ರಾಜ್ಯ ಸರ್ಕಾರವು ಈ ತಿಂಗಳ 10ರಿಂದ 24ರವರೆಗೆ ಲಾಕ್‌ಡೌನ್ ಘೋಷಿಸಿದೆ. ಅದಕ್ಕೆ ಯಾವ ವೈಜ್ಞಾನಿಕ ಹಿನ್ನೆಲೆ ಇದೆಯೋ ಗೊತ್ತಿಲ್ಲ. ಒಂದು ವೇಳೆ ಇದ್ದರೂ ಅದನ್ನು ಜನರಿಗೆ ತಿಳಿಸಿ ಹೇಳುವ ಪ್ರಯತ್ನವನ್ನು ಅದು ಮಾಡಿಲ್ಲ. ಹಾಗಾಗಿ ಇದರ ಬಗ್ಗೆ ನಮಗೆ ಕೆಲವು ಸ್ಪಷ್ಟೀಕರಣಗಳು ಬೇಕು. ಅವೆಂದರೆ:
ಲಾಕ್‌ಡೌನ್ ಅವಧಿಯನ್ನು ಯಾವ ಉದ್ದೇಶಕ್ಕಾಗಿ ಸರ್ಕಾರ ಬಳಸಿಕೊಳ್ಳುತ್ತದೆ? ಅಂದರೆ ಈ ಅವಧಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವ ಕಾರ್ಯಯೋಜನೆ ರೂಪಿಸಿಕೊಂಡಿದೆ? ಆರೋಗ್ಯ ಸೇವೆಯನ್ನು ಉತ್ತಮ ಪಡಿಸಿಕೊಳ್ಳಲು ಅದು ಏನೇನು ಯೋಜನೆಗಳನ್ನು ಹಾಕಿಕೊಂಡಿದೆ? ಆಸ್ಪತ್ರೆ, ಆಕ್ಸಿಜನ್, ಔಷಧಿ, ವೈದ್ಯಕೀಯ ಸಿಬ್ಬಂದಿಯಂಥ ಸೇವೆಗಳನ್ನು ಈಗಿರುವುದಕ್ಕಿಂತ ಹೇಗೆ ಸದೃಢಗೊಳಿಸುತ್ತದೆ? ಈಗಾಗಲೇ ಜರ್ಜರಿತವಾಗಿ ಹೋಗಿರುವ ಬಡವರು, ಕೂಲಿಕಾರ್ಮಿಕರು, ಗಾರ್ಮೆಂಟ್ಸ್ ನೌಕರರು, ಮೀನುಗಾರರು, ಟ್ಯಾಕ್ಸಿ, ಆಟೊ ಚಾಲಕರ ಬದುಕನ್ನು ಮೇಲೆತ್ತಲು ಸರ್ಕಾರದ ಬಳಿ ಯಾವ ಯೋಜನೆಗಳಿವೆ?
ಲಾಕ್‌ಡೌನ್ ಮುಗಿದ ತಕ್ಷಣ ಎಲ್ಲ ನಾಗರಿಕರಿಗೂ ಲಸಿಕೆ ಹಾಕಲು ತಳಮಟ್ಟದಿಂದಲೇ ಕಾರ್ಯಪಡೆಯನ್ನು ಸಜ್ಜುಗೊಳಿಸಲು ಈ ಅವಧಿಯನ್ನು ಬಳಸಿಕೊಳ್ಳುತ್ತದೆಯೇ? ಪಕ್ಕದ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಜನರನ್ನು ಕೋವಿಡ್ ಸಂಕಷ್ಟದಿಂದ ಮೇಲೆತ್ತಲು ಪಕ್ಷಭೇದ ಮರೆತು ಶ್ರಮಿಸುತ್ತಿವೆ. ತಮಿಳುನಾಡು ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಸ್ಟಾಲಿನ್ ಮೊತ್ತಮೊದಲನೆಯದಾಗಿ ಸಹಿ ಹಾಕಿದ ಫೈಲ್, ಪ್ರತೀ ಕುಟುಂಬಕ್ಕೂ ₹ 2 ಸಾವಿರದ ಕೊಡುಗೆ ಮತ್ತು ಉಚಿತ ವೈದ್ಯಕೀಯ ಸೇವೆಗೆ ಸಂಬಂಧಿಸಿದ್ದು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನೀರು ಮತ್ತು ವಿದ್ಯುತ್ ಬಿಲ್ ಮನ್ನಾ ಮಾಡಿದ್ದಲ್ಲದೆ, ಬಡವ ಬಲ್ಲಿದ ಎಂಬ ಭೇದವಿಲ್ಲದೆ ಪ್ರತೀ ಕುಟುಂಬಕ್ಕೂ ಪಡಿತರ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಆಂಧ್ರ ಪ್ರದೇಶದ ಜಗನ್ಮೋಹನ ರೆಡ್ಡಿ ಅವರು ಉಚಿತ ವೈದ್ಯಕೀಯ ಸೇವಾ ವ್ಯವಸ್ಥೆ ಮಾಡಿದ್ದಾರೆ. ನಮ್ಮ ರಾಜ್ಯ ನಮಗೇನು ಕೊಡಲಿದೆ?
ಉಷಾ ಕಟ್ಟೆಮನೆ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.