ADVERTISEMENT

ಹೈಕಮಾಂಡ್‌ ನಿರ್ಧಾರಕ್ಕೆ ನಾವೇ ಹೊಣೆ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST

‘ಕರ್ನಾಟಕದ ಮುಖ್ಯಮಂತ್ರಿಯನ್ನು ಕರ್ನಾಟಕಕ್ಕೆ ಸಂಬಂಧವಿಲ್ಲದ ದೆಹಲಿಯ ಹೈಕಮಾಂಡ್‌ ಯಾಕೆ ನಿರ್ಧಾರ ಮಾಡಬೇಕು’ ಎಂದು ಅರುಣ್ ಜಾವಗಲ್ ಅವರು ಕೇಳುವುದರಿಂದ (ಪ್ರ.ವಾ., ದಿನದ ಟ್ವೀಟ್‌, ಜುಲೈ 27) ಹಿಡಿದು, ‘ರಾಜ್ಯಗಳು ಕೇಂದ್ರದ ಅಡಿಯಾಳಲ್ಲ’ ಎಂದು ರುದ್ರೇಶ್ ಅದರಂಗಿ ಅವರು ಹೇಳಿರುವ (ವಾ.ವಾ., ಜುಲೈ 28) ಮತ್ತು ಇಂಥದ್ದೇ ಹಲವಾರು ಅಭಿಪ್ರಾಯಗಳಲ್ಲೇ ಅವಕ್ಕೆ ಉತ್ತರವೂ ಅಡಗಿದೆ. ಅದೇ ‘ರಾಷ್ಟ್ರೀಯ ಪಕ್ಷ’ ಎಂಬ ಪದ. ಹಲವು ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ನೋಡಿಯೂ, ಅರವಿಂದ ಕೇಜ್ರಿವಾಲ್‌, ಮಮತಾ ಬ್ಯಾನರ್ಜಿ, ಎಂ.ಕೆ.ಸ್ಟಾಲಿನ್ ಅವರಂಥವರ ನಿದರ್ಶನಗಳು ಕಣ್ಣಮುಂದಿರುವಾಗಲೂ ಒಳ್ಳೆಯ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸದೆ ಪ್ರತಿಯೊಂದಕ್ಕೂ ದೆಹಲಿಗೆ ಓಡುವವರನ್ನು (ಅದೂ ನಮ್ಮ ದುಡ್ಡಿನಲ್ಲಿ) ಹುಟ್ಟುಹಾಕಿದವರೇ ನಾವು. ಹೀಗಾಗಿ, ಬೈಯಬೇಕಾದರೆ ನಮ್ಮನ್ನು ನಾವೇ ಕನ್ನಡಿಯ ಮುಂದೆ ನಿಂತು ಬೈದುಕೊಳ್ಳಬೇಕೇ ಹೊರತು ಹೈಕಮಾಂಡ್‌ ಅನ್ನಲ್ಲ.

ಇಲ್ಲಿಯೇ ಹುಟ್ಟಿ ಬೆಳೆದಿರುವವರಿಗೆ ನಾಡಿನ ಕಷ್ಟ ಚೆನ್ನಾಗಿ ಅರ್ಥವಾಗುತ್ತದೆ ಹೊರತು ದೆಹಲಿಯಿಂದ ಬರುವಉಸ್ತುವಾರಿಗಳು ಅಥವಾ ವೀಕ್ಷಕರಿಗಲ್ಲ. ಇಲ್ಲಿ ನಾನು ಪ್ರಾದೇಶಿಕ ಪಕ್ಷ ಎಂದು ಹೇಳಿರುವುದು ಈಗ ರಾಜ್ಯದಲ್ಲಿರುವ ಯಾವ ಪಕ್ಷವನ್ನೂ ಉದ್ದೇಶಿಸಿ ಅಲ್ಲ. ಅಂತಹದ್ದು ಇಲ್ಲದಿರುವ ಕಾರಣ, ಕೇಜ್ರಿವಾಲ್ ಅವರಂಥ ಯುವಕರು, ದೀದಿಯಂಥ ದಿಟ್ಟ ನಾಯಕತ್ವ ಗುಣವುಳ್ಳ ಎಲ್ಲರೂ ಎಚ್ಚರಗೊಳ್ಳಬೇಕಾದ ಸಮಯ ಇದು. ರವಿಕಿರಣ್ ಶೇಖರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT