ADVERTISEMENT

ವಾಚಕರ ವಾಣಿ: ಮಾನವೀಯ ಜೀವಕೇಂದ್ರಗಳ ವಿಸರ್ಜನೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 28 ಮೇ 2021, 19:30 IST
Last Updated 28 ಮೇ 2021, 19:30 IST

ರಾಜ್ಯದ ಎಲ್ಲ ಅಕಾಡೆಮಿ, ಪ್ರಾಧಿಕಾರ, ನಿಗಮ ಮತ್ತು ಮಂಡಳಿಗಳನ್ನು ಕೂಡಲೇ ವಿಸರ್ಜಿಸಬೇಕೆಂದು ಕೆಲವರು ಸರ್ಕಾರಕ್ಕೆ ಮನವಿ ಮಾಡಿರುವುದು (ವಾ.ವಾ., ಮೇ 28) ಒಳ್ಳೆಯ ಬೆಳವಣಿಗೆ ಅಲ್ಲ. ಇದು ಅನೇಕರನ್ನು ನಿರುದ್ಯೋಗಿಗಳನ್ನಾಗಿಸುತ್ತದೆ. ಕೋವಿಡ್ ಸಮಸ್ಯೆ ಅಂತರರಾಷ್ಟ್ರೀಯವಾದುದು. ಇಂದು ಬಂದಿದೆ, ನಾಳೆ ಹೋಗುತ್ತದೆ. ಅದಕ್ಕಾಗಿ ಇಂತಹ ಕ್ರಮಕ್ಕೆ ಮುಂದಾದರೆ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು’ ಎಂಬಂತೆ ಆಗುತ್ತದೆ.

ಸದಾ ಸ್ವಸ್ಥ ಸಮಾಜ, ಸ್ವಸ್ಥ ಪರಿಸರ ನಿರ್ಮಿಸಿ, ಅರಿವು- ಜಾಗೃತಿ ಮೂಡಿಸುವ, ಯುವಪೀಳಿಗೆಗೆ ಶಿಕ್ಷಣದ ಶಕ್ತಿಕೇಂದ್ರಗಳಾಗಿರುವ ಈ ಬೌದ್ಧಿಕ ವಲಯವು ಬಡಪಾಯಿ ಸಾಹಿತಿ, ಕಲಾವಿದರನ್ನು ಒಳಗೊಂಡಿದೆ ಮತ್ತು ಇವರನ್ನು ಪೋಷಿಸುವ ಅರೆಕಾಸಿನ ಅಕಾಡೆಮಿ, ಪ್ರಾಧಿಕಾರ, ನಿಗಮಗಳು ಆರ್ಥಿಕ ನೆರವೂ ಇಲ್ಲದೆ ಇತ್ತೀಚೆಗೆ ಸೊರಗುತ್ತಿವೆ. ಇಂತಹ ಸಂದರ್ಭದಲ್ಲಿಯೇ ಮಾನವೀಯ ಜೀವಕೇಂದ್ರಗಳು, ಕಲಾವಿದರು- ಸಾಹಿತಿಗಳ ಏಕೈಕ ಸಂಪರ್ಕ ಕೇಂದ್ರಗಳನ್ನೇ ವಿಸರ್ಜಿಸಿದರೆ, ‘ಸಾಹಿತ್ಯ, ಸಂಸ್ಕೃತಿ ಇಲ್ಲದ ಸಮಾಜ ಪ್ರಾಣಿಗಳ ಸಮಾಜದಂತೆ’ ಆಗುತ್ತದೆ. ಇವುಗಳನ್ನು ಹಾಳುಮಾಡುವುದು ಸುಲಭ- ಕಟ್ಟಲು ಸಾವಿರಾರು ಜನರ ಪರಿಕಲ್ಪನೆ, ಪರಿಶ್ರಮ ಇರುತ್ತದೆ. ಕೋವಿಡ್ ವಿಷಮ ಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸಲು, ಪರಿವರ್ತಿಸಲು, ಜಾಗೃತಿ ಮೂಡಿಸಲು ಸಾಹಿತ್ಯಿಕ, ಸಾಂಸ್ಕೃತಿಕ ಬಲ ತುಂಬಿ ಇವುಗಳನ್ನೇ ಬಳಸಿಕೊಳ್ಳಬೇಕು.

ಈ ಹಿಂದೆ ಬರಗಾಲದ ಸಂದರ್ಭದಲ್ಲಿ ಮೈಸೂರಿನಲ್ಲಿ ಆಯೋಜನೆಯಾಗಿದ್ದ ವಿಶ್ವಕನ್ನಡ ಸಮ್ಮೇಳನವನ್ನು ನಿಲ್ಲಿಸುವಂತೆ ಕೆಲವರು ಆಗ್ರಹಿಸಿದಾಗ, ಸಾಹಿತಿ ಶಿವರಾಮ ಕಾರಂತರು ‘ಬರ ಎಂದು ಮಸಾಲೆದೋಸೆ ತಿನ್ನುವುದನ್ನು ಬಿಟ್ಟಿದ್ದೀರಾ? ನಡೆಯಲಿ’ ಎಂದದ್ದು ಇಂತಹವರಿಗೆ ಒಂದು ಪಾಠ.

ADVERTISEMENT

ನಮ್ಮ ಶ್ರೀಮಂತ ಭಾರತೀಯ ಆಡಳಿತಾಧಿಕಾರಿಗಳು, ಕೋಟ್ಯಧೀಶರಾದ ಜನಪ್ರತಿನಿಧಿಗಳ ದುಂದುವೆಚ್ಚ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೋವಿಡ್ ಪರಿಹಾರ ನಿಧಿಗಳು, ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನಿಯವರ ಫಂಡ್‌ಗಳು ಇರುವಾಗ, ಬಡತನದಲ್ಲಿಯೇ ಸೊರಗುತ್ತಿರುವ ಕಲಾವಿದರು, ಸಾಹಿತಿಗಳ ಮೇಲೆ ಯಾರ ವಕ್ರದೃಷ್ಟಿಯೂ ಬೀಳದಿರಲಿ. ಸಮಾಜವಾದಿ ಚಳವಳಿಯ ಹಿನ್ನೆಲೆಯವರಾಗಿ ಇದರ ಮಹತ್ವ ತಿಳಿದವರಾದ ಮುಖ್ಯಮಂತ್ರಿ ಇಂತಹ ಮಾತಿಗೆ ಕಿವಿಯಾಗಬಾರದು.

-ಮಂಜಮ್ಮ ಜೋಗತಿ, ಗುಡಿಹಳ್ಳಿ ನಾಗರಾಜ, ಡಾ. ಎ.ಆರ್.ಗೋವಿಂದಸ್ವಾಮಿ, ಗೋಪಾಲಕೃಷ್ಣ ನಾಯರಿ, ಜೋಗಿಲ ಸಿದ್ಧರಾಜು, ಬಿ.ಸುರೇಶ, ಸಿ.ಕೆ.ಗುಂಡಣ್ಣ, ಡಿ.ಎಸ್.ಚೌಗಲೆ, ಸುರೇಶ ಶೆಟ್ಟಿ, ಜಿ.ರಾಜಣ್ಣ, ಬಸವಲಿಂಗಯ್ಯ ಹಿರೇಮಠ, ಬಿ.ಪರಶುರಾಂ, ವರಲಕ್ಷ್ಮಿ ಎನ್., ಚಂದ್ರಕಲಾ ಬಿದರಿ, ವೆಂಕಟರಾಜು, ದೇವರಾಜ,ರಾಜ್ಯ ಸಾಹಿತಿ, ಕಲಾವಿದರ ಕ್ಷೇಮಾಭಿವೃದ್ಧಿ ವೇದಿಕೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.