ವಾಚಕರ ವಾಣಿ
ಖಾಸಗಿ ಬಸ್ ದರಕ್ಕೆ ಲಗಾಮು ಬೇಕು
ವಾರಾಂತ್ಯದಲ್ಲಿ ಸಾಲು ಸಾಲು ಹಬ್ಬದ ರಜೆಗಳು ಬಂದರೆ ಜನರ ಸಂತಸಕ್ಕೆ ಪಾರವೇ ಇರುವುದಿಲ್ಲ. ಸಾರ್ವಜನಿಕರ ಈ ಸಂತೋಷದ ಬಲೂನ್‌ಗೆ ಖಾಸಗಿ ಬಸ್ ಮಾಲೀಕರು ಸೂಜಿ ಚುಚ್ಚುವ ಕೆಲಸವನ್ನು ಚೊಕ್ಕಟವಾಗಿಯೇ ಮಾಡುತ್ತಾರೆ. ಯಾವುದೇ ಮಾರ್ಗದ ಬಸ್ ಆಗಿರಲಿ, ಸಾಮಾನ್ಯ ದರಕ್ಕಿಂತ ಮೂರ್ನಾಲ್ಕು ಪಟ್ಟು ಟಿಕೆಟ್ ದರ ಏರಿಸುತ್ತಾರೆ. ಇದರ ವಿರುದ್ಧ ಕೂಗೆದ್ದಾಗ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಂತೆ ನಾಟಕವಾಡುತ್ತದೆ. ಖಾಸಗಿ ಬಸ್‌ಗಳ ಮಾಲೀಕರು ರಾಜಕಾರಣಿಗಳಾಗಿರುವುದು ಅಥವಾ ಅವರು ರಾಜಕಾರಣಿಗಳ ಸಖ್ಯದಲ್ಲಿರುವುದೇ ಇದಕ್ಕೆ ಕಾರಣ.
⇒ಸಂತೋಷ ಬಸ್ತಿ, ಧಾರವಾಡ
ಅಲ್ಯೂಮಿನಿಯಂ ಪಾತ್ರೆ ಬಳಕೆಗೆ ನಿಷೇಧ
ರಾಜ್ಯ ಸರ್ಕಾರವು ಶಾಲೆಗಳಲ್ಲಿ ಅಡುಗೆ ತಯಾರಿಕೆಗೆ ಅಲ್ಯೂಮಿನಿಯಂ ಪಾತ್ರೆ ಬಳಸದಂತೆ ಆದೇಶಿಸಿರುವುದು ಶ್ಲಾಘನೀಯ. ಅಲ್ಯೂಮಿನಿಯಂ ಪಾತ್ರೆಗಳಲ್ಲಿ ದೀರ್ಘಕಾಲ ಅಡುಗೆ ಮಾಡುವುದರಿಂದ ಆಹಾರದಲ್ಲಿ ಹಾನಿಕರ ರಾಸಾಯನಿಕ ಅಂಶಗಳು ಸೇರ್ಪಡೆಗೊಳ್ಳುತ್ತವೆ. ಇದು ಮೆದುಳಿನ ಬೆಳವಣಿಗೆ, ನರಮಂಡಲದ ಚಟುವಟಿಕೆ ಹಾಗೂ ದೇಹದ ಪ್ರತಿರೋಧಶಕ್ತಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಅಡುಗೆ ತಯಾರಿಕೆಗೆ ಸ್ಟೇನ್‌ಲೆಸ್ ಸ್ಟೀಲ್ ಅಥವಾ ತಾಮ್ರದ ಪಾತ್ರೆ ಬಳಸುವುದು ಆರೋಗ್ಯಕರ ಮತ್ತು ದೀರ್ಘಾವಧಿಯಲ್ಲಿ ಪ್ರಯೋಜನಕಾರಿ.
⇒ವಿಜಯಕುಮಾರ್ ಎಚ್.ಕೆ., ರಾಯಚೂರು
ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಅಗತ್ಯ
‘ಕೌನ್ ಬನೇಗಾ ಕರೋಡ್ ಪತಿ’ ವೇದಿಕೆಯಲ್ಲಿ ಬಾಲಪ್ರತಿಭೆ ಇಶಿತ್ ಭಟ್ ತೋರಿದ ಬುದ್ಧಿವಂತಿಕೆ, ಧೈರ್ಯ ಮತ್ತು ಆತ್ಮವಿಶ್ವಾಸ ಪ್ರಾರಂಭದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ, ಮುಂದೆ ಆ ಬಾಲಕನ ವರ್ತನೆಯಲ್ಲಿ ಅಹಂಕಾರದ ಬೀಜ ಮೊಳೆತು, ಅದುವೇ ತಪ್ಪು ನಿರ್ಧಾರಗಳಿಗೆ ಕಾರಣವಾಗಿ, ಸೋಲಲ್ಲಿ ಪರ್ಯಾವಸಾನಗೊಂಡಿತು.
ಮಕ್ಕಳು ಮತ್ತು ಅವರ ಹೆತ್ತವರು ಈ ಘಟನೆಯಿಂದ ತಿಳಿಯಬೇಕಾದ ಹಲವಾರು ಅಂಶಗಳಿವೆ. ಅಹಂಕಾರವು ಯಶಸ್ಸಿನ ಶತ್ರು, ವಿನಯವೇ ನಿಜವಾದ ಜ್ಞಾನ. ವಿದ್ಯೆಯೇ ವಿನಯದ ಮೂಲ ಎಂಬುದನ್ನು ಪೋಷಕರು ಮಕ್ಕಳಿಗೆ ಮನನ ಮಾಡಿಸಬೇಕಿದೆ. ಹುಡುಗ ಎಷ್ಟೇ ಬುದ್ಧಿವಂತನಾಗಿರಲಿ, ಅವನ ನಡವಳಿಕೆ
ವಯೋಸಹಜವಾಗಿದ್ದರೂ ವಿದ್ಯಾರ್ಥಿಯಾದ ಆತನಿಂದ ಈ ರೀತಿಯ ನಡತೆ ಅನಪೇಕ್ಷಿತವಾಗಿತ್ತು. ಮೌಲ್ಯಾಧಾರಿತ ವ್ಯಕ್ತಿತ್ವವೇ ನಿಜವಾದ ಗೆಲುವು ಎನ್ನುವ ಸತ್ಯವನ್ನು ಪೋಷಕರು ಅರ್ಥೈಸಿಕೊಳ್ಳಬೇಕಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಮೌಲ್ಯಶಿಕ್ಷಣ ಮತ್ತು ನೈತಿಕಶಿಕ್ಷಣ ಕಲಿಸಬೇಕಿದೆ.
⇒ಎಸ್.ಎನ್. ಭಟ್, ಕಾಸರಗೋಡು
ಸೇವಾ ನಿಯಮ ಪಾಲನೆ: ನೌಕರರ ಹೊಣೆ
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ‘ನಾನು ಸರ್ಕಾರಿ ನೌಕರ’ ಎಂದಿದ್ದಾರೆ. ಅವರು ಸೇವಕರು ಹೌದು; ನೌಕರರಲ್ಲ. ನೌಕರರಿಗೆ ‘ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಾವಳಿ’ಗಳು ಅನ್ವಯವಾಗುತ್ತವೆ; ಜನಪ್ರತಿನಿಧಿಗಳಿಗಲ್ಲ. ಕಾರ್ಯಾಂಗದ ಪ್ರಮುಖ ಅಂಗ ಸರ್ಕಾರಿ ನೌಕರರು. ಅವರು ನಿಷ್ಪಕ್ಷಪಾತದಿಂದ ಕೆಲಸ ಮಾಡಬೇಕಾಗುತ್ತದೆ. ಆರ್‌ಎಸ್‌ಎಸ್ ತಾನು ಏನೇ ಬಣ್ಣಿಸಿಕೊಂಡರೂ ಅದು ರಾಜಕೀಯ ಪಕ್ಷವೊಂದರ ಪಿತೃವಿನಂತೆ ಕೆಲಸ ಮಾಡುತ್ತದೆ. ದೇಶಭಕ್ತಿ ಎಂಬ ಸಿಹಿಲೇಪನದಲ್ಲಿ ಜನಸಾಮಾನ್ಯರ ತಲೆಯಲ್ಲಿ ಅದು ಏನನ್ನು ತುಂಬಿಸುತ್ತದೆ ಎಂಬುದು ಗೋಪ್ಯವೇನಲ್ಲ. ಪಕ್ಷಪಾತ ಗುಣೋತ್ಥಾನಗೊಳಿಸುವ ಸಂಸ್ಥೆಯೊಂದಿಗೆ ನೌಕರನೊಬ್ಬ ನಿತ್ಯ ಬಹಿರಂಗವಾಗಿ ಸೇರಿಕೊಂಡರೆ ಅವನು ಕಚೇರಿಯಲ್ಲಿ ಭೇದಭಾವರಹಿತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ.
⇒ತಿರುಪತಿ ನಾಯಕ್, ಕಲಬುರಗಿ
ಅಂಚೆ ಕಚೇರಿ ಮರಳಿ ತೆರೆಯಿರಿ
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಈ ಮುಂಚೆ ಅಂಚೆ ಕಚೇರಿ ಇತ್ತು. ಮೂರ್ನಾಲ್ಕು ವರ್ಷದ ಹಿಂದೆ ಇದನ್ನು ಸ್ಥಳಾಂತರಿಸಲಾಗಿದೆ. ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕೇಂದ್ರವೂ
ಆಗಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿದೆ. ಗ್ರಾಮಕ್ಕೆ ಹತ್ತಿರ ಇರುವ ಅಂಚೆ ಕಚೇರಿಗೆ ಹೋಗಬೇಕೆಂದರೆ ಸುಮಾರು 5 ಕಿ.ಮೀ. ದೂರವಾಗುತ್ತದೆ. ಗ್ರಾಮದಲ್ಲಿ ಮತ್ತೆ ಅಂಚೆ ಕಚೇರಿ ಪ್ರಾರಂಭಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಅಂಚೆ ಇಲಾಖೆಯು ಕ್ರಮವಹಿಸಬೇಕಿದೆ.
⇒ಎಸ್.ಎಂ. ಚಂದ್ರಮೌಳಿ ಸ್ವಾಮಿ, ಮುತ್ತಾನಲ್ಲೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.