ADVERTISEMENT

ವಾತಕರ ವಾಣಿ | ದಸರಾ ಕವಿಗೋಷ್ಠಿ: ಬ್ಯಾರಿ ಭಾಷೆ ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 19:31 IST
Last Updated 27 ಸೆಪ್ಟೆಂಬರ್ 2022, 19:31 IST

ಮೈಸೂರು ದಸರಾ ಉತ್ಸವದ ಅಂಗವಾಗಿ ಏರ್ಪಡಿಸುವ ‘ದಸರಾ ಕವಿಗೋಷ್ಠಿ’ಯಲ್ಲಿ ಕನ್ನಡ ಕವಿಗಳ ಜೊತೆಗೆ ಪ್ರತಿವರ್ಷವೂ ಕರ್ನಾಟಕದ ಇತರ ಪ್ರಮುಖ ಭಾಷೆಗಳ ಕವಿಗಳಿಗೂ ಅವಕಾಶ ನೀಡಲಾಗುತ್ತದೆ. ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳ ಕವಿತೆಗಳಿಗೆ ಈ ವರ್ಷ ಅವಕಾಶ ನೀಡಲಾಗಿದೆ. ಆದರೆ ಕರಾವಳಿ ಕರ್ನಾಟಕದ ಬಹುಮುಖ್ಯ ಭಾಷೆಯಾದ ಬ್ಯಾರಿ ಭಾಷೆಯನ್ನು ಕಡೆಗಣಿಸಲಾಗಿದ್ದು, ಬ್ಯಾರಿ ಕವಿಗಳಿಗೆ ಅವಕಾಶ ನೀಡಿಲ್ಲ. ಇಂತಹ ಮಲತಾಯಿ ಧೋರಣೆ ಸರಿಯಲ್ಲ.

ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಜನರು ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. ನೂರಾರು ಕವಿಗಳು ಈ ಭಾಷೆಯಲ್ಲಿ ಕವಿತೆಗಳನ್ನು ರಚಿಸುತ್ತಿದ್ದಾರೆ. ಬ್ಯಾರಿ ಭಾಷೆಯ ಬೆಳವಣಿಗೆಗೆ ರಾಜ್ಯ ಸರ್ಕಾರವೇ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನೂ ರಚಿಸಿದೆ. ಕನ್ನಡ ಸಾಹಿತ್ಯಕ್ಕೆ ಬ್ಯಾರಿ ಮಾತೃಭಾಷೆಯ ಹತ್ತಾರು ಲೇಖಕರು ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದ ಮುಸ್ಲಿಂ ಹಿನ್ನೆಲೆಯ ಮಹತ್ವದ ಲೇಖಕರಲ್ಲಿ ಹೆಚ್ಚಿನವರು ಬ್ಯಾರಿ ಭಾಷಿಕರು. ದಸರಾ ಕವಿಗೋಷ್ಠಿ ಉಪಸಮಿತಿಗೆ ಇದ್ಯಾವುದೂ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ತಾರತಮ್ಯ ನೀತಿ ಅನುಸರಿಸಿದೆಯೇ?

ಅಧ್ಯಕ್ಷರೂ ಇಲ್ಲದೆ, ಪೂರ್ಣಾವಧಿ ರಿಜಿಸ್ಟ್ರಾರ್ ಕೂಡಾ ಇಲ್ಲದೆ ಅಕಾಡೆಮಿಯ ಚಟುವಟಿಕೆಗಳು ಕುಂಠಿತಗೊಂಡಿವೆ. ಇದ್ದ ಅಧ್ಯಕ್ಷರನ್ನು ಸರ್ಕಾರ ಹಠಾತ್ತಾಗಿ ವಜಾ ಮಾಡಿ ಹಲವು ತಿಂಗಳಾದವು. ಹೊಸ ಅಧ್ಯಕ್ಷರ ನೇಮಕದ ಬಗ್ಗೆಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಲಕ್ಷ್ಯ ಮನೋಭಾವ ಹೊಂದಿದೆ. ಬ್ಯಾರಿ ಭಾಷೆಯ ಕುರಿತ ಈ ತಾರತಮ್ಯವನ್ನು ನಾವು ಖಂಡಿಸುತ್ತೇವೆ.

ADVERTISEMENT

ಬಿ.ಎಂ.ಹನೀಫ್, ಟಿ.ಕೆ.ಷರೀಫ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.