ADVERTISEMENT

ವಾಚಕರ ವಾಣಿ | ಭಾಷಾ ನೀತಿ ದೃಢವಿಲ್ಲದಿದ್ದರೆ...

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 19:30 IST
Last Updated 9 ಆಗಸ್ಟ್ 2020, 19:30 IST

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ರಂಗದ ಎಲ್ಲ ಹಂತಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಬರೀ ನೀತಿ ರೂಪಿಸಿದ ಮಾತ್ರಕ್ಕೆ ಭಾರಿ ಬದಲಾವಣೆ ಸಾಧ್ಯವಿಲ್ಲ. ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ಅದು ಸಾಧ್ಯ. ಈ ಹಿಂದಿನ ಶಿಕ್ಷಣ ಆಯೋಗಗಳ ಆಶಯಗಳು ಎಷ್ಟರಮಟ್ಟಿಗೆ ಕಾರ್ಯಗತಗೊಂಡಿವೆ ಎಂಬ ಚಿತ್ರಣ ನಮ್ಮ ಕಣ್ಣ ಮುಂದಿದೆ. ಅದರಲ್ಲೂ ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ನಮ್ಮ ದ್ವಂದ್ವಗಳು ಈಗಲೂ ಮುಂದುವರಿದಿವೆ.

ಕಲಿಕಾ ಮಾಧ್ಯಮ ಕುರಿತು ಶಿಕ್ಷಣ ಆಯೋಗದ ಮುಂದೆ ಅನೇಕ ಅಹವಾಲುಗಳು ಸಲ್ಲಿಕೆಯಾಗಿದ್ದವು. ಆದರೂ ಆಯೋಗವು ಹೊಸ ನೀತಿಯಲ್ಲಿ ಈ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ಬೋಧನಾ ಮಾಧ್ಯಮವು ಅವಕಾಶ ಇದ್ದಲ್ಲಿ ಕೊನೇಪಕ್ಷ 5ನೇ ತರಗತಿಯವರೆಗೆ, ಸಾಧ್ಯವಿದ್ದಲ್ಲಿ 8ನೇ ತರಗತಿಯವರೆಗೆ ಹಾಗೂ ಆನಂತರವೂ ಮನೆಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಇರಬೇಕು ಎಂದು ಹೇಳಿದೆ. ಈ ರೀತಿಯ ದೃಢವಿಲ್ಲದ ಭಾಷಾ ನೀತಿಯು ದೇಶಿ ಭಾಷೆಗಳಿಗೆ ಪೂರಕವಾಗಿ ಇರುವುದಿಲ್ಲ.

ನಮ್ಮಲ್ಲಿ ರಂಗೋಲಿ ಕೆಳಗೆ ನುಸುಳುವ ಇಂಗ್ಲಿಷ್‌ ಭಾಷೋದ್ಯೋಮ ಶಿಕ್ಣಣ ಸಂಸ್ಥೆಗಳು ಮತ್ತು ಅವುಗಳನ್ನು ರಕ್ಷಿಸುವ ಕಾನೂನು ವ್ಯವಸ್ಥೆ ಇರುವಾಗ, ಹೊಸ ನೀತಿಯ ಅನುಷ್ಠಾನ ಕಷ್ಟಸಾಧ್ಯವಾಗಿಯೇ ಉಳಿಯಲಿದೆ. ಹೊಸ ನೀತಿಯಲ್ಲಿ ತ್ರಿಭಾಷಾ ಸೂತ್ರವನ್ನು ಮುಂದುವರಿಸಿರುವುದರೊಂದಿಗೆ ಸಂಸ್ಕೃತ ಭಾಷಾ ಕಲಿಕೆಗೆ ಆದ್ಯತೆ ಕಲ್ಪಿಸಲಾಗಿದೆ. ತ್ರಿಭಾಷಾ ಸೂತ್ರ ಈ ಹಿಂದೆ ದೇಶದಾದ್ಯಂತ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಇವುಗಳೆಲ್ಲ ಕೊನೆಗೆ ಪ್ರಾದೇಶಿಕ ಭಾಷೆಗಳಿಗೆ ಕಂಟಕಪ್ರಾಯವಾಗುತ್ತವೆ. ಕೇಂದ್ರ ಸರ್ಕಾರವು ದೃಢ ನಿಲುವು ತಾಳಿ, ಅವಶ್ಯಬಿದ್ದರೆ ಕಾನೂನು ತಿದ್ದುಪಡಿ ಮೂಲಕ, ಕನಿಷ್ಠ ಒಂದರಿಂದ ಐದು ಅಥವಾ ಎಂಟನೆಯ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತಾದರೆ ಅದು ನಿಜಕ್ಕೂ ಹೊಸ ಶಿಕ್ಷಣ ನೀತಿ ಆದೀತು.

ADVERTISEMENT

–ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.