆಗೆ ಸರಿಯಾಗಿ ಶಾಲೆಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಕಡಿಮೆ ಬಡ್ಡಿ ದರದಲ್ಲಿ ಸ್ವಂತ ವಾಹನ ಖರೀದಿಗೆ ಮುಂಗಡ ಹಣ ನೀಡುವುದು, ಗ್ರಾಮೀಣ ಪ್ರದೇಶದಲ್ಲೇ ಸರ್ಕಾರಿ ವಸತಿಗೃಹಗಳನ್ನು ಕಟ್ಟಿಸುವಂತಹ ಕ್ರಮಗಳ ಬಗ್ಗೆ ಚಿಂತನೆ ನಡೆಸಬಹುದು. ಒಟ್ಟಾರೆ, ಶಿಕ್ಷಕರ ಕೊರತೆ ಆದಷ್ಟು ಬೇಗ ನಿವಾರಣೆ ಆಗಬೇಕಾದುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ಅವಶ್ಯಕ.

ADVERTISEMENT

–ಕೆ.ಪ್ರಭಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.