ADVERTISEMENT

ವಾಚಕರ ವಾಣಿ: ಸಾಂವಿಧಾನಿಕ ಕರ್ತವ್ಯ ಇನ್ನಾದರೂ ಪಾಲಿಸಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 22:15 IST
Last Updated 13 ಮೇ 2022, 22:15 IST

ಯಾವುದೋ ಒಂದು ನೆಪ ಮುಂದಿಟ್ಟು ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಯನ್ನು ಹಾಗೂ ವಾರ್ಡುಗಳ ಪುನರ್ ವಿಂಗಡಣೆಯಾಗದಿರುವುದನ್ನು ನೆಪವಾಗಿಟ್ಟುಕೊಂಡು ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಾ ಬಂದಿರುವ ರಾಜ್ಯ ಸರ್ಕಾರದ ನಡೆ ಅನುಚಿತ ಮತ್ತು ಆಕ್ಷೇಪಾರ್ಹ. ಅಷ್ಟೇ ಅಲ್ಲ, ವಿಕೇಂದ್ರೀಕರಣದ ಮೂಲ ತತ್ವಕ್ಕೆ ಮಾರಕವಾದುದು. ಸ್ಥಳೀಯ ಮಟ್ಟದಲ್ಲಿಯೂ ತಮ್ಮದೇ ಕಾರುಬಾರು ನಡೆಯಬೇಕೆಂಬ ಶಾಸಕರಿಗೆ ನಿಗದಿತ ಅವಧಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದು ಬೇಕಿಲ್ಲ. ಮೀಸಲಾತಿಗೆ ಸಂಬಂಧಿಸಿದ ತೊಡಕನ್ನು ನಿವಾರಿಸಲು ತ್ವರಿತ ಕ್ರಮ ಜರುಗಿಸಬೇಕು. ವಾರ್ಡ್ ಮರು ವಿಂಗಡಣೆ ಮಾಡುವುದು ಕಾಲಕಾಲಕ್ಕೆ ಜರುಗಲೇಬೇಕಾದ ಸಾಮಾನ್ಯ ಆಡಳಿತ ಪ್ರಕ್ರಿಯೆ ಮತ್ತು ಅವನ್ನೇ ನೆಪವಾಗಿಟ್ಟುಕೊಂಡು ಚುನಾವಣೆಗಳನ್ನು ಮುಂದೂಡುತ್ತಾ ಸಾಗುವುದು ಸರ್ವಥಾ ಸಾಧುವಲ್ಲ.

ಮೂರು ಹಂತದ ಪರಿಶೀಲನೆ ನಡೆಸಿ ಮೀಸಲಾತಿ ನಿಗದಿಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿ ದಶಕವೇ ಸಂದಿದ್ದರೂ ಮೀಸಲಾತಿ ತೊಡಕು ನಿವಾರಣೆಗೆ ಈಗಷ್ಟೇ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಆಯೋಗವೊಂದನ್ನು ರಚಿಸಿ, ವರದಿ ನೀಡಲು ಕಾಲಮಿತಿಯನ್ನೇ ವಿಧಿಸದಿರುವ ರಾಜ್ಯ ಸರ್ಕಾರದ ನಡೆ, ಸಾಧ್ಯವಾದಷ್ಟೂ ದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ಹುನ್ನಾರ. ಸಾಂವಿಧಾನಿಕ ಕರ್ತವ್ಯದಿಂದ ನುಣುಚಿಕೊಳ್ಳುವ ಯತ್ನವನ್ನು ಸರ್ಕಾರ ಇನ್ನಾದರೂ ಮುಂದುವರಿಸದಿರಲಿ.

ಶ್ರುತಿ ಪಿ. ಗೌಡ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.