ADVERTISEMENT

ವಾಚಕರ ವಾಣಿ | ಬಿಎಸ್‌ಎನ್‌ಎಲ್‌ ‘ಮುಗಿಸುವ’ ಧೋರಣೆ ಸರಿಯೇ?

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:30 IST
Last Updated 12 ಆಗಸ್ಟ್ 2020, 19:30 IST

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಾಗೂ ಏರ್ ಇಂಡಿಯಾ ಕಂಪನಿಗಳನ್ನು ರೋಗಗ್ರಸ್ತವೆಂದು ಹಳಿದು, ಬಿಎಸ್‌ಎನ್‌ಎಲ್‌ ತುಂಬ ದೇಶದ್ರೋಹಿಗಳೇ ಇರುವರೆಂದೂ ಅದನ್ನು ಖಾಸಗಿಯವರಿಗೆ ವಹಿಸಿ ಮುಗಿಸಿಬಿಡುವುದಾಗಿಯೂ ಸಂಸದ ಅನಂತಕುಮಾರ ಹೆಗಡೆ ಅವರು ಹೇಳಿದ್ದು ಓದಿ (ಪ್ರ.ವಾ., ಆ. 12) ಅತ್ಯಂತ ಆಘಾತವಾಯಿತು.

ನಮ್ಮ ಹೆಮ್ಮೆಯ ಇಸ್ರೊ ಹಾರಿಸಿದ ಉಪಗ್ರಹಗಳ ತರಂಗಾಂತರವನ್ನು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಮಾರಿ, ಮೊಬೈಲ್ ಟವರ್‌ಗಳೆಂಬ ಲೋಹದ ಅಸ್ತಿಪಂಜರವನ್ನಷ್ಟೇ ಬಿಎಸ್‌ಎನ್‌ಎಲ್‌ಗಾಗಿ ಉಳಿಸಿ, ಉತ್ತಮ ನೆಟ್‍ವರ್ಕ್ ಕೊಡಿ ಎಂದರೆ ಬಿಎಸ್‌ಎನ್‌ಎಲ್‌ ಸಿಬ್ಬಂದಿ ಏನು ಮಾಡಿಯಾರು? ನಮ್ಮ ತಾಯ್ನೆಲದ ಹೆಮ್ಮೆಯ ಕೂಸಾಗಿದ್ದ ಸಂಸ್ಥೆಯೊಂದು ರೋಗಗ್ರಸ್ತವಾಗಿದ್ದರೆ ಅದಕ್ಕೆ ಕಳವಳಗೊಂಡು, ಸುಸ್ಥಿತಿಗೆ ತರುವ ಕ್ರಮ ಕೈಗೊಳ್ಳುವುದು ಬಿಟ್ಟು ಅದನ್ನು ‘ಮುಗಿಸಿ’ ಖಾಸಗಿಯವರಿಗೆ ಮಾರಲು ಹೊರಡುವ ಧೋರಣೆಯು ಭವ್ಯಭಾರತದ ಭವಿಷ್ಯದ ಕುರಿತು ಆತಂಕ ಹುಟ್ಟಿಸುವಂತಿದೆ.

ಬಿಎಸ್‌ಎನ್‌ಎಲ್‌ ಉಳಿದರೆ ನಮ್ಮವರೇ ಆದ ಅದರ ಸಿಬ್ಬಂದಿಯ ಕೆಲಸ ಉಳಿಯುತ್ತದೆ, ಸರ್ಕಾರದ ಆದಾಯಕ್ಕೊಂದು ಮೂಲ ಒದಗುತ್ತದೆ. ಮಾಹಿತಿ- ಸೇವೆಗಾಗಿ ಸರ್ಕಾರ ತನ್ನದೇ ನಂಬಲರ್ಹ ಜಾಲವನ್ನು ಹೊಂದಿದ ಹಾಗೂ ಆಗುತ್ತದೆ. ಎಂದೇ ಈ ಸಂಕಟದ ಕಾಲದಲ್ಲಿ ‘ಆತ್ಮನಿರ್ಭರ್’ ಎನ್ನುವುದು ಖಾಸಗಿಪರ ಧೋರಣೆಯಾಗದೆ, ಸರ್ಕಾರಿ ಸಂಸ್ಥೆಗಳನ್ನು ಪುನರುಜ್ಜೀವನಗೊಳಿಸುವ ದೃಢ ನಿಶ್ಚಯವಾಗಬೇಕು. ಇದೇ ನೈಜ ದೇಶಪ್ರೇಮವೆಂದು ಜನರೂ ತಿಳಿದು, ತಿಳಿಸಿಕೊಡಬೇಕು.

ADVERTISEMENT

-ಡಾ. ಎಚ್.ಎಸ್.ಅನುಪಮಾ, ಕವಲಕ್ಕಿ, ಹೊನ್ನಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.