ADVERTISEMENT

ವಾಚಕರ ವಾಣಿ: ಅನಾಗರಿಕ ಪದ ಬಳಕೆ ತಕ್ಕುದಲ್ಲ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 15:08 IST
Last Updated 8 ಜನವರಿ 2021, 15:08 IST

ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಬಳಸಿರುವ ಪದಗಳು ಸಚಿವ ಸ್ಥಾನಕ್ಕೆ ತಕ್ಕವಲ್ಲ. ಅಧಿಕಾರಿಗಳನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡದ್ದಲ್ಲದೆ ‘ರ‍್ಯಾಸ್ಕಲ್, ಜಾಡಿಸಿ ಒದ್ದರೆ ನೋಡು’ ಎಂಬಂತಹ ಅನಾಗರಿಕ ಪದಗಳನ್ನು ಬಳಸಿದ್ದಾರೆ. ಖಾಸಗಿಯಾಗಿ ಜಗಳವಾಡುವಾಗ ಅಥವಾ ಬೀದಿಜಗಳದಲ್ಲಿ ಇಂಥ ಪದ ಬಳಕೆ ಆದರೂ ಅದು ಸರಿಯಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಇಂಥ ಮಾತು ಖಂಡಿತ ಕೂಡದು. ಹೊಣೆಗಾರಿಕೆ ಇಲ್ಲದ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಿಯಮಗಳಿವೆ. ಇಂಥ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸದೇ ಇರುವುದು ಸರ್ಕಾರದ ಕರ್ತವ್ಯಲೋಪಕ್ಕೆ ನಿದರ್ಶನ.

ಕೆಳಹಂತದ ನೌಕರರನ್ನು ನಿಕೃಷ್ಟವಾಗಿ ಕಾಣುವ ಹಕ್ಕು ಸಚಿವರಿಗಾಗಲೀ ಮೇಲಧಿಕಾರಿಗಳಿಗಾಗಲೀ ಇಲ್ಲ. ತಪ್ಪಿಗೆ, ಕರ್ತವ್ಯಲೋಪಕ್ಕೆ, ನಿರ್ಲಕ್ಷ್ಯಕ್ಕೆ ಸೇವಾ ನಿಯಮಗಳ ಅನ್ವಯ ಕ್ರಮ ಜರುಗಿಸುವ ಹಕ್ಕು, ಬಾಧ್ಯತೆ ಮಾತ್ರ ಇದೆ. ವ್ಯಕ್ತಿನಿಂದೆಗೆ ಯಾರಿಗೂ ಅವಕಾಶವಿಲ್ಲ.

–ಸಾಮಗ ದತ್ತಾತ್ರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.