ADVERTISEMENT

ವಾಚಕರ ವಾಣಿ: ಶಿಕ್ಷಣ ರಂಗ ಎಡವಿದರೆ...

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:30 IST
Last Updated 6 ಜೂನ್ 2022, 19:30 IST

ರಾಷ್ಟ್ರೀಯ ಸಾಧನೆ ಸಮೀಕ್ಷೆ– 2021ರ ವರದಿಯ ಅಂಕಿಅಂಶ ಓದಿದರೆ ತಲೆಸುತ್ತಿ ಬರುವಂತಿದೆ. ಶಿಕ್ಷಣ ಕ್ಷೇತ್ರದ ಅಧೋಗತಿಯನ್ನು ತೆರೆದಿಟ್ಟಿದೆ. ಮಕ್ಕಳ ಕಲಿಕಾ ಸಾಧನೆ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಭಾಷಾ ಗ್ರಹಿಕೆಯ ವಿಚಾರದಲ್ಲಿ ಎಲ್ಲ ಸಾಮಾಜಿಕ ವರ್ಗಗಳ ವಿದ್ಯಾರ್ಥಿಗಳು ಹಾಗೂ ಎಲ್ಲ ರೀತಿಯ ಶಾಲೆಗಳ ಮಕ್ಕಳ ಸ್ಥಿತಿ ಶೋಚನೀಯವಾಗಿದೆ. ಹೀಗಾದರೆ ನಾಳೆಯ ಭಾರತ ಹೇಗಿರುತ್ತದೆ ಎಂದು ಊಹಿಸಬಹುದು. ಭಾಷೆಯ ಮೇಲೆ ಪ್ರಭುತ್ವ ಇರದಿದ್ದರೆ ಕೋರ್ ವಿಷಯ ಅರಿಯಲು, ಕಲಿಯಲು ಸಾಧ್ಯವೇ ಇಲ್ಲ. ಓದಲು, ಬರೆಯಲು, ಅರಿಯಲು ಗೊತ್ತಿಲ್ಲದವರಿಂದ ಬೇರೆ ಬೇರೆ ಕ್ಷೇತ್ರಗಳ ಬೆಳವಣಿಗೆ ಹೇಗೆ ಸಾಧ್ಯ?

ಭ್ರಷ್ಟಾಚಾರ, ಹಿಂಸೆ, ದರೋಡೆ, ಸುಲಿಗೆ, ಮೋಸ, ಹಸುಳೆಗಳ ಮೇಲೆ ಲೈಂಗಿಕ ದೌರ್ಜನ್ಯ ಇಂದು ಹೆಚ್ಚಾಗಲು ಶಿಕ್ಷಣದ ವೈಫಲ್ಯ ಕಾರಣ ಎನ್ನಲು ಅಡ್ಡಿಯಿಲ್ಲ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಅದಕ್ಕಾಗಿ ಪ್ರತೀ ತರಗತಿಯ ಪ್ರವೇಶ ಸಂಖ್ಯೆಯನ್ನು ಮಿತಿಗೆ ಒಳಪಡಿಸಬೇಕು. ಶಿಕ್ಷಕ-ವಿದ್ಯಾರ್ಥಿ ಅನುಪಾತವನ್ನು ಈಗಿರುವ 1:70ಕ್ಕೆ ಬದಲಾಗಿ 1:40ಕ್ಕೆ ನಿಗದಿಪಡಿಸಬೇಕು. ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ, ಕೌಶಲಗಳ ಬೆಳವಣಿಗೆಗೆ ಅನುವು ಮಾಡಿಕೊಡಬೇಕು. ಅದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಕಲಿಯುವ ಮನಸ್ಸು, ಹುಮ್ಮಸ್ಸನ್ನು ಉದ್ದೀಪನಗೊಳಿಸಬೇಕು. ಇದು ಕಲಿಸುವವರು ಮತ್ತು ಕಲಿಯುವವರನ್ನು ಒಂದು ಕಡೆಗೆ ತರುತ್ತದೆ. ಕೆಲಸ ಸರಳವಾಗುತ್ತದೆ. ಉದ್ದೇಶ ಈಡೇರುತ್ತದೆ. ಶಿಕ್ಷಣದ ಪಾಲುದಾರರು, ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು, ಸರ್ಕಾರ ಕ್ರಿಯಾಶೀಲ ಆಗಿರಬೇಕು. ಶಿಕ್ಷಣ ರಂಗ ಎಡವಿದರೆ ಎಲ್ಲವೂ ಕೆಡವಲ್ಪಡುತ್ತವೆ.

-ಬಿ.ಆರ್.ಅಣ್ಣಾಸಾಗರ, ಸೇಡಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT