ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 22:37 IST
Last Updated 7 ಡಿಸೆಂಬರ್ 2025, 22:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಳೆ ವಿಮೆ ಪರಿಹಾರದಲ್ಲೂ ತಾರತಮ್ಯ

ಮಲೆನಾಡಿನ ಭಾಗದಲ್ಲಿ ಬೆಳೆ ವಿಮೆಯ ನಷ್ಟ ಪರಿಹಾರ ಪಾವತಿಯಲ್ಲೂ ತಾರತಮ್ಯ ಎಸಗಲಾಗುತ್ತಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಗುಂಟೆಗೆ ₹700ರಂತೆ ನೀಡಿದರೆ, ಕೆಲವೆಡೆ ಗುಂಟೆಗೆ ₹130ರ ಲೆಕ್ಕದಲ್ಲಿ ಪಾವತಿಸಲಾಗಿದೆ. ಒಂದೇ ಹೋಬಳಿ ವ್ಯಾಪ್ತಿಗೆ ಬರುವ ಅಕ್ಕಪಕ್ಕದ ಪಂಚಾಯಿತಿಗಳಲ್ಲಿ ಈ ರೀತಿಯ ತಾರತಮ್ಯ ಎಸಗುವುದು ಎಷ್ಟು ಸರಿ? ಮಳೆಮಾಪನ ಮಾಡಲು ಅಳವಡಿಸಿರುವ ವ್ಯವಸ್ಥೆಯ ದೋಷದಿಂದಾಗಿ ಈ ವ್ಯತ್ಯಾಸವಾಗಿದೆ ಎಂದು ವಿಮಾ ಕಂಪನಿಯ ಅಧಿಕಾರಿಗಳು ಕುಂಟು ನೆಪ ಹೇಳುತ್ತಾರೆ. ಇದು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಹುನ್ನಾರವಷ್ಟೆ. ಸರ್ಕಾರ ರೈತರಿಗೆ ಆಗಿರುವ ಈ ಅನ್ಯಾಯವನ್ನು ಸರಿಪಡಿಸಲು ಕ್ರಮವಹಿಸಬೇಕಿದೆ. 

ADVERTISEMENT

⇒ಗಣಪತಿ ನಾಯ್ಕ್, ಕಾನಗೋಡ

ಬಾಯಿ ಬಡುಕರಿಗೆ ಮೂಗುದಾರ ಹಾಕಿ 

ಇತ್ತೀಚೆಗೆ ಸತ್ಯದ ನೆತ್ತಿಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಸುಳ್ಳು ಹೇಳುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಆ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ. ಇದು ಅರಾಜಕತೆಗೂ ದಾರಿಯಾಗುತ್ತದೆ. ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ರಾಜ್ಯ ಸರ್ಕಾರವು, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ ಮಂಡನೆಗೆ ಸಜ್ಜಾಗಿರುವುದು ದಿಟ್ಟಹೆಜ್ಜೆಯಾಗಿದೆ. ಅಚ್ಚರಿಯೆಂದರೆ, ಯಾರು ಅದನ್ನು ಸ್ವಾಗತಿಸಬೇಕಿತ್ತೊ ಅವರೇ ಅದನ್ನು ವಿರೋಧಿಸುತ್ತಿದ್ದಾರೆ. ಈ ಧೋರಣೆಯು ಕುಂಬಳಕಾಯಿ ಕಳ್ಳನ ಗಾದೆಯನ್ನು ನೆನಪಿಸುತ್ತದೆ.

⇒ಈರಪ್ಪ ಎಂ. ಕಂಬಳಿ, ಬೆಂಗಳೂರು

ಕಳಚಿದ ನೈತಿಕ ರಾಜಕಾರಣದ ಕೊಂಡಿ

2019ರ ಭ್ರಷ್ಟಾಚಾರ ಸರ್ವೇಕ್ಷಣಾ ವರದಿ ಬಗ್ಗೆ ಮಾತನಾಡುವ ನೈತಿಕತೆ ಯಾವುದೇ ರಾಜಕೀಯ ಪಕ್ಷಕ್ಕೂ ಇಲ್ಲ. ಭ್ರಷ್ಟಾಚಾರ ಒಂದು ಪಕ್ಷಕ್ಕೆ, ಒಂದು ಅವಧಿಗೆ ಸೀಮಿತವಾಗಿಲ್ಲ. ಕ್ಯಾನ್ಸರ್‌ನಂತೆ ಇಡೀ ರಾಜ್ಯವನ್ನೇ ವ್ಯಾಪಿಸಿದೆ. ವಿಪಕ್ಷವು  ಅಧಿಕಾರದ ಚುಕ್ಕಾಣಿ ಹಿಡಿಯಲು, ಆಡಳಿತ ಪಕ್ಷದ ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ. ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರವನ್ನೇ ತನ್ನ ಕಾರ್ಯಸೂಚಿಯಾಗಿ ರೂಪಿಸಿಕೊಳ್ಳುತ್ತದೆ. ಅತಿಹೆಚ್ಚು ಭ್ರಷ್ಟಾಚಾರ ಎಸಗುವ ಅಧಿಕಾರಿಗಳಿಗೆ ಗೌರವ ಹೆಚ್ಚು! ನಿಷ್ಠಾವಂತರಿಗೆ ವರ್ಗಾವಣೆ, ಅಮಾನತು, ಕಿರುಕುಳದಂತಹ ಶಿಕ್ಷೆ ನೀಡಲಾಗುತ್ತದೆ. ಲೋಕಾಯುಕ್ತ ಅಧಿಕಾರಿಗಳ ದಾಳಿಯು ಕೇವಲ ಕೆಳಹಂತದ ಅಧಿಕಾರಿಗಳು, ಸಿಬ್ಬಂದಿಗೆ ಸೀಮಿತವಾಗಿದೆ. ಸಚಿವರು, ಶಾಸಕರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮೇಲೆ ನಡೆಯುತ್ತಿಲ್ಲ. ತಪ್ಪಿತಸ್ಥರಿಗೆ ನಿಗದಿತ ಅವಧಿಯೊಳಗೆ ಶಿಕ್ಷೆ ವಿಧಿಸಿದರೆ ಲೋಕಾಯುಕ್ತ ಸಂಸ್ಥೆ ಮೇಲೆ ಜನಸಾಮಾನ್ಯರ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ.

⇒ಆಂಜನೇಯ ಎನ್., ಮಧುಗಿರಿ

‘ಕಲ್ಯಾಣ’ದ ಮೇಲೆ ಕಳವಿನ ಕರಾಳ ನೆರಳು

ಕಳೆದ ಒಂದು ವರ್ಷದಲ್ಲಿ ​ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ದಾಖಲಾಗಿರುವ 4,797 ಕಳವು ಪ್ರಕರಣಗಳು, ಆತಂಕದ ಗಂಟೆ ಬಾರಿಸುತ್ತಿವೆ. ಈ ಸಂಖ್ಯೆ ಬರೀ ಅಪರಾಧಗಳ ಲೆಕ್ಕಾಚಾರವಲ್ಲ; ದರೋಡೆ, ಸರಗಳ್ಳತನ, ವಾಹನ ಕಳ್ಳತನದಿಂದ ನೆಮ್ಮದಿ ಕಳೆದುಕೊಂಡ ಸಾವಿರಾರು ಜೀವಗಳ ನೋವಿನ ಪ್ರತಿಬಿಂಬವಾಗಿದೆ. ​ಬೀದಿ ಗಳಲ್ಲಿ, ಮನೆಗಳಲ್ಲಿ ಅಥವಾ ಹೊಲಗಳಲ್ಲಿ ಎಲ್ಲಿಯೂ ಸುರಕ್ಷತೆ ಇಲ್ಲವೆಂಬ ಭಾವನೆ ಜನಸಾಮಾನ್ಯರನ್ನು ಆವರಿಸಿದೆ. ಜನ ಇಡೀ ಜೀವನದಲ್ಲಿ ಕಷ್ಟಪಟ್ಟು ಸಂಪಾದಿಸಿದ ನಗದು, ಆಭರಣ ಕಳೆದುಕೊಂಡ ನಂತರ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ದೃಶ್ಯಗಳು ಹೃದಯ ಕಲಕುತ್ತವೆ. ಜನರ ಬದುಕಿನ ಭದ್ರತೆಯನ್ನು ಕಸಿದುಕೊಳ್ಳುತ್ತಿರುವ ಈ ಕರಾಳ ನೆರಳಿನಿಂದ ಮುಕ್ತಿ ಯಾವಾಗ?

⇒ಬಸವಚೇತನ ಎಂ.ಎಚ್., ಬೀದರ್

ಮನೆಯೊಳಗೂ ಪ್ರವೇಶಿಸಿದ ಫ್ಯಾಸಿಸಂ

ಇತ್ತೀಚೆಗೆ ಸಮಾಜದಲ್ಲಿ ಫ್ಯಾಸಿಸಂ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಸಮುದಾಯಗಳ ನಡುವೆ ಯುವಜನರಲ್ಲಿ ತಪ್ಪು ಸಂದೇಶ ಬಿತ್ತಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಿಂಸೆಯನ್ನು ಹೊಗಳುವ ಪ್ರವೃತ್ತಿಯು ಫ್ಯಾಸಿಸಂಗೆ ಕಾರಣವಾಗುತ್ತಿದೆ. ಸಣ್ಣ ವಿಷಯಕ್ಕೂ ಗುಂಪು ಘರ್ಷಣೆ, ಹಲ್ಲೆ ಯತ್ನ ನಡೆಯುತ್ತಿದೆ. ಕೆಲವು ಸಿನಿಮಾಗಳು ಮತ್ತು ವೆಬ್‌ ಸರಣಿಗಳಲ್ಲಿ ರೌಡಿಸಂ ಅನ್ನು ‘ಹೀರೊಯಿಸಂ’ ಎಂದು ತೋರಿಸುತ್ತಿದ್ದು, ಯುವ ಮನಸ್ಸು ಗಾಸಿಗೊಳ್ಳುತ್ತಿದೆ. ಫ್ಯಾಸಿಸಂ ಹಾವಳಿಯು ನಗರ ಪ್ರದೇಶವಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚುತ್ತಿರುವುದು ಆತಂಕಕಾರಿ. ಮನೆಯೊಳಗೂ ಪ್ರವೇಶಿಸಿದ್ದು, ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಬಹುಸಂಖ್ಯಾತರ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಅದನ್ನು ಸರಿಪಡಿಸುತ್ತಿದ್ದೇವೆ ಎನ್ನುವ ಅರ್ಥದಲ್ಲಿ ನ್ಯಾಯದ ಪರಿಭಾಷೆ ಬದಲಿಸುವ ಮಟ್ಟಕ್ಕೆ ತಲುಪಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. 

⇒ತೇಜಸ್, ತುಮಕೂರು