ADVERTISEMENT

ನಾಗರಪಂಚಮಿ: ಆಶಯ ಅರಿತು ನಡೆಯೋಣ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST

ಪ್ರತೀ ವರ್ಷ ಮಾನ್ಸೂನ್ ವೇಳೆಗೆಮಳೆನೀರು ಭೂಮಿಯಲ್ಲಿರುವ ಬಿಲಗಳಿಗೆ ನುಗ್ಗುವುದರಿಂದ, ಇತರ ಜೀವಿಗಳಂತೆ ಹಾವುಗಳೂ ಬಿಲಗಳಿಂದ ಹೊರಗೆ ಬರುತ್ತವೆ. ಜೊತೆಗೆ ಕೆಲವು ಜಾತಿಯ ಹಾವುಗಳಿಗೆ ಇದು ಸಂತಾನೋತ್ಪತ್ತಿ ಸಮಯವಾದ್ದರಿಂದ ಅವು ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ಕಾಣಿಸಿಕೊಳ್ಳುವ ಹಾವುಗಳು ಜನರ ಕೊಲ್ಲುವ ಅಥವಾ ಬೇಟೆಯಾಡುವ ಖಯಾಲಿಗೆ ಸುಲಭದ ತುತ್ತಾಗುತ್ತವೆ. ಒಂದೊಮ್ಮೆ ಇದು ಹೆಚ್ಚಾದರೆ ಭವಿಷ್ಯದಲ್ಲಿ ಹಾವುಗಳು ಭೂ ಆವಾಸದಿಂದ ಶಾಶ್ವತವಾಗಿ ನಿರ್ನಾಮಗೊಳ್ಳಬಹುದೆಂದು ಚಿಂತಿಸಿದ್ದ ನಮ್ಮ ಪೂರ್ವಿಕರು, ಬಹುಶಃ ಹಾವುಗಳ ಉಳಿವಿಗೋಸ್ಕರ ನಾಗರಪಂಚಮಿ ಹಬ್ಬವನ್ನು ಆಚರಣೆಗೆ ತಂದಿರಬಹುದು. ಹಾವುಗಳು ದೇವರು ಎನಿಸಿಕೊಂಡ ಮೇಲೆ ಅವುಗಳನ್ನು ಹಿಡಿದು ತಿನ್ನಲು ಅಥವಾ ಸಾಯಿಸಲು ಜನ ಹಿಂದೇಟು ಹಾಕುವುದರಿಂದ, ಅವುಗಳ ಸಂತತಿ ರಕ್ಷಣೆಯಾಗುತ್ತದೆ ಎಂಬ ಆಶಯ ಅವರಿಗೆ ಇದ್ದಿರಬಹುದು.

ಕಾಲ ಉರುಳಿದಂತೆ ಆಚರಣೆಯ ಆಶಯ ಹಿನ್ನೆಲೆಗೆ ಸರಿದು, ನಾಗರಕಲ್ಲಿಗೆ, ಹುತ್ತಕ್ಕೆ ಹಾಲೆರೆಯುವಷ್ಟು ಯಾಂತ್ರಿಕವಾಗಿ ಮುಂದುವರಿದಿದೆ. ಆದರೆ ಹಾಲು ಹಾವುಗಳ ಆಹಾರವಲ್ಲ. ಯಾವುದೇ ಜಾತಿಯ ಹಾವುಗಳೂ ಹಾಲನ್ನು ಕುಡಿಯುವುದಿಲ್ಲ. ಅಲ್ಲದೆ ಭಾರತದಲ್ಲಿ ಪ್ರತೀ ವರ್ಷ ಸಾವಿರಾರು ಎಳೆ ಕಂದಮ್ಮಗಳು ಅಪೌಷ್ಟಿಕತೆಯಿಂದ ಸಾವನ್ನುಪ್ಪುತ್ತಿವೆ. ಎಷ್ಟೋ ಅನಾಥರಿಗೆ ಹಾಲೆಂಬುದು ಕೈಗೆಟುಕದ ಅಮೃತವಾಗಿದೆ. ಆದ್ದರಿಂದ ಆಚರಣೆಯ ನೆಪದಲ್ಲಿ ಹಾಲನ್ನು ಮಣ್ಣುಪಾಲು ಮಾಡುವ ಬದಲು ಬಡಕುಟುಂಬಗಳಿಗೆ, ಮೂಕ ಪ್ರಾಣಿಗಳಿಗೆ ನೀಡಬಹುದು. ಆ ಮೂಲಕ ಒಂದು ದಿನದ ಹಸಿವನ್ನು ನೀಗಿಸಿದ ಸಾರ್ಥಕತೆ ನಮ್ಮದಾಗುತ್ತದೆ. ಇನ್ನು ಹಾವುಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಲು ವೈಜ್ಞಾನಿಕ ಪುಸ್ತಕಗಳನ್ನು ಓದಿಸುವುದು, ಡಾಕ್ಯುಮೆಂಟರಿ ಚಿತ್ರಗಳನ್ನು ವೀಕ್ಷಿಸುವುದು ಉತ್ತಮ. ಹಾವುಗಳ ಕುರಿತಾದ ಮೂಢನಂಬಿಕೆಗಳನ್ನು ಮೀರಿ ಅವುಗಳಿಗೂ ಬದುಕುವ ಅವಕಾಶ ಕಲ್ಪಿಸಿಕೊಡುವ ಮೂಲಕ ವರ್ಷಪೂರ್ತಿ ನಾಗರಪಂಚಮಿ ಹಬ್ಬವನ್ನು ಆಚರಿಸುವುದು ಸೂಕ್ತವಲ್ಲವೇ?

– ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.