ADVERTISEMENT

ಎಡಪಕ್ಷಗಳ ನಾಯಕರು ಒಂದಾಗಲಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 20:40 IST
Last Updated 26 ಮಾರ್ಚ್ 2019, 20:40 IST

ಎಡಪಕ್ಷಗಳು ಎದುರಿಸುತ್ತಿರುವ ಏಕಾಕಿತನ ಕುರಿತ ಸಂಪಾದಕೀಯ (ಪ್ರ.ವಾ., ಮಾರ್ಚ್‌ 26) ಸಮಯೋಚಿತವಾಗಿದೆ. ದೇಶದ ದುರದೃಷ್ಟಕ್ಕೆ, ಎಡಪಕ್ಷಗಳ ನಾಯಕರಿನ್ನೂ ಎಚ್ಚರಗೊಳ್ಳುವ ಸೂಚನೆಗಳೇ ಇಲ್ಲ. ಅವು ಮಾಡಬೇಕಾದ ಮೊದಲ ಕೆಲಸ, ಕಮ್ಯುನಿಸ್ಟ್ ಪಕ್ಷಗಳು ವಿಲೀನಗೊಳ್ಳುವುದು.

1960ರ ದಶಕದಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾದಾಗ ಇದ್ದ ಪರಿಸ್ಥಿತಿ ಇಂದು ಪೂರ್ಣ ಬದಲಾಗಿದೆ. ಒಂದು ಕಮ್ಯುನಿಸ್ಟ್ ಪಕ್ಷದ ಆರಾಧ್ಯದೈವವಾದ ಸೋವಿಯತ್‌ ರಷ್ಯಾ ಇಂದು ಜಗತ್ತಿನ ಭೂಪಟದಲ್ಲಿಯೇ ಇಲ್ಲ. ಮತ್ತೊಂದು ಕಮ್ಯುನಿಸ್ಟ್ ಪಕ್ಷವು ಹಾಡಿ ಹೊಗಳುತ್ತಿದ್ದ ಚೀನಾವೂ ಬದಲಾಗಿದೆ. ಈ ಎರಡೂ ದೇಶಗಳ ಸರ್ಕಾರಗಳು ಸಾಮಾನ್ಯ ಜನರಿಂದ ಎಷ್ಟೋ ದೂರ ಸರಿದಿವೆ. ಭಾರತದ ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಕಮ್ಯುನಿಸ್ಟ್ ಪಕ್ಷಗಳು ಒಂದಾಗಿ ಜನಪರವಾಗಿ ಹೋರಾಡದೆ ವಿಧಿಯಿಲ್ಲ.

ಈ ಪಕ್ಷಗಳು ಒಂದಾದಾಗ, ಎರಡನೆಯ ಕೆಲಸ ಸುಲಭ: ಈ ಪಕ್ಷಗಳಿಗೆ ಸಂಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಕಾರ್ಮಿಕ ಸಂಘಗಳಾದ ಎಐಟಿಯುಸಿ, ಸಿಐಟಿಯುಗಳ ವಿಲೀನ. ಈ ಸಂಘಗಳ ಉದ್ದೇಶಗಳು ದುಡಿಯುವ ವರ್ಗಗಳ ಹಿತರಕ್ಷಣೆಯೇ ಆಗಿರುವಾಗ, ಅವು ಬೇರೆ ಬೇರೆಯಾಗಿಯೇ ಹೋರಾಡುವುದು ಅರ್ಥಹೀನ. ವಿಲೀನಗೊಂಡರೆ ಅದು ಅತ್ಯಂತ ಪ್ರಬಲ ಕಾರ್ಮಿಕ ಸಂಘವಾಗಿ ಕಾರ್ಯ ನಿರ್ವಹಿಸ
ಬಹುದು. ಇದು ಎರಡೂ ಪಕ್ಷಗಳ ಇತರ ತಳಮಟ್ಟದ ಅನೇಕ ಜನಪರ ಸಂಘಟನೆಗಳೂ ಒಂದಾಗಲು ದಾರಿ
ಯಾಗುತ್ತದೆ. ಸಂಘಟಿತ ಎಡಪಂಥೀಯ ಪಕ್ಷಗಳು ಮತ್ತು ಜನಪರವಾದ ಅವುಗಳ ಅಂಗಸಂಸ್ಥೆಗಳು, ಅಡೆತಡೆ ಇಲ್ಲದೆ ಹಬ್ಬುತ್ತಿರುವ ಬಲಪಂಥೀಯ ಸಂಘಟನೆಗಳ ಕಬಂಧಬಾಹುಗಳನ್ನು ಛೇದಿಸುವಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ.

ADVERTISEMENT

ಟಿ.ಆರ್.ಭಟ್, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.