ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಏಕಿಷ್ಟು ನಿರ್ಲಕ್ಷ್ಯ?

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:46 IST
Last Updated 7 ಡಿಸೆಂಬರ್ 2018, 19:46 IST

ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವುದು ಸಂತೋಷದ ವಿಷಯ. ಆದರೆ ಡಿ. 1ರಂದು ನಡೆದ ಇತಿಹಾಸ ವಿಷಯದ ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳನ್ನು ಅವಲೋಕಿಸಿದರೆ, ಪ್ರಾಧಿಕಾರವು ವಿಷಯತಜ್ಞರನ್ನು ಆಹ್ವಾನಿಸದೆ, ಅಂತರ್ಜಾಲದಿಂದ ಪ್ರಶ್ನೆಗಳನ್ನು ಡೌನ್‌ಲೋಡ್‌ ಮಾಡಿ ಕೊಟ್ಟಿರುವಂತೆ ಭಾಸವಾಗುತ್ತದೆ. ಪ್ರಶ್ನೆಪತ್ರಿಕೆಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದವರಿಗೆ ಭಾಷೆಯ ಕನಿಷ್ಠ ಜ್ಞಾನವೂ ಇದ್ದಂತೆ ಕಾಣಿಸುತ್ತಿಲ್ಲ.

ಪರೀಕ್ಷೆಯಲ್ಲಿ ಕೇಳಲಾದ ಅನೇಕ ಪ್ರಶ್ನೆಗಳನ್ನು ಒಂದು ಜಾಲತಾಣದಿಂದ ಯಥಾವತ್ತಾಗಿ ನಕಲು ಮಾಡಲಾಗಿದೆ. ಕನ್ನಡದಲ್ಲಿ ‘ಯಾರು’ ಮತ್ತು ‘ಯಾವುದು’ ಎಂಬುದನ್ನು ಎಲ್ಲಿ, ಹೇಗೆ ಬಳಸಬೇಕೆಂಬುದೂ ಈ ಪ್ರಶ್ನೆಪತ್ರಿಕೆ ತಯಾರಿಸಿದವರಿಗೆ ಗೊತ್ತಿಲ್ಲ. ಅರಸರಿಗೆ ‘ಯಾರು’ ಎಂಬುದರ ಬದಲಾಗಿ ‘ಯಾವುದು’ ಎಂಬ ಪದ ಬಳಸಲಾಗಿದೆ.

ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವಾಗ ತದ್ವಿರುದ್ಧ ಅರ್ಥ ಬರುವ ರೀತಿಯಲ್ಲಿ ಭಾಷಾಂತರಿಸಿದ್ದಾರೆ (ಉದಾ: ಇ ಸರಣಿಯ ಇತಿಹಾಸ ಪತ್ರಿಕೆ 1ರಲ್ಲಿ ಕ್ರಮ ಸಂ. 10 ಮತ್ತು 82ನೆಯ ಪ್ರಶ್ನೆಗಳು). ಇಬ್ಬರು ಅರಸರ ನಡುವೆ ನಡೆದ ಯುದ್ಧವನ್ನು ‘ಜಗಳ’ ಎಂದು ಉಲ್ಲೇಖಿಸಿದ್ದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಮೂರು ವರ್ಷಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿರುವ ಪ್ರಾಧಿಕಾರಕ್ಕೆ, ಪ್ರಶ್ನೆಪತ್ರಿಕೆ ತಯಾರಿಸಲು ಅನುಭವಿ ವಿಷಯ ತಜ್ಞರು ಸಿಗಲಿಲ್ಲವೇ? ನಿರ್ದಿಷ್ಟ ಜಾಲತಾಣದಿಂದ ಯಥಾವತ್ತಾಗಿ ಪ್ರಶ್ನೆಗಳನ್ನು ನಕಲು ಮಾಡಿದರೆ, ಪ್ರಶ್ನೆಪತ್ರಿಕೆ ಬಯಲಾದಂತೆಯೇ ಅಲ್ಲವೇ?

ADVERTISEMENT

ಇನ್ನು ಮುಂದೆಯಾದರೂ ಪರೀಕ್ಷಾ ಪ್ರಾಧಿಕಾರವು ವಿಷಯ ತಜ್ಞರ ಮೂಲಕವೇ, ತಪ್ಪಿಲ್ಲದ ಪ್ರಶ್ನೆಪತ್ರಿಕೆ ತಯಾರಿಸಲು ಕ್ರಮ ಕೈಗೊಳ್ಳಬೇಕು.

-ಡಾ. ಬಸವರಾಜ ಎನ್. ಅಕ್ಕಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.