ADVERTISEMENT

ವಾಚಕರ ವಾಣಿ: ಶುದ್ಧವಾದ ಆಚರಣೆ ನಮ್ಮದಾಗಲಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 22:00 IST
Last Updated 4 ನವೆಂಬರ್ 2021, 22:00 IST

ದೀಪಾವಳಿಗೆ ಪಟಾಕಿ ನಿಷೇಧ ಮಾಡಬೇಡಿ ಎಂದು ಸದ್ಗುರು‌ ಜಗ್ಗಿ ವಾಸುದೇವ್ ಹೇಳಿದ್ದಾರೆ (ಪ್ರ.ವಾ., ನ. 3). ‘ಮಕ್ಕಳು ಪಟಾಕಿಯ ಆನಂದ ಅನುಭವಿಸುವುದನ್ನು ತಡೆಯಲು ವಾಯುಮಾಲಿನ್ಯ ಕುರಿತಾದ ಕಾಳಜಿ ಸಕಾರಣವಲ್ಲ’ ಎಂದೂ ಅವರು ಹೇಳಿರುವುದನ್ನು ಓದಿ ಅಚ್ಚರಿಯಾಯಿತು. ಪಟಾಕಿಗಳು ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂತಿಳಿದಿರುವ ವಿಚಾರ. ‌ಪ್ರತಿವರ್ಷ ಅನೇಕ ಮಕ್ಕಳು ಪಟಾಕಿಗಳನ್ನು ಸುಡಲು ಹೋಗಿ ಕಣ್ಣು, ಮುಖಗಳನ್ನು ಸುಟ್ಟುಕೊಳ್ಳುತ್ತಲೇ ಇದ್ದಾರೆ. ಇನ್ನು ಕೆಲ ಮಕ್ಕಳು ಹಬ್ಬದ ನಂತರ ಅನಾರೋಗ್ಯದಿಂದ ಬಳಲುತ್ತಾರೆ. ಪಟಾಕಿಗಳಿಂದ ಮಕ್ಕಳ ಕೈಗಳಿಗೆ ಮೆತ್ತಿದ ವಿವಿಧ ರಾಸಾಯನಿಕಗಳು ಅವರ ಅನಾರೋಗ್ಯಕ್ಕೆ ಸಾಮಾನ್ಯ ಕಾರಣವೂ‌ ಆಗಿರುತ್ತವೆ. ಹಾಗಾದರೆ ಇವರ ಆನಂದ ಎಲ್ಲಿ ಹೋಯಿತು? ಜೊತೆಗೆ ಮಕ್ಕಳು ಪಟಾಕಿ ಸುಡುವುದನ್ನು ಆನಂದಿಸಬಹುದು. ಆದರೆ ಆ ಮಕ್ಕಳ ‍ಪೋಷಕರು ಮಾತ್ರ ಸದಾ ಆತಂಕದಲ್ಲೇ ಹಬ್ಬವನ್ನು ಆಚರಿಸುತ್ತಾರೆ ಎಂಬುದನ್ನು ಮರೆಯಬಾರದು.

ಮಕ್ಕಳಿಗೆ ಸಂತೋಷಕರ ವಾತಾವರಣವನ್ನು ನಿರ್ಮಿಸಬೇಕು ಮತ್ತು ಮಕ್ಕಳು ಆನಂದಿಸಬೇಕೆಂಬುದು ಅಕ್ಷರಶಃ ಸರಿ. ಆದರೆ ಹೀಗೆ ಕ್ಷಣಿಕ ಆನಂದಕ್ಕೆ ಇಡೀ ಬದುಕನ್ನೇ ಸುಟ್ಟುಕೊಂಡು ನರಳಬೇಕೆ?‌ ಇವೇ ಮಕ್ಕಳು ದೊಡ್ಡವರಾಗಿ ತಮ್ಮ ಮುಂದಿನ ಪೀಳಿಗೆಗೂ ಪಟಾಕಿ ಸುಡಿ ಜೊತೆಗೆ ಮಾಲಿನ್ಯ ಮಾಡಿ ಕಣ್ಣು ಮುಖಗಳನ್ನು ಸುಟ್ಟುಕೊಳ್ಳಿ ಎಂದು ಹೇಳಬೇಕೆ? ಪಟಾಕಿಗಳ ಬದಲಾಗಿ ಸುಂದರ ಆಕಾಶಬುಟ್ಟಿಗಳನ್ನು ಹಾರಿಬಿಡಬಹುದಲ್ಲವೆ? ಆಕಾಶಬುಟ್ಟಿ ಕೇವಲ ಆಟವಲ್ಲ, ಅದರೊಳಗೊಂದು ಅದ್ಭುತ ವಿಜ್ಞಾನ ಪಾಠವೂ ಇದೆ. ಅದೇ ತೆರನಾಗಿ ಮಣ್ಣಿನ ಹಣತೆಗಳನ್ನು ಮಕ್ಕಳೇ ತಯಾರಿಸುವಂತೆ ಮಾಡುವುದು ಕೂಡ ಮಕ್ಕಳಿಗೆ
ಮಣ್ಣಿನೊಂದಿಗಿನ ಬಂಧವನ್ನು,‌ ಅವರ ಕೌಶಲವನ್ನು ಮತ್ತು ಆನಂದವನ್ನು ಹೆಚ್ಚಿಸುತ್ತದೆ.

ಎಲ್ಲೆಲ್ಲೂ ಮಾಲಿನ್ಯದ ಮೆರವಣಿಗೆಯೇ ನಡೆಯುವಾಗ ಮಕ್ಕಳ ಕೈಯಿಂದ ಸಸಿಗಳನ್ನು ನೆಡಿಸಿ ಅವರನ್ನು ಹೊಸದಿಕ್ಕಿನಲ್ಲಿ ಆಲೋಚಿಸುವಂತೆ ಮಾಡಬೇಕು. ಈ ರೀತಿಯ ಪರಿಸರಸ್ನೇಹಿ ಆಲೋಚನೆಗಳನ್ನು ಮಕ್ಕಳಲ್ಲಿ ಬಿತ್ತಬೇಕಾದ ಅವಶ್ಯಕತೆ ಇದೆ. ಹಾಗಾಗಿ ಅಪಾಯಕಾರಿ ಮತ್ತು ಪರಿಸರಕ್ಕೆ ಮಾರಕವಾದ ಪಟಾಕಿ ಸಂಸ್ಕೃತಿಯನ್ನು ತ್ಯಜಿಸಿ ಶುದ್ಧವಾದ ಮತ್ತು ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸುವ ಆಚರಣೆಗಳತ್ತ ನಾವೆಲ್ಲ ಹೊರಳಬೇಕಿದೆ ಅಲ್ಲವೇ?

ADVERTISEMENT

ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.