ADVERTISEMENT

ಬುದ್ಧಿ ಕಲಿಯಬೇಕು ಅಷ್ಟೇ!

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 19:30 IST
Last Updated 30 ಆಗಸ್ಟ್ 2018, 19:30 IST
   

1962ನೇ ಇಸವಿ. ಮಹಾಮಳೆಯ ಕಾರಣದಿಂದಾಗಿ ಕೊಡಗಿನ ಅವಂದೂರು– ಬೆಟ್ಟತ್ತೂರು ಗ್ರಾಮದ ಗಡಿಭಾಗದ ಸುಮಾರು ಒಂದು ಕಿ.ಮೀ. ಸುತ್ತಳತೆ ಗಾತ್ರದ ಬೆಟ್ಟದ ಭಾಗವೊಂದು ಕುಸಿದು, ಕಾಫಿ– ಏಲಕ್ಕಿ ತೋಟಗಳನ್ನೊಳಗೊಂಡ ಧರೆಯು ಅರ್ಧ ಕಿ.ಮೀ. ದೂರ ಕ್ರಮಿಸಿ ಸಮತಟ್ಟಾದ ಗದ್ದೆ ಬಯಲಿನಲ್ಲಿ ಸ್ಥಾಪನೆಗೊಂಡಿತು. ಘಟನೆ ನಡೆದು 15–20 ವರ್ಷಗಳ ನಂತರವೂ ಅಲ್ಲಿನ ಪರಿಸರದ ಶಾಲಾ ವಿದ್ಯಾರ್ಥಿಯಾಗಿದ್ದ ನಾನು, ಬೆಟ್ಟ ಕುಸಿತದ ಕಂದಕವನ್ನು ದೂರದಿಂದ ನೋಡುತ್ತ ಭಯ– ವಿಸ್ಮಯಪಡುತ್ತಿದ್ದೆ. ಒಬ್ಬನಿಗೆ ಸೇರಿದ್ದ ಅಷ್ಟೂ ಕಾಫಿ, ಏಲಕ್ಕಿ ತೋಟವೊಂದು ರಾತ್ರೋರಾತ್ರಿ ಅನಾಮತ್ತಾಗಿ ಬೇರೊಬ್ಬನ ಸಮತಟ್ಟಾದ ಗದ್ದೆ ಬಯಲಿನಲ್ಲಿ ಮರುಸ್ಥಾಪನೆಗೊಂಡು, ಅಲ್ಲಿ ಆರ್ಥಿಕ, ಸಾಮಾಜಿಕ ಸಮಸ್ಯೆಯೊಂದು ಉದ್ಭವವಾಗಿತ್ತು.

ಐವತ್ತಾರು ವರ್ಷಗಳ ನಂತರ, ಕೊಡಗಿನಲ್ಲಿ ಪುನಃ ಮಹಾಮಳೆಯ ಕಾರಣದಿಂದಾಗಿ ಹಿಂದಿನ ಸಲಕ್ಕಿಂತ ನೂರು ಪಾಲು ಜಾಸ್ತಿ ಬೆಟ್ಟಗುಡ್ಡಗಳು ಕುಸಿದಿವೆ. ಬೆಟ್ಟಗುಡ್ಡಗಳೆಲ್ಲಾ ಪರಸ್ಪರ ಮಾತನಾಡಿಕೊಂಡು ಕುಸಿಯಲು ಪ್ರಾರಂಭಿಸಿ
ದವೋ ಎಂಬಂತೆ ಭಾಸವಾಗುತ್ತಿದೆ. ಮನುಷ್ಯನ ಪಾಲು ಬೆಟ್ಟದಷ್ಟಿದೆ. ಮನುಷ್ಯನ ಲಾಲಸೆಯೇ ಈ ವಿಕೋಪಕ್ಕೆ ಕಾರಣ ಎಂದು ಗಟ್ಟಿಯಾಗಿ ಹೇಳಬಲ್ಲೆ.

ಭಾಗಮಂಡಲ, ಮಡಿಕೇರಿ ಭಾಗದಲ್ಲಿ ವಾರ್ಷಿಕ 200 ರಿಂದ 300 ಇಂಚುಗಳಷ್ಟು ಮಳೆಯಾಗುವುದು ಹಿಂದಿನಿಂದಲೂ ಇತ್ತು. ಜೂನ್‌ ಮೊದಲ ವಾರದಲ್ಲಿ ಮುಂಗಾರು ಆರಂಭವಾದಾಗ ಮರೆಯಾಗುವ ಸೂರ್ಯ, ಮತ್ತೆ ಮುಖತೋರಿಸುವುದು ಮೂರು ತಿಂಗಳ ನಂತರವೇ. 1980ನೇ ಇಸವಿಯಿಂದೀಚೆಗೆ ಕೊಡಗಿನ ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 150ರಿಂದ 160 ಇಂಚಿಗೆ ಇಳಿಯಿತು. ಈ ವರ್ಷ ಆದ ಮಳೆಯ ಪ್ರಮಾಣ 125 ಇಂಚು. ಭಾಗಮಂಡಲದಲ್ಲಿ 220 ಇಂಚುಗಳು. ಮಳೆಯ ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಅಂದರೆ ಇದು ಮಳೆಯಿಂದ ಆದ ಅನಾಹುತವಲ್ಲ ಎಂಬುದು ಖಚಿತ. ಹಾಗಾದರೆ ಲೆಕ್ಕ ತಪ್ಪಿದ್ದೆಲ್ಲಿ?

ADVERTISEMENT

ನೆನಪಿರಲಿ, 1962ರಲ್ಲಿ ಬೆಟ್ಟ ಕುಸಿಯಲು ಕಾರಣ, ‘ವ್ಯವಸಾಯ ಕ್ಷೇತ್ರ ವಿಸ್ತರಣೆ’ ಎಂಬ ಮನುಷ್ಯನ ದುರಾಸೆ. ದಟ್ಟವಾಗಿ ಬೆಳೆದುನಿಂತಿದ್ದ ಕಾಡನ್ನು ಕಡಿದು ಕಾಫಿ, ಏಲಕ್ಕಿ ಎಂಬ ಅಸಹಜ ಕೃಷಿ ಆರಂಭಿಸಿದ್ದೇ ಈ ವರ್ಷದ ಅನಾಹುತಕ್ಕೂ ಕಾರಣ. ಕಾಫಿಯು ಮೂಲತಃ ಮಲೆನಾಡಿನ ಗಿಡವಲ್ಲ. 18ನೇ ಶತಮಾನದ ಕೊನೆಯ ಭಾಗದಲ್ಲಿ ಬ್ರಿಟಿಷರು ಕೊಡಗು, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲಿ ಈ ಗಿಡವನ್ನು ಪರಿಚಯಿಸಿದರು. ಇಂದು ಅದು ಬೃಹತ್‌ ವಾಣಿಜ್ಯ ಬೆಳೆಯಾಗಿದೆ. ಝಣಝಣ ರೊಕ್ಕ ಸುರಿಸುತ್ತಿದೆ. ಸಾವಿರಾರು ವರ್ಷಗಳಿಂದ ಕೊಡಗಿನ ರೂಢಿಗತವಾಗಿದ್ದ ಭತ್ತದ ಕೃಷಿ ಅವಸಾನದಲ್ಲಿದೆ.

ಇದರ ಮಧ್ಯದಲ್ಲೇ ‘ಹೋಮ್‌ ಸ್ಟೇ’ ಎಂಬ ಐಷಾರಾಮಿ ಹೋಟೆಲುಗಳೂ ಹಣದ ಥೈಲಿಗಳ ಆಸೆ ಹುಟ್ಟಿಸಿದವು. ಇವು ಸ್ಥಳೀಯರ ಜಮೀನನ್ನು ಕಬಳಿಸಿದವು, ನೆಲದ ನೀರನ್ನು ರಾಡಿ ಎಬ್ಬಿಸಿದವು. ಪ್ರವಾಸೋದ್ಯಮ ಎಂಬ ಭ್ರಮೆಯ ಸಂತೆಯೊಂದು ಅಲ್ಲಿ ಸೃಷ್ಟಿಯಾಯಿತು. ಪ್ರವಾಸೋದ್ಯಮ ಬೆಳೆಯಿತು. ಕಾಡಿನ ಮಧ್ಯೆ ರಸ್ತೆಗಳು ನಿರ್ಮಾಣವಾದವು. ಮರಳು ದಂಧೆ, ಟಿಂಬರ್‌ ಮಾಫಿಯಾಗಳಿಂದ ಪ್ರಕೃತಿ ಅಸ್ತವ್ಯಸ್ತಗೊಂಡಿತು. ಪ್ರಕೃತಿ ಮಾತೆ ಈ ಬಾರಿ ಸ್ವಲ್ಪ ಜೋರಾಗಿಯೇ ಏಟು ಕೊಟ್ಟಿದ್ದಾಳೆ. ಜನರು ಅರ್ಥ ಮಾಡಿಕೊಂಡು ಬುದ್ಧಿ ಕಲಿಯಬೇಕು ಅಷ್ಟೇ.

ವಿಶ್ವನಾಥ ಯೆಡಿಕೇರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.