ADVERTISEMENT

ವಾಚಕರ ವಾಣಿ | ಮಂಗಳವಾರ, ಮಾರ್ಚ್ 07, 2023

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
   

ಸಂಗಾತಿಯ ಆಯ್ಕೆಗೂ ಸ್ವಾತಂತ್ರ್ಯವಿಲ್ಲವೇ?
ದೇಶದಲ್ಲಿ ಸಂವಿಧಾನ ಜಾರಿಯಾಗಿ ಏಳು ದಶಕಗಳು ಕಳೆದರೂ ಎಷ್ಟೋ ಜನರಿಗೆ ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಸ್ವಾತಂತ್ರ್ಯವಿಲ್ಲ. ಪ್ರೀತಿ ಎನ್ನುವುದು ಜಾತಿ, ಧರ್ಮವನ್ನು ನೋಡಿ ಹುಟ್ಟುವುದಲ್ಲ. ಯಾರ ಮೇಲೆ ಯಾವಾಗ ಬೇಕಾದರೂ ಹುಟ್ಟಬಹುದಾದ ಪ್ರೀತಿಯದು. ಆದರೆ ನಮ್ಮ ಸಮಾಜದಲ್ಲಿ ಅಂತರ್ಜಾತಿ ವಿವಾಹವಾದರೆ, ತಮ್ಮದಲ್ಲದ ಧರ್ಮದವರನ್ನು ಪ್ರೀತಿಸಿ ಮದುವೆಯಾದರೆ ಬಹಿಷ್ಕಾರ ಹಾಕುವ, ಅವರ ಹತ್ಯೆಗೂ ಮುಂದಾಗುವಂತಹ ಪ್ರಕರಣಗಳನ್ನು ಕಾಣುತ್ತಿದ್ದೇವೆ.

ಅಂತಹದ್ದೇ ಪ್ರಕರಣವು ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಡೆದಿರುವುದು (ಪ್ರ.ವಾ., ಮಾರ್ಚ್‌ 5) ಬೇಸರ ತರಿಸಿತು. ತಾಲ್ಲೂಕಿನ ಕುಣಗಳ್ಳಿಯ ಉಪ್ಪಾರಶೆಟ್ಟಿ ಸಮುದಾಯಕ್ಕೆ ಸೇರಿದ ಗೋವಿಂದರಾಜು ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೂವಿನಕೊಪ್ಪಲು ಗ್ರಾಮದ ಪರಿಶಿಷ್ಟ ಜಾತಿಯ ಶ್ವೇತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕುಣಗಳ್ಳಿಯ ಯಜಮಾನರು ದಂಪತಿಗೆ ₹ 6 ಲಕ್ಷ ದಂಡ ವಿಧಿಸಿ ಸಾಮಾಜಿಕ ಬಹಿಷ್ಕಾರ ಹಾಕಿರುವುದು ದುರದೃಷ್ಟಕರ. ಇಂತಹದ್ದು ದೇಶದೆಲ್ಲೆಡೆ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಯಾವಾಗ? ಯಾರನ್ನೇ ಆಗಲಿ ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದಿಂದ ವಂಚಿಸಬೇಕೇಕೆ?
–ಭೀಮಣ್ಣ ಹತ್ತಿಕುಣಿ, ಯಾದಗಿರಿ

**

ADVERTISEMENT

ಯೋಗ್ಯ ಸಂಸ್ಥೆಗಳನ್ನು ರಕ್ಷಿಸಿ
ಯಾವುದೋ ತಾಂತ್ರಿಕ ಕಾರಣಕ್ಕೆ ಮೈಸೂರು ಸ್ಯಾಂಡಲ್ ಸೋಪಿನ ಬಗ್ಗೆ ನನ್ನ ಬಂಧುವೊಬ್ಬರು ನಕಾರಾತ್ಮಕ ಹೇಳಿಕೆ ನೀಡಿದಾಗ, ನಾನು ಸಹಜವಾಗಿ ಉದ್ವೇಗಕ್ಕೆ ಒಳಗಾಗಿದ್ದೆ. ಅವರೊಟ್ಟಿಗೆ ಜಗಳಕ್ಕೂ ಬಿದ್ದಿದ್ದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯ (ಕೆಎಸ್‌ಡಿಎಲ್‌) ಉತ್ಪನ್ನವಾದ ಮೈಸೂರು ಸ್ಯಾಂಡಲ್ ಬರೀ ಸೋಪಲ್ಲ, ಅದು, ನಮ್ಮ ಶ್ರೀಗಂಧ, ನಮ್ಮ ನೆಲದ ಸೊಗಡು, ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್‌, ನಮ್ಮ ಸರ್ ಎಂ.ವಿಶ್ವೇಶ್ವರಯ್ಯ ಅವರೆಲ್ಲರನ್ನೂ ಒಳಗೊಂಡ ಭಾವಕೋಶದ ಕಾಣಿಕೆ. ‘ಮಾಡಾಳ್‌ ವಿರೂಪಾಕ್ಷಪ್ಪ ಅವರಿಂದ ಈಗ ಈ ಸೋಪನ್ನೂ ಉಪಯೋಗಿಸಲು ಹಿಂಜರಿಯುವಂತಾಗಿದೆ’ ಎಂಬ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಸಂಕಟ (ಕಿಡಿನುಡಿ, ಪ್ರ.ವಾ., ಮಾರ್ಚ್‌ 6) ನನ್ನದೂ ಮತ್ತು ಲಕ್ಷಾಂತರ ಜನರದೂ ಆಗಿದೆ.

ನಮ್ಮ ಕನ್ನಡ ನೆಲದ ಹೆಮ್ಮೆಯ ಭಾಗವೇ ಆಗಿರುವ ಈ ಸೋಪಿಗೆ, ಬಹುದೊಡ್ಡ ಮಾರುಕಟ್ಟೆಯೆಂದರೆ ತೆಲುಗುನಾಡು. ನಮ್ಮ ಸ್ಯಾಂಡಲ್ ಸೋಪು ತೆಲುಗು ಜನರ ಪ್ರಮುಖ ಕಣ್ಮಣಿಯೂ ಹೌದು. ಅಲ್ಲಿಯೂ ಈ ಅಪವಾದ ಈಗ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಇಂತಹ ಯೋಗ್ಯ ಸಂಸ್ಥೆಗಳನ್ನು ಅಧಮರಿಂದ ರಕ್ಷಿಸಲು ದಯವಿಟ್ಟು ಅವುಗಳನ್ನು ಖಾಸಗೀಕರಿಸಿ ಅಥವಾ ಸ್ವಯಮಾಡಳಿತ ನೀಡಿ, ಗೌರವ ಉಳಿಸಿ.
–ಕೆ.ಪುರುಷೋತ್ತಮ ರೆಡ್ಡಿ, ಪಾವಗಡ

**
ಎಲ್‌ಪಿಜಿ ಕಳ್ಳರಿದ್ದಾರೆ, ಇರಲಿ ಎಚ್ಚರ
ಅಡುಗೆ ಅನಿಲ ಅಕ್ರಮ ರೀ ಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ ಸಂಭವಿಸಿ ರಸ್ತೆಯಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕ ಮೃತಪಟ್ಟಿರುವ ಸುದ್ದಿ ವರದಿಯಾಗಿದೆ (ಪ್ರ.ವಾ., ಮಾರ್ಚ್ 6). ಈ ಅಕ್ರಮ ರೀ ಫಿಲ್ಲಿಂಗ್ ದಂಧೆಗೆ ಕಾರಣ ಏನು? ಇವರಿಗೆ ತುಂಬಿದ ಸಿಲಿಂಡರ್ ಎಲ್ಲಿಂದ ಬರುತ್ತದೆ? ನನಗೆ ತಿಳಿದಂತೆ, ಈ ರೀತಿಯ ದಂಧೆಗೆ ಗ್ಯಾಸ್ ಏಜೆನ್ಸಿಗಳ ನಿರ್ಲಕ್ಷ್ಯವೇ ಕಾರಣ. ಗ್ರಾಹಕರ ಮನೆಗಳಿಗೆ ತುಂಬಿದ ಸಿಲಿಂಡರ್‌ಗಳನ್ನು ಸರಬರಾಜು ಮಾಡುವ ಹುಡುಗರು ಕೆಲವು ಕಡೆಗಳಲ್ಲಿ ಸರಬರಾಜು ಮಾಡುವ ಮೊದಲೇ ಒಂದರಿಂದ ಎರಡು ಕೆ.ಜಿಯಷ್ಟು ಎಲ್‌ಪಿಜಿಯನ್ನು ಅಕ್ರಮವಾಗಿ ಹೊರತೆಗೆದು, ಕಡಿಮೆ ತೂಕದ ಸಿಲಿಂಡರ್ ಅನ್ನು ಗ್ರಾಹಕರ ಮನೆಗಳಿಗೆ ಕೊಡುತ್ತಾರೆಂಬ ಸುದ್ದಿ ಇದೆ.

ಸಿಲಿಂಡರ್ ಮೇಲ್ಭಾಗದಲ್ಲಿ ಖಾಲಿ ಸಿಲಿಂಡರ್ ತೂಕವನ್ನು ಎಲ್ಲರಿಗೂ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಲಾಗಿದೆ. ಅದರ ಜೊತೆಗೆ ಗೃಹ ಬಳಕೆ ಸಿಲಿಂಡರ್ ಒಳಗಿರುವ ಅನಿಲದ ತೂಕ 14.2 ಕೆ.ಜಿಯನ್ನು ಸೇರಿಸಿಕೊಂಡು ನಾವೇ ಒಟ್ಟು ತೂಕದ ಲೆಕ್ಕ ಮಾಡಿಕೊಂಡು, ತೂಕ ಮಾಡಿಸಿ ನೋಡಿ ಸಿಲಿಂಡರ್ ಪಡೆಯಬೇಕು (ಸಿಲಿಂಡರ್ ಮೇಲೂ ನಿವ್ವಳ ತೂಕ ನಮೂದಾಗಿರುತ್ತದೆ). ಸರಬರಾಜು ಮಾಡುವ ಪ್ರತಿಯೊಬ್ಬರಲ್ಲೂ ಸ್ಪ್ರಿಂಗ್ ತೂಕದ ತಕ್ಕಡಿ ಇರುತ್ತದೆ. ತೂಕ ಮಾಡಿಕೊಡಿ ಎಂದು ಕೇಳಿದರೆ ಮಾತ್ರ ಆ ನೌಕರ ತೂಕ ಮಾಡುತ್ತಾನೆ. ಕೇಳದಿದ್ದರೆ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಏಜೆನ್ಸಿಯವರು ಗಮನ ಕೊಡಬೇಕು ಮತ್ತು ಕಡ್ಡಾಯವಾಗಿ
ತೂಕ ಮಾಡಿ ಕೊಟ್ಟು ಬರುವಂತೆ ತಿಳಿಸಿ ಪ್ರಚಾರ ಮಾಡಬೇಕಾಗಿದೆ. ಜೊತೆಗೆ ನಮ್ಮ ಗ್ರಾಹಕರೂ ಎಚ್ಚೆತ್ತು ಪ್ರತೀ ಸಾರಿ ತುಂಬಿದ ಸಿಲಿಂಡರ್ ಪಡೆಯುವಾಗಲೂ ಸರಿಯಾದ ತೂಕ ನೋಡಿ ಪಡೆಯಬೇಕು.‌‌‌
–ತಾ.ಸಿ.ತಿಮ್ಮಯ್ಯ, ಬೆಂಗಳೂರು

**

ಲೂಟಿಕೋರ ಮನಃಸ್ಥಿತಿ
ನಾರಾಯಣ ಎ. ಅವರು ಬರೆದಿರುವ ‘ಬೇಕಾಗಿದ್ದಾರೆ ಕರ್ನಾಟಕಕ್ಕೊಬ್ಬ ಅಣ್ಣಾ ಹಾಜರೆ’ ಶೀರ್ಷಿಕೆಯ ಲೇಖನ (ಪ್ರ.ವಾ., ಮಾರ್ಚ್‌ 6) ಸಮಯೋಚಿತವಾಗಿದೆ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಯಾವುವೂ ಸಮಾಜದ ಸ್ವಾಸ್ತ್ಯ ಕಾಪಾಡುವ ಲಕ್ಷಣಗಳನ್ನು ಹೊಂದಿಲ್ಲ. ಅಧಿಕಾರ ಇರುವುದು ಲೂಟಿ ಹೊಡೆಯಲು ಎಂಬ ಮನಃಸ್ಥಿತಿ ಆ ಪಕ್ಷಗಳಲ್ಲಿ ಎದ್ದುಕಾಣುತ್ತಿದೆ. ಅದಕ್ಕಾಗಿ ಅವು ಸರದಿ ಸಾಲಿನಲ್ಲಿ ನಿಂತಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಜಾರೆ ಅವರಂತಹ ಹೋರಾಟಗಾರರು ಬೇಕಾಗಿದ್ದಾರೆ.
–ಡಿ.ಬಿ. ನಾಗರಾಜ, ಬೆಂಗಳೂರು

**

ಲಂಚದ ಹೊಳೆ!

ಎಷ್ಟು ತೊಳೆದರೂ
ಹೋಗದು
ವ್ಯವಸ್ಥೆಯ ಕೊಳೆ!
ಏಕೆಂದರೆ
ಸಾಬೂನು
ಕಾರ್ಖಾನೆಯಲ್ಲೇ
ಹರಿದಿದೆ
ಲಂಚದ ಹೊಳೆ!

-ಎಲ್.ಎನ್.ಪ್ರಸಾದ್, ತುರುವೇಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.