ADVERTISEMENT

ವಾಚಕರ ವಾಣಿ- ನಂದಿನಿ ಉತ್ಪನ್ನ: ಮಾದರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 17:57 IST
Last Updated 21 ಫೆಬ್ರುವರಿ 2021, 17:57 IST

‘ನಂದಿನಿ’ ಉತ್ಪನ್ನಗಳ ಬಗ್ಗೆ ಪತ್ರಿಕೆಗಳಲ್ಲಿ ಬರುವ ಜಾಹೀರಾತಿಗೆ ಪೂರಕವಾಗಿ ಹೊರಗೆ ಅಂಗಡಿಗಳಲ್ಲಿ ಆ ಉತ್ಪನ್ನಗಳು ಸಿಗುತ್ತಿಲ್ಲ ಎಂಬ ನನ್ನ ಅನುಭವವನ್ನು ಹಂಚಿಕೊಂಡಿದ್ದೆ (ವಾ.ವಾ., ಫೆ. 17). ನನ್ನ ಆ ಪತ್ರಕ್ಕೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿಯವರು ಸ್ಪಂದಿಸುವ ನಿರೀಕ್ಷೆಯೇ ಇರಲಿಲ್ಲ. ಆದರೆ ಪತ್ರ ಪ್ರಕಟವಾದ ದಿನವೇ ನಂದಿನಿ ಉತ್ಪನ್ನಗಳ ಕ್ಷೇತ್ರ ನಿರ್ವಾಹಕರು, ಗ್ರಾಹಕ ಸೇವಾ ಕೇಂದ್ರದ ಪ್ರತಿನಿಧಿ, ನಂತರ ಮಾರುಕಟ್ಟೆ
ವ್ಯವಸ್ಥಾಪಕರು, ವ್ಯವಸ್ಥಾಪಕ ನಿರ್ದೇಶಕರು ಹೀಗೆ ಸಾಲು ಸಾಲಾಗಿ ಉನ್ನತ ಅಧಿಕಾರಿಗಳೇ ಕರೆ ಮಾಡಿ, ಅನನುಕೂಲಕ್ಕೆ ವಿಷಾದ ವ್ಯಕ್ತಪಡಿಸಿ, ಕ್ಷಮೆಯನ್ನೂ ಕೋರಿದರು. ಅತ್ಯಂತ ಸೌಜನ್ಯಯುತವಾಗಿ, ಬಹಳ ಕಳಕಳಿಯಿಂದ ಸ್ಪಂದಿಸಿ ದರು. ಮುಂದಿನ ದಿನಗಳಲ್ಲಿ ಯಾವ ಗ್ರಾಹಕರಿಗೂ ಇಂತಹ ಅನನುಕೂಲ ಮರುಕಳಿಸದೆಂಬ ಭರವಸೆಯನ್ನೂ ನೀಡಿದರು.

ಪ್ರಸ್ತುತ ಕಾಲಘಟ್ಟದಲ್ಲಿ, ಇಂತಹ ವ್ಯವಸ್ಥೆಯ ಮಧ್ಯೆಯೂ ಇಷ್ಟೊಂದು ಜವಾಬ್ದಾರಿ, ವಿವೇಕಯುತ ನಡವಳಿಕೆ
ಯನ್ನು ಕಂಡು ಅಚ್ಚರಿಯಾಯಿತು. ಇಂತಹ ಮನಃಸ್ಥಿತಿಯನ್ನು ಎಲ್ಲ ಅಧಿಕಾರಿ-ಸಿಬ್ಬಂದಿ ವರ್ಗದವರೂ ರೂಢಿಸಿಕೊಂಡರೆ ಯಾವ ಸಹಕಾರಿ ಸಂಸ್ಥೆಯೂ ಸಾರ್ವಜನಿಕ ಉದ್ದಿಮೆಯೂ ನಷ್ಟ ಹೊಂದುವುದಿಲ್ಲ,
ಮುಚ್ಚಬೇಕಾದಂತಹ ಸ್ಥಿತಿ ಒದಗುವುದಿಲ್ಲ ಮತ್ತು ಸಹಾಯಾನುದಾನ ಕೋರಿ ಸರ್ಕಾರದತ್ತ ಕೈಚಾಚುವ ಪ್ರಮೇಯವೂ ಬರುವುದಿಲ್ಲ. ‘ನಂದಿನಿ’ ಸಂಸ್ಥೆಯ ಅಧಿಕಾರಿ-ಸಿಬ್ಬಂದಿಗೆ ಹೃದಯಪೂರ್ವಕ ಅಭಿನಂದನೆ.

ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.