ADVERTISEMENT

ವಾಚಕರ ವಾಣಿ| ಜನೋಪಯೋಗಿ ಕಾರ್ಯಕ್ಕೆ ಬಳಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST

ಗುರಿ ಮೀರಿ ತೆರಿಗೆ ಸಂಗ್ರಹ ಆಗಲಿರುವುದಾಗಿ ವರದಿಯಾಗಿದೆ (ಪ್ರ.ವಾ., ಡಿ. 29). ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 22.2 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರದ ಗುರಿಯಲ್ಲಿ ಈಗಾಗಲೇ ₹ 19 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ, ಗುರಿ ಮೀರಿದ ಸಾಧನೆ ಮಾಡುವ ಹುಮ್ಮಸ್ಸಿನಲ್ಲಿದೆ. ನಿಜಕ್ಕೂ ಇದು ಶ್ಲಾಘನೀಯ. ಈ ದಿಸೆಯಲ್ಲಿ ಸರ್ಕಾರದ ಉತ್ಸಾಹ, ಕಾರ್ಯಕ್ಷಮತೆ ಅಭಿನಂದನಾರ್ಹ. ಇದೇ ರೀತಿ ಜನರಿಂದ ಹೆಚ್ಚು ಹೆಚ್ಚು ತೆರಿಗೆ ಸಂಗ್ರಹಿಸಿ ಸರ್ಕಾರದ ಬೊಕ್ಕಸ ತುಂಬಲಿ ಎಂದು ಆಶಿಸುತ್ತೇವೆ. ಜೊತೆಗೆ, ಅನಿಲ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಪ್ರಕಟವಾದಾಗ, ಅವುಗಳ ಲಾಭ ಗಳಿಕೆಯಲ್ಲಿನ ಹೆಚ್ಚಳ ಕಂಡು ತುಂಬಾ ಹೆಮ್ಮೆ ಅನಿಸುತ್ತದೆ. ಆದರೆ ಇದೇ ಸಂದರ್ಭದಲ್ಲಿ ಪ್ರಕಟವಾಗಿರುವ ‘ಶತಕದಂಚಿನಲ್ಲಿ ತರಕಾರಿ ಬೆಲೆಗಳು’ ಸುದ್ದಿ ಓದಿ, ಈ ಸಂತೋಷಕ್ಕೆ ತಣ್ಣೀರೆರಚಿದಂತಾಯಿತು.

ಸಾವಿರದಂಚಿನಲ್ಲಿರುವ ಅಡುಗೆ ಅನಿಲ ದರ, ನೂರರ ಗಡಿ ದಾಟಿದ ಪೆಟ್ರೋಲ್, ಡೀಸೆಲ್ ಬೆಲೆ, ₹ 200 ಮುಟ್ಟಿದ ಬದನೆಕಾಯಿ... ಇಂತಹ ಸ್ಥಿತಿಯನ್ನು ನೋಡಿದರೆ ಜನಸಾಮಾನ್ಯರು ಜೀವನ ಮಾಡುವುದೇ ದುಸ್ತರ ಎನಿಸುತ್ತದೆ. ‘ರೋಟಿ, ಕಪಡಾ, ಮಕಾನ್’ ಇವು ಮಾನವನ ಮೂಲಭೂತ ಅವಶ್ಯಕತೆಗಳು. ಇವುಗಳನ್ನು ಜನರಿಗೆ ಒದಗಿಸುವ ಬದ್ಧತೆ ಸರ್ಕಾರಗಳಿಗೆ ಇರಬೇಕು. ಅದರಲ್ಲೂ ಹಸಿವು ನೀಗಿಸಿಕೊಳ್ಳಲು ಪಡುವ ಪಾಡು ಅನುಭವಿಸಿದವರಿಗಷ್ಟೇ ಗೊತ್ತಾಗುತ್ತದೆ. ಆರ್ಥಿಕವಾಗಿ ಈಗ ಸುಸ್ಥಿತಿಯಲ್ಲಿರುವ ಸರ್ಕಾರಗಳು ಇತ್ತ ಗಮನಹರಿಸಲಿ.

- ಟಿ.ವಿ.ಬಿ. ರಾಜನ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.