ADVERTISEMENT

ವಾಚಕರ ವಾಣಿ: 9 ಜುಲೈ 2025

ವಾಚಕರ ವಾಣಿ
Published 8 ಜುಲೈ 2025, 23:55 IST
Last Updated 8 ಜುಲೈ 2025, 23:55 IST
   

ಪ್ರಥಮ ಭಾಷೆ: ಅಂಕ ಕಡಿತ ಸಲ್ಲದು

ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆಯ ಅಂಕಗಳನ್ನು 125ರಿಂದ 100ಕ್ಕೆ ಇಳಿಸುವ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ’ಯ ಚಿಂತನೆ ಖಂಡನೀಯ. ಗೋಕಾಕ್ ಚಳವಳಿಯ ಫಲವಾಗಿ ಪ್ರಥಮ ಭಾಷೆಯು ಮಾತೃಭಾಷೆ ಆಗಿರುವುದರಿಂದ, ಇದರ ಅಂಕಗಳು ದ್ವಿತೀಯ ಇಲ್ಲವೇ ತೃತೀಯ ಭಾಷೆಗಿಂತ 25 ಅಂಕಗಳು ಹೆಚ್ಚು ಇರುವುದು ಸೂಕ್ತ ಎಂದು ಅಂದಿನ ಭಾಷಾ ತಜ್ಞರು ಅಭಿಪ್ರಾಯ

ಪಟ್ಟಿದ್ದರು. ಅದರನ್ವಯ ಪ್ರಥಮ ಭಾಷೆಗೆ 125 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಈಗ, ಏಕಾಏಕಿ 25 ಅಂಕ ಕಡಿತ ಮಾಡಲು ಮುಂ‌ದಾಗಿರುವುದು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ ವಿದ್ವಾಂಸರು, ಸಾಹಿತಿಗಳು ಹಾಗೂ ಕನ್ನಡಿಗರಿಗೆ ಮಾಡುವ ಅವಮಾನ.

– ರವೀಶ್ ಕುಮಾರ್ ಬಿ., ಮೈಸೂರು

ADVERTISEMENT

ಸಿಬಿಎಸ್‌ಇ: ಸ್ವಾಯತ್ತತೆ ಅಡಮಾನ

ಶಾಲಾ ಶಿಕ್ಷಣದಲ್ಲಿ ಸಿಬಿಎಸ್ಇ/ ಸಿಐಎಸ್ಇ ಮಾದರಿ ಅನುಸರಿಸುವ ರಾಜ್ಯ ಸರ್ಕಾರದ ಉದ್ದೇಶ ಒಂದು ದೃಷ್ಟಿಯಲ್ಲಿ ಸ್ವಾಗತಾರ್ಹ ಎಂದು ಸಮಾಧಾನಕ್ಕಾಗಿ ಹೇಳಿಕೊಳ್ಳಬಹುದು (ಪ್ರ.ವಾ., ಜುಲೈ 8). ದೇಶದಾದ್ಯಂತ ಮಕ್ಕಳ ಶಿಕ್ಷಣದ ಏಕರೂಪತೆಗೆ ಇಡುತ್ತಿರುವ ಮೊದಲ ಹೆಜ್ಜೆ ಎಂದು ಭಾವಿಸುವುದಕ್ಕೂ ಸಾಧ್ಯವಿದೆ. ಸೂಕ್ಷ್ಮವಾಗಿ ನೋಡಿದರೆ, ಇದು ಅಳ್ಳೆದೆಯ ತೋರಿಕೆ ಹಾಗೂ ರಾಜ್ಯದ ಸ್ವಾಯತ್ತತೆಯ ಅಡಮಾನ.

ರಾಜ್ಯ ಪಠ್ಯಕ್ರಮ ಅನುಸರಿಸುವ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಿಗೆ ಈ ಸುಧಾರಣೆ ಅನ್ವಯವಾಗಲಿದೆ ಎಂದು ಹೇಳುವ ಮೂಲಕ, ಕೇಂದ್ರ ಪ್ರಣೀತ ಸಿಬಿಎಸ್ಇ, ಸಿಐಎಸ್ಇ ಮತ್ತು ಅಂತರರಾಷ್ಟ್ರೀಯ ಪಠ್ಯಕ್ರಮ ಎಂದು ಕೊಚ್ಚಿಕೊಳ್ಳುವ ‘ಖಾಸಗಿ ಶಿಕ್ಷಣೋದ್ಯಮ’ದ ಎದುರು, ರಾಜ್ಯ ಶಿಕ್ಷಣ ವ್ಯವಸ್ಥೆಯು ತನ್ನ ನಿಸ್ಸಹಾಯಕತೆಯನ್ನು ತೋರಿಸಿಕೊಂಡಿದೆ.

ಆರ್.ಕೆ. ದಿವಾಕರ, ಬೆಂಗಳೂರು

ಕನ್ನಡ ಕಾಪಾಡುವ ಹೊಣೆ ಯಾರದು?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸುವುದಕ್ಕೆ ವಿರೋಧಿಸಿದ್ದಾರೆ. ಹಾಗಿದ್ದರೆ ಕನ್ನಡ ಕಾಪಾಡುವ ಹೊಣೆ ಯಾರದ್ದು?

ಈಗಾಗಲೇ, ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿದ್ದು, ಮುಚ್ಚುವ ಹಂತಕ್ಕೆ ತಲುಪಿವೆ. ಇದಕ್ಕೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯೇ ಕಾರಣ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ, ಹಿಂದುಳಿದ, ತಳ ಸಮುದಾಯದ ಮಕ್ಕಳು ಓದುತ್ತಾರೆ. ಈ ವರ್ಗದ ಮಕ್ಕಳು ಇಂಗ್ಲಿಷ್‌ ಶಿಕ್ಷಣ ಕಲಿಯುವುದು ಬೇಡವೆ? ಕನ್ನಡವನ್ನು ಕೇವಲ ಈ ವರ್ಗದ ಜನರಷ್ಟೇ ಕಾಪಾಡಬೇಕೆ? ಶ್ರೀಮಂತರು, ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಉದ್ಯಮಿ ಗಳು, ಚಿತ್ರನಟರ ಮಕ್ಕಳಿಗೆ ಕನ್ನಡ ಉಳಿಸುವ ಜವಾಬ್ದಾರಿ ಬೇಡವೆ? ಅನುಕೂಲಸ್ಥ ವರ್ಗದ ಜನರೇ ತಮ್ಮ ಮಕ್ಕಳ ಉನ್ನತಿಯನ್ನು ಬೇರೆ ಭಾಷೆಯಲ್ಲಿ ಬಯಸುವಾಗ ಇದರ ಭಾರವನ್ನು ಕೇವಲ ಈ ಬಡ ಸಮುದಾಯಗಳ ಮೇಲೆ ಏಕೆ ಹೊರಿಸಬೇಕು?

– ವೀರಪ್ಪ ಹ. ತಾಳದವರ, ಗದಗ

ವಿವಿಗಳಿಗೆ ಸ್ವಾಯತ್ತತೆ: ಒಮ್ಮತ ಅವಶ್ಯ

‘ವಿವಿಗಳಿಗೆ ಸ್ವಾಯತ್ತತೆ ಮರೀಚಿಕೆಯೇ?’ ಲೇಖನವು (ಪ್ರೊ. ಬಿ.ಕೆ. ಚಂದ್ರಶೇಖರ್‌, ಪ್ರ.ವಾ., ಜುಲೈ 7) ವಾಸ್ತವಕ್ಕೆ ಕನ್ನಡಿ ಹಿಡಿದಿದೆ. ಪ್ರಸ್ತುತ ದೇಶದಲ್ಲಿ ಸ್ವಾಯತ್ತತೆಯ ಕಲ್ಪನೆಯು ಊಹೆಗೂ ನಿಲುಕದ್ದಾಗಿದೆ. ಅದು ವಿಶ್ವವಿದ್ಯಾಲಯಗಳಿಗೆ ಸಾಧ್ಯವೂ ಇಲ್ಲ; ಸಾಧುವೂ ಅಲ್ಲದಾಗಿದೆ. ಮೊದಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸು

ವುದಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಗಾಗಲೇ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ರಚನೆ ಮಾತ್ರವಲ್ಲದೇ ತಾತ್ಕಾಲಿಕ ನೌಕರರಿಂದ ಕುಲಪತಿ ನೇಮಕಾತಿವರೆಗೂ ತಮ್ಮದೇ ಪ್ರಭಾವ ಇರಬೇಕೆಂಬ ನಿರೀಕ್ಷೆ ಹೊಂದಿವೆ. ಇದರಿಂದ ವಿಶ್ವವಿದ್ಯಾಲಯ

ಗಳಲ್ಲಿ ನೈಜ ಸಂಶೋಧನೆ ವಿಷಯಗಳ ಆಯ್ಕೆಗೆ ಮುಕ್ತ ಸ್ವಾತಂತ್ರ್ಯ ಇಲ್ಲವಾಗಿದೆ. ಸರ್ಕಾರ ಮತ್ತು ಪ್ರಾಧ್ಯಾಪಕ ವರ್ಗದ ಸಹಯೋಗದಲ್ಲಿ ಸಮಾಜ ಕೇಂದ್ರಿತ ಶಿಕ್ಷಣದ ಬಗ್ಗೆ ಪೂರಕ ವಾತಾವರಣ ಕಲ್ಪಿಸಿದರೆ ಸ್ವಾಯತ್ತತೆಯ ಕಲ್ಪನೆಯೇ ಮೂಡದು.

– ತಿಮ್ಮೇಶ ಮುಸ್ಟೂರು, ಜಗಳೂರು

ಭಾಷಾಭಿಮಾನ ಬೆಳೆಯಲಿ

ಇತ್ತೀಚೆಗೆ ನಾನು ಚೆನ್ನೈ ಹಾಗೂ ಪುದುಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಅಂಗಡಿಗಳ ನಾಮಫಲಕ ಬಹುತೇಕ ತಮಿಳು ಹಾಗೂ ಸ್ವಲ್ಪ ಭಾಗ ಇಂಗ್ಲಿಷ್ ಭಾಷೆಯಲ್ಲಿ ಇರುವುದನ್ನು ಕಂಡೆ. ಹಳ್ಳಿಗಳಲ್ಲಿ ನಾಮಫಲಕಗಳು ತಮಿಳಿನಲ್ಲಷ್ಟೇ ಇದ್ದವು. ಅಲ್ಲಿಯ ಜನರು ತಮಿಳಿನಲ್ಲೇ ಮಾತನಾಡುತ್ತಾರೆಯೇ ಹೊರತು ಹಿಂದಿ, ಇಂಗ್ಲಿಷ್ ಗೊತ್ತಿದ್ದರೂ ಮಾತನಾಡುವುದಿಲ್ಲ. ಅಂತಹ ಭಾಷಾಭಿಮಾನ ಕನ್ನಡಿಗರಿಗೆ ಏಕಿಲ್ಲ?

– ಚಾವಲ್ಮನೆ ಸುರೇಶ್ ನಾಯಕ್, ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.