ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ವಾಚಕರ ವಾಣಿ
Published 30 ಸೆಪ್ಟೆಂಬರ್ 2025, 22:30 IST
Last Updated 30 ಸೆಪ್ಟೆಂಬರ್ 2025, 22:30 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಆಟ–ರಾಜಕೀಯ: ಪ್ರಬುದ್ಧ ವಿಶ್ಲೇಷಣೆ

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಕ್ರೀಡಾಸ್ಫೂರ್ತಿ ಮಣ್ಣುಪಾಲಾದ ಕುರಿತ ‘ಪ್ರಜಾವಾಣಿ’ ಸಂಪಾದಕೀಯ (ಸೆ. 30) ನೇರವಾಗಿದೆ, ನಿಖರವಾಗಿದೆ ಮತ್ತು ಪ್ರಬುದ್ಧವಾಗಿದೆ. ಎರಡೂ ದೇಶಗಳ ತಂಡಗಳು ಪ್ರಜ್ಞಾಪೂರ್ವಕವಾಗಿಯೇ ಕ್ರಿಕೆಟ್ ಧರ್ಮಕ್ಕೆ ಅಧರ್ಮವೆಸಗಿದ್ದನ್ನು; ಸ್ವಾಧ್ಯಾಯ ನಾಶವಾಗಿರುವುದನ್ನೂ; ಒಂದು ತಪ್ಪನ್ನು ಇನ್ನೊಂದು ತಪ್ಪಿನಿಂದ ಸರಿಪಡಿಸುವ ಪ್ರಯತ್ನವನ್ನು ವಸ್ತುನಿಷ್ಠೆಯಿಂದ ಅವಲೋಕಿಸಲಾಗಿದೆ. ಎರಡೂ ದೇಶಗಳ ರಾಜಕೀಯ ಮುಖಂಡರು ಆಟಗಾರರ ಮುಖವಾಡ ತೊಟ್ಟು ಬ್ಯಾಟು ಮತ್ತು ಬಾಲನ್ನು ಹಿಡಿದಂತಿರುವ ವಿವರಗಳು ಕಣ್ಣಿಗೆ ಕಟ್ಟುವಂತಿವೆ. ಆಟಗಾರರ ವರ್ತನೆಯನ್ನು ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿ ಕೊಂಡಿರುವ ರೀತಿಯನ್ನು ಸಂಪಾದಕೀಯ ಖಂಡಿಸಿರುವುದು, ಪಾಕಿಸ್ತಾನದ ಸಚಿವ ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾದ ಮೊಹ್ಸಿನ್ ನಕ್ವಿ ಅವರ ಅಪ್ರಬುದ್ಧ ನಡವಳಿಕೆ ಯನ್ನು ಎತ್ತಿತೋರಿಸಿರುವ ರೀತಿ ಶ್ಲಾಘನೀಯ. ಎರಡೂ ದೇಶಗಳ ರಾಜಕೀಯ ಅಸ್ವಸ್ಥತೆಯನ್ನು ಮತ್ತು ಅತಿವರ್ತನೆಯನ್ನು ಕ್ರಿಕೆಟ್ ಮೂಲಕ ನೋಡಬಹುದೆಂದು ಸಂಪಾದಕೀಯ ಅದ್ಭುತವಾಗಿ ನಿರೂಪಿಸಿದೆ.

ADVERTISEMENT

-ಸಿ.ಎಚ್. ಹನುಮಂತರಾಯ, ಬೆಂಗಳೂರು

ಕಲ್ತುಳಿತ ತಡೆಗೆ ಮಾರ್ಗಸೂಚಿ ಅಗತ್ಯ 

ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ದೇಶವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಸಮಾವೇಶ, ಪ್ರಚಾರಸಭೆ, ವಿಜಯೋತ್ಸವ, ಧಾರ್ಮಿಕ ಸಮಾರಂಭ ನಡೆಸಲು ಅನುಮತಿ ನೀಡುವಾಗ ಮುಂಜಾಗ್ರತಾ ಕ್ರಮಗಳ ಪಾಲನೆಗೆ ಹೊಸ ಮಾರ್ಗಸೂಚಿ ರೂಪಿಸಬೇಕಿದೆ. ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ವಿದ್ಯುತ್ ತಂತಿಗಳ ನಿರ್ವಹಣೆ, ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ವೈದ್ಯರ ನಿಯೋಜನೆ, ಆ್ಯಂಬುಲೆನ್ಸ್ ಸೇವೆ... ಇಂತಹ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಬೇಕಿದೆ.

-ಹರೀಶ ಎಸ್., ಶಿರಾ 

ಬಾಡಿಗೆದಾರರು ಹುಷಾರಾಗಿರಬೇಕು

ಸಣ್ಣ ನಿವೇಶನಗಳಲ್ಲಿ ಕಾನೂನುಬಾಹಿರವಾಗಿ ಬೆಂಕಿ ಪೊಟ್ಟಣದಂತೆ ಮಹಡಿಗಳು ತಲೆ ಎತ್ತುತ್ತಿವೆ. ಇದರಿಂದ ಕಟ್ಟಡ ವಾಲುವುದು, ಬಿರುಕು ಬಿಡುವುದು, ಕುಸಿಯುವುದು ವರದಿಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದೇ ಇದಕ್ಕೆ ಕಾರಣ. ಕಟ್ಟಡಗಳ ಮಾಲೀಕರಂತೂ ಹೆಚ್ಚಿನ ಬಾಡಿಗೆಯ ದುರಾಸೆಯಿಂದ ಕಟ್ಟಡಗಳನ್ನು ಕಟ್ಟುತ್ತಲೇ ಇರುತ್ತಾರೆ. ಅಂತಹ ಕಟ್ಟಡಗಳ ಆಸುಪಾಸಿನಲ್ಲಿ ನೆಲಸಿರುವ ಜನರ ಪ್ರಾಣ, ಆಸ್ತಿಪಾಸ್ತಿಗೆ ಅಪಾಯ ಇರುತ್ತದೆ. ಬಾಡಿಗೆದಾರರು ಕೂಡ ಮನೆ ಹುಡುಕುವಾಗ ಜಾಗರೂಕರಾಗಿರಬೇಕಿದೆ.

-ಬಿ.ಎನ್. ಭರತ್, ಬೆಂಗಳೂರು 

ಸರ್ವಸ್ಪರ್ಶಿ ನೈಜ ಕಥೆಗಳನ್ನು ಪೋಷಿಸಿ

‘ನಮ್ಮನ್ನು ಆಳುತ್ತಿರುವ ಕಥೆಗಳು’ ಲೇಖನ (ಲೇ: ಎಸ್. ನಟರಾಜ ಬೂದಾಳು,
ಪ್ರ.ವಾ., ಸೆ. 30) ಓದಿದಾಗ ಆಶ್ಚರ್ಯ ವಾಯಿತು. ಕಥೆ ಹೇಳುವ ಮತ್ತು ಆಲಿಸುವ ಗುಣ ಮಾನವ ವಿಕಾಸದ ಭಾಗವಾಗಿದೆ. ತಮ್ಮ ಬದುಕಿಗೆ ಬೇಕಾದ ಜ್ಞಾನ, ಕೌಶಲ ಮತ್ತು ಮೌಲ್ಯಗಳನ್ನೆಲ್ಲ ಕಥೆಗಳ ಮೂಲಕ ಹಂಚಿಕೊಳ್ಳುತ್ತಲೇ
ಜಗತ್ತಿನಾದ್ಯಂತ ನಾಗರಿಕತೆಗಳು ಬೆಳೆದುಬಂದಿವೆ. ಆ ಮೂಲಕವೇ ವ್ಯಕ್ತಿ–ಕುಟುಂಬ, ಊರು–ಕೇರಿ, ಸಮಾಜ–ದೇಶ ಎಲ್ಲವೂ ತಮ್ಮ ಸ್ಮೃತಿ ಮತ್ತು ಗುರುತುಗಳನ್ನು ಉಳಿಸಿಕೊಳ್ಳುವುದು. ಮಾನವನ ಕಲ್ಪನಾ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಸದಾ ವಿಸ್ತರಿಸುತ್ತ, ಕರುಣೆ, ಸಹನೆ, ಸಹಕಾರ, ಏಕತೆಯಂಥ ಮೌಲ್ಯಗಳನ್ನು ಪೋಷಿಸಿ ಸಮುದಾಯಗಳನ್ನು ಈಗಲೂ ಬೆಳೆಸುತ್ತಿರುವುದು ಕಥೆಗಳೇ. ಸಮಾಜದ ನಂಬಿಕೆ–ನಡವಳಿಕೆಗಳನ್ನು ನಿರಂತರ ಕಟ್ಟುವ ಹಾಗೂ ಮುರಿಯುವ ಪ್ರಕ್ರಿಯೆಗಳನ್ನು ಈ ಕಥೆಗಳು ನಿರ್ವಹಿಸುವುದರಿಂದ ಅಲ್ಲೊಂದು ಚಲನಶೀಲ ಸಂಸ್ಕೃತಿ ರೂಪುಗೊಳ್ಳುತ್ತದೆ. ಹೀಗಾಗಿ, ಕಥೆಗಳು ಯಾವುದೇ ಕಾಲ–ದೇಶದ ಸಹಜಗುಣವೇ ಸರಿ. ಸಮಸ್ಯೆಯಿರುವುದು ಕಥೆ ಎಂಬ ತತ್ತ್ವದಲ್ಲಲ್ಲ; ಕಥೆಯ ಸ್ವರೂಪ ಹಾಗೂ ಪರಿಣಾಮಗಳನ್ನು ನಿರ್ದೇಶಿಸುವ ಅಧಿಕಾರ ಹಾಗೂ ಸಾಂಸ್ಕೃತಿಕ ರಾಜಕಾರಣ ದಲ್ಲಿ. ಎಲ್ಲ ದೇಶ–ಕಾಲಗಳಲ್ಲೂ ಕಥೆಗಳನ್ನು ಕೆಲವರ ಅನುಕೂಲಕ್ಕಾಗಿ ಪ್ರಭಾವಿಸುವ ರಾಜಕೀಯ ಇದ್ದೇ ಇದೆ. ಜಗತ್ತಿನ ಯಾವುದೇ ಧರ್ಮ, ದೇಶ, ಸಿದ್ಧಾಂತವು ಇದಕ್ಕೆ ಹೊರತಲ್ಲ. 

-ಕೇಶವ ಎಚ್. ಕೊರ್ಸೆ, ಶಿರಸಿ

ಕನ್ನಡ ಗೊತ್ತಿಲ್ಲದ, ಕಲಿಯದ ಉದ್ಧಟತನ

‘ಕನ್ನಡ್ ಗೊತ್ತಿಲ್ಲ’, ‘ಹಿಂದಿ ಮೆ ಭೋಲೊ’ – ಬೆಂಗಳೂರಿನಲ್ಲಿ ಪ್ರತಿದಿನ ಉತ್ತರ ಭಾರತೀಯರ ಇಂಥ ಉದ್ಧಟತನ ವಿಪರೀತವಾಗುತ್ತಿದೆ. ಬಹಳಷ್ಟು ಜನ ಎರಡು ಮೂರು ದಶಕಗಳಿಂದ ಇಲ್ಲೇ ನೆಲಸಿದ್ದರೂ ಒಂದೂ ಕನ್ನಡ ಪದ ಕಲಿತಿರುವು ದಿಲ್ಲ. ಈ ವಿದ್ಯಮಾನವನ್ನು ಗಮನಿಸಿದರೆ, ಕೆಲವೇ ವರ್ಷಗಳಲ್ಲಿ ಕನ್ನಡ ವಿನಾಶದ ಅಂಚಿಗೆ ತಲಪಿದರೆ ಆಶ್ಚರ್ಯಪಡಬೇಕಾಗಿಲ್ಲ. ಗೋಕಾಕ್ ಮಾದರಿ ಚಳವಳಿ ಈಗ ಹಿಂದಿಗಿಂತಲೂ ಹೆಚ್ಚು ಅವಶ್ಯ ಎನಿಸುತ್ತದೆ.

-ಹೆಚ್.ವಿ. ಶ್ರೀಧರ್, ಬೆಂಗಳೂರು 

ಸಮೀಕ್ಷೆ: ಅವಸರದ ಹೆರಿಗೆ ಆಗದಿರಲಿ 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಮನೆಗಳಿಗೆ ಆಗಮಿಸುತ್ತಿರುವ
ಸಮೀಕ್ಷಾದಾರರು ತ್ವರಿತಗತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಧಾವಂತ ತೋರುತ್ತಿದ್ದಾರೆ. ಸರ್ಕಾರದ ಆದೇಶ ಪಾಲಿಸುವ ಅವರ ಆತುರ ಸರಿಯಲ್ಲ. ನಿಯಮಗಳನ್ನು ಗಾಳಿಗೆ ತೂರಿ ಬಹುತೇಕ ಕಾಲಂಗಳನ್ನು ತಾವೇ ತಮಗೆ ಬೇಕಾದ‌ಂತೆ ಭರ್ತಿ ಮಾಡುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತ ಮನೆಯವರಿಗೆ, ಸಮೀಕ್ಷಾದಾರರಿಗೆ ನೀಡಿರುವ ಆ್ಯಪ್‌ನಲ್ಲಿ ಏನಿದೆ ಎಂಬ ಮಾಹಿತಿ‌ ತಿಳಿಯುವುದಿಲ್ಲ. ಸಮೀಕ್ಷೆಯು ಅವಸರದ ಹೆರಿಗೆ ಆಗದಿರಲಿ. 

-ಸುರೇಂದ್ರ ಪೈ, ಭಟ್ಕಳ

ಗಂಡಾ‘ಗುಂಡಿ’

ಹಳೇ ಮಾತು:

ಸಾವಿಲ್ಲದ ಮನೆಯ

ಸಾಸಿವೆ ತಾ...

ಹೊಸ ಮಾತು:

ಗುಂಡಿಗಳೇ ಇಲ್ಲದ

ಬೀದಿಗಳಲ್ಲಿ

ಓಡಾಡಿಕೊಂಡು ಬಾ!

- ಎಸ್. ಭಗವತಿ, ಗೊರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.