ADVERTISEMENT

ವಾಚಕರ ವಾಣಿ: ಮೀಸಲಾತಿ- ಕಾಲಮಾನಕ್ಕೆ ತಕ್ಕಂತೆ ಬದಲಾಗಬೇಕಿದೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 22:00 IST
Last Updated 8 ಆಗಸ್ಟ್ 2022, 22:00 IST

ಮೀಸಲಾತಿಗೆ ಸಂಬಂಧಿಸಿದಂತೆ ಸಮಕಾಲೀನ ಸವಾಲುಗಳನ್ನು ಎದುರಿಸಬೇಕಿದೆ ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿರುವುದು (ಪ್ರ.ವಾ., ಆ. 8) ಸಕಾಲಿಕವಾಗಿದೆ. ಸ್ವಾತಂತ್ರ್ಯದ ನಂತರ ಆಧುನಿಕತೆ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಅವಕಾಶಗಳು, ಸೌಲಭ್ಯಗಳು ಪ್ರವಾಹದೋಪಾದಿಯಲ್ಲಿ ತೆರೆದುಕೊಂಡಿವೆ. ಮೀಸಲಾತಿಯಿಂದಾಗಿ ಹಿಂದುಳಿದವರು ಮತ್ತು ದಲಿತರು ವಿವಿಧ ಕ್ಷೇತ್ರಗಳಲ್ಲಿ ಆರೇಳು ದಶಕಗಳಿಂದ ಅವಕಾಶ ಪಡೆದಿದ್ದಾರೆ. ಅದೇ ವೇಳೆ ‘ಮುಂದುವರಿದವರು’ ಎಂದು ಪರಿಗಣಿತವಾದವರಲ್ಲಿ ಅವಕಾಶ ವಂಚಿತರು ಮತ್ತು ಬಡವರ ಸಂಖ್ಯೆ ಹೆಚ್ಚುತ್ತಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯಂತೆ ಬಡತನವೂ ಒಂದು ಶಾಪ. ಕೆಲ ವರ್ಗಗಳು ಸಾವಿರಾರು ವರ್ಷಗಳಿಂದ ಸೌಲಭ್ಯ ಪಡೆದಿವೆ ಎಂಬ ಅಭಿಪ್ರಾಯ ಸರಿಯಲ್ಲ. ಆಗ ನಮ್ಮ ದೇಶ ಪ್ರಾಚೀನ ಸ್ಥಿತಿಯಲ್ಲಿತ್ತು. ಬಹಳಷ್ಟು ಸೌಲಭ್ಯಗಳೇ ಸೃಷ್ಟಿಯಾಗಿರಲಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ‘ಮುಂದುವರಿದವರಲ್ಲಿನ’ ಬಡವರ ಸಂಖ್ಯೆಯೇ ಒಂದು ಸಾಮಾಜಿಕ ಸಮಸ್ಯೆಯಾಗಬಹುದು. ನಮ್ಮದು ಚಲನಶೀಲ ಸಮಾಜ. ಬದಲಾದ ಕಾಲಮಾನಕ್ಕೆ ಅನುಗುಣವಾಗಿ ಸಂವಿಧಾನದಲ್ಲಿಯೂ ಸೂಕ್ತ ಬದಲಾವಣೆಗೆ ಅವಕಾಶ ಇದ್ದೇ ಇದೆ. ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯ ಬದಲು ಕುಟುಂಬವನ್ನು ಒಂದು ಘಟಕವಾಗಿ ಪರಿಗಣಿಸಲು ಇದು ಸಕಾಲ.

-ಲಂಬೋಧರ ಎಲ್.ವಿ.,ಸಾಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.