ADVERTISEMENT

ಸಂಸದರ ಸೈಕಲ್‌ ಸವಾರಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 19:13 IST
Last Updated 23 ಜುಲೈ 2021, 19:13 IST

ನಮ್ಮ ಸಂಸದ ಡಿ.ಕೆ.ಸುರೇಶ್‌ ಮೊನ್ನೆ ಸಂಸತ್‌ ಅಧಿವೇಶನಕ್ಕೆ ಸೈಕಲ್‌ ಮೇಲೆ ಹೋದರೆಂಬ ಸುದ್ದಿ ಓದಿ ನನ್ನಂಥ ಅನೇಕ ಪರಿಸರಪ್ರೇಮಿಗಳಿಗೆ ತುಂಬ ಸಂತೋಷವಾಗಿದೆ. ಪೆಟ್ರೋಲ್‌, ಡೀಸೆಲ್‌ ಸುಡುವುದರಿಂದ ಇಡೀ ಭೂಮಿಯ ತಾಪಮಾನ ಏರುತ್ತಿದೆ; ನೆರೆ ಹಾವಳಿ, ಸುಂಟರಗಾಳಿ, ತೀವ್ರ ಬರಗಾಲ, ಕಾಡಿಗೆ ಬೆಂಕಿ, ಭೂಕುಸಿತಗಳಂಥ ಸಂಕಟಗಳ ವರ್ತಮಾನ ಎಲ್ಲ ದೇಶಗಳಿಂದ ದಿನೇ ದಿನೇ ಬರುತ್ತಿದೆ. ಇದರ ಕುರಿತು ಜನಜಾಗೃತಿ ಮೂಡಿಸಲೆಂದು ಬ್ರಿಟನ್‌, ಕೆನಡಾ, ನಾರ್ವೆ ದೇಶಗಳ ಪ್ರಧಾನಮಂತ್ರಿಗಳು ಅದೆಷ್ಟೊ ಬಾರಿ ಸೈಕಲ್‌ ಸವಾರಿ ಮಾಡಿದ್ದಾರೆ.

ನೊಬೆಲ್‌ ವಿಜ್ಞಾನಿ ವೆಂಕಟರಾಮನ್‌ ರಾಮಕೃಷ್ಣನ್‌ ಕೂಡ ಬೆಂಗಳೂರಿಗೆ ಬಂದಾಗ ಐಐಎಸ್‌ಸಿ ಕ್ಯಾಂಪಸ್‌ನಲ್ಲಿ ಸೈಕಲ್‌ ತುಳಿದೇ ಸುತ್ತಿದ್ದಾರೆ. ಪೆಡಲ್‌ ತುಳಿಯುವುದು ನಮಗೂ ಒಳ್ಳೆಯದು, ಜಗತ್ತಿಗೂ ಒಳ್ಳೆಯದೆಂಬ ಪ್ರಾತ್ಯಕ್ಷಿಕೆಯನ್ನು ನಮ್ಮ ಒಬ್ಬ ಸಂಸದರಾದರೂ ತೋರಿಸಿದ್ದು ಇದು ಇತರ ಸಂಸದರಿಗೆ, ಶಾಸಕರಿಗೆ, ಪಂಚಾಯಿತಿ ಸದಸ್ಯರಿಗೆ, ಮಾಸ್ತರರುಗಳಿಗೆ, ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಸ್ವತಃ ಡಿ.ಕೆ.ಸುರೇಶ್‌ ತಾವು ಪ್ರತಿನಿಧಿಸುವ ಮತಕ್ಷೇತ್ರ
ದಲ್ಲಿ ಸುತ್ತುವಾಗ ಮಾಮೂಲು ಹತ್ತಾರು ಕಾರುಗಳ ಮೆರವಣಿಗೆಯ ಬದಲು ಸೈಕಲ್‌ ತುಳಿದರೆ ಬಿಡದಿ, ರಾಮನಗರ, ಚನ್ನಪಟ್ಟಣಗಳ ಯುವಜನರಿಗೂ ಮಾರ್ಗ ತೋರಿದಂತಾಗುತ್ತದೆ.

ನಾಗೇಶ ಹೆಗಡೆ, ಕೆಂಗೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.