ADVERTISEMENT

ಪೇಜಾವರರು ಹೇಳಿಕೆಗೆ ಬದ್ಧರೇ?

ಎಚ್.ಎಸ್.ಮಂಜುನಾಥ
Published 5 ನವೆಂಬರ್ 2018, 20:00 IST
Last Updated 5 ನವೆಂಬರ್ 2018, 20:00 IST

‘ಡಿಸೆಂಬರ್‌ನಲ್ಲಿ ಮಂದಿರ ನಿರ್ಮಾಣ’ (ಪ್ರ.ವಾ., ನ. 4) ಸುದ್ದಿಯನ್ನು ಓದಿ, ಹಳೆಯ ಘಟನಾವಳಿಗಳು ನೆನಪಾದವು. ಪೇಜಾವರ ಶ್ರೀಗಳು 2002ರಲ್ಲಿ ‘ನಿರ್ಮಾಣ ಕಾರ್ಯವನ್ನು ಸ್ವಲ್ಪ ವಿಳಂಬ ಮಾಡುವುದು ಒಳ್ಳೆಯದು’ ಎಂದು, ಆನಂತರ ತಾವು ಸಂತ ಪರಿವಾರದ ಭಾಗವಾಗಿರುವ ಕಾರಣ ಅದು ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧವಾಗುವುದು ಅನಿವಾರ್ಯ ಎಂದೂ ತಿಳಿಸಿದ್ದರು (ಪ್ರ. ವಾ., ಫೆ. 11, 2002).

ಅವಸರ ಬೇಡ ಎಂದುದಕ್ಕೆ ಅವರು ಕೊಟ್ಟಿದ್ದ ಕಾರಣ, ಯುದ್ಧ ಸ್ಥಿತಿ ಹಾಗೂ ಭಯೋತ್ಪಾದಕ ಚಟುವಟಿಕೆ ಜಾಸ್ತಿಯಾಗಿದ್ದುದು. ವಿವಾದವಿಲ್ಲದ ಜಮೀನನ್ನು ವಿಶ್ವ ಹಿಂದೂ ಪರಿಷತ್‌ಗೆ ನೀಡುವ ಬದಲು ರಾಜೀನಾಮೆ ನೀಡಲು ಸಿದ್ಧ ಎಂದು ಆಗಿನ ಪ್ರಧಾನಿ ವಾಜಪೇಯಿ ಹೇಳಿದ್ದನ್ನು ಅವರು ಉಲ್ಲೇಖಿಸಿದ್ದರು.

ಈಗ ಸುಪ್ರೀಂ ಕೋರ್ಟ್‌ನಲ್ಲಿ ಟೈಟಲ್ ಸೂಟ್ (ಆಸ್ತಿ ಹಕ್ಕಿನ ಮೊಕದ್ದಮೆ) ವಿಚಾರಣೆಗೆ ಬರಬೇಕಿದೆ. 2019ರ ಮಾರ್ಚ್ ಅಥವಾ ಲೋಕಸಭಾ ಚುನಾವಣೆಗೂ ಮುನ್ನ ನಿರ್ಮಾಣ ಕಾರ್ಯ ಆರಂಭಿಸುವುದಕ್ಕೆ ಏನು ಅವಸರ? ಪೇಜಾವರರು ಈಗಲೂ ಸಂತ ಸಮಿತಿಯ ನಿರ್ಧಾರಕ್ಕೆ ಬದ್ಧರೇ?

ADVERTISEMENT

ವಾಜಪೇಯಿ ಅವರು ಈಗಿಲ್ಲ, ಬಿಜೆಪಿಯ ಸಂಖ್ಯಾಬಲ ಆಗಿಗಿಂತ ಹೆಚ್ಚಿದೆ. ಈಗಿನ ಪ್ರಧಾನಿ ಏನು ಹೇಳುತ್ತಾರೆ, ಸುಮ್ಮನಿರುತ್ತಾರೆಯೇ ಅಥವಾ ಕಾದು ನೋಡುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.