ADVERTISEMENT

ವಾಚಕರ ವಾಣಿ | ಚುನಾವಣಾ ಕಾರ್ಯ: ಒತ್ತಡ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 20:47 IST
Last Updated 18 ನವೆಂಬರ್ 2022, 20:47 IST

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಶಾಲಾ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಬದಲಿಗೆ ಚುನಾವಣಾ ಆಯೋಗವು ಶಾಶ್ವತ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಶೋಭಾ ಎಸ್.ವಿ. ಅವರ ಆಶಯ (ವಾ.ವಾ., ನ. 18) ಬಹುತೇಕರದ್ದಾಗಿದೆ. ಈ ಕಾರ್ಯಕ್ಕೆ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೇ ನೇಮಕವಾಗಿದ್ದು, ಮಾತೃ ಇಲಾಖೆಯ ಕರ್ತವ್ಯ ಹಾಗೂ ಮತಗಟ್ಟೆ ಅಧಿಕಾರಿ ಕರ್ತವ್ಯದ ನಡುವೆ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಿದ್ದಾರೆ.

ವರ್ಷಕ್ಕೆ ನಾಲ್ಕು ತಿಂಗಳುಗಳ ಕಾಲ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ದೋಷಮುಕ್ತ ಮತದಾರರ ಪಟ್ಟಿಯ ನಿರ್ವಹಣೆಯನ್ನು ಏಕಕಾಲದಲ್ಲಿ ಶಿಕ್ಷಕರು ಹೇಗೆ ನಿಭಾಯಿಸಲು ಸಾಧ್ಯ? ಈಗಂತೂ ಶಿಕ್ಷಣ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಹಂತದ ಅಧಿಕಾರಿಗಳವರೆಗೂ ಈ ಕೆಲಸದ ಒತ್ತಡ ವಿಸ್ತರಿಸಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರು ಮತ್ತು ಮುಖ್ಯಸ್ಥರ ನಡುವಿನ ಮನಸ್ತಾಪಕ್ಕೂ ಕಾರಣವಾಗಿ ಆ ಮೂಲಕ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಆಯೋಗವು ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಿ. ಇದರೊಂದಿಗೆ ಕಲಿಕಾ ಪ್ರಕ್ರಿಯೆಯ ಮೇಲಿನ ಒತ್ತಡ ಕೊನೆಯಾಗಲಿ.
–ಮೆಹಬೂಬ್ ಮಠದ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT