ADVERTISEMENT

ಹೊಸ ಯೋಜನೆ ಯಾಕೆ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:15 IST
Last Updated 5 ಮಾರ್ಚ್ 2019, 20:15 IST

‘ಬಂಜಾರ ಸಮಾಜದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಹೊಸ ಯೋಜನೆ ರೂಪಿಸುತ್ತಿದ್ದು, ಇದಕ್ಕೆ ಸಮುದಾಯದ ಮುಖಂಡರು ಕೂಡ ಸಲಹೆ ನೀಡಬಹುದು’ ಎಂದು ಬಂಜಾರ ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 4).

ಗ್ರಾಮೀಣ ಜನರು ಪೇಟೆಗಳ ಕಡೆ ಮುಖ ಮಾಡಿರುವುದಕ್ಕೆ ಗ್ರಾಮೀಣ ಪ್ರದೇಶದಲ್ಲಿ ಸಮರ್ಪಕ ಉದ್ಯೋಗಾವಕಾಶಗಳ ಕೊರತೆ ಬಹುಮುಖ್ಯ ಕಾರಣ. ಆದ್ದರಿಂದ ಅದನ್ನು ತಪ್ಪಿಸಲು ಹೊಸ ಯೋಜನೆಗಳೇನೂ ಬೇಕಿಲ್ಲ. ಬದಲಿಗೆ, ಈಗಿರುವ ಹಲವು ಉದ್ಯೋಗ ಸಂಬಂಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಆಗಬೇಕಾಗಿದೆ. ದೇಶದ ಶೇ 15ಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಫಲಾನುಭವಿಗಳಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಹಲವು ಉದ್ದೇಶಗಳಲ್ಲಿ, ಗ್ರಾಮೀಣ ವಲಸೆಯನ್ನು ತಡೆಗಟ್ಟುವುದು ಕೂಡ ಒಂದು.

ಆದರೆ, ಕನಿಷ್ಠ ಕೂಲಿಗಿಂತ ಕಡಿಮೆ ಕೂಲಿಯ ದರ ನಿಗದಿ, ಕೂಲಿ ಹಣ ಪಾವತಿಯಲ್ಲಿ ವಿಳಂಬ, ಕಾಮಗಾರಿಗಳ ಅನುಷ್ಠಾನಕ್ಕೆ ಮಾನವ ಶಕ್ತಿಯ ಬದಲಿಗೆ ಯಂತ್ರಗಳನ್ನು ಬಳಸುವುದು ಇವೇ ಮೊದಲಾದ ಕಾರಣಗಳಿಂದ ಕಾರ್ಯಕ್ರಮವು ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ. ನಿರುದ್ಯೋಗಿಗಳಿಗೆ ಅವರವರ ಹಳ್ಳಿಗಳಲ್ಲೇ ಸೂಕ್ತ ಕಾಮಗಾರಿಗಳನ್ನು ಕೈಗೊಂಡು, ಸಮರ್ಪಕ ಕೂಲಿ ನಿಗದಿಪಡಿಸಿ, ಬೇಡಿಕೆಗೆ ತಕ್ಕಂತೆ ಯೋಜನೆ ಅನುಷ್ಠಾನಗೊಂಡರೆ ಜನರಿಗೆ ಕೃಷಿಕೂಲಿಯ ಜೊತೆಗೆ 100 ದಿನಗಳ ಕೆಲಸವೂ ದೊರೆತು ಹಳ್ಳಿಯಲ್ಲಿನ ನಿರುದ್ಯೋಗ ಸಮಸ್ಯೆ ದೂರಾಗುತ್ತದೆ.

ADVERTISEMENT

ಆನಂದ ಎನ್.ಎಲ್., ಅಜ್ಜಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.