ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಪತ್ರಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 21:59 IST
Last Updated 12 ಡಿಸೆಂಬರ್ 2025, 21:59 IST
   

ನದಿಗಳ ಒಡಲು; ಕೊಳಕಾಗುವ ದಿಗಿಲು

ಪ್ರತಿದಿನವೂ ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ನದಿಗಳ ಮಹತ್ವದ ಕುರಿತು ಮಾತನಾಡುತ್ತೇವೆ. ಆದರೆ, ಅಂತಿಮವಾಗಿ ಎಲ್ಲವೂ ವ್ಯಾವಹಾರಿಕವಾಗಿ ಕೊನೆಯಾಗುತ್ತದೆ. ನದಿಗಳ ಆರ್ತನಾದ ಕೇಳಿಸಿಕೊಳ್ಳುವ ವ್ಯವಧಾನ ನಮಗೆಲ್ಲಿದೆ? ಸೂಕ್ಷ್ಮ ಜೀವಪರಿಸರ ಒಳಗೊಂಡಿರುವ ಆಯಕಟ್ಟು ಪ್ರದೇಶವೇ ನದಿಗಳ ಜೀವಾಳ. ಚರಂಡಿ ನೀರು, ಕೈಗಾರಿಕೆಗಳು ಹೊರಹಾಕುವ ವಿಷಯುಕ್ತ ತ್ಯಾಜ್ಯ ಈ ಪ್ರದೇಶ ಸೇರುತ್ತಿದೆ. ಅಲ್ಲಿ ಜೀವಿಸುತ್ತಿರುವ ಕೋಟ್ಯಂತರ ಜೀವಸಂಕುಲದ ಗಂಟಲು ಕಟ್ಟುತ್ತಿದೆ. ನದಿಗಳ ಮಾಲಿನ್ಯ ಮಾನವನ ಬದುಕು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು, ರಾಜಕೀಯ ಲಾಭ–ನಷ್ಟವನ್ನು ಬದಿಗೊತ್ತಿ ನದಿಗಳ ಸಂರಕ್ಷಣೆಗೆ ಮುಂದಾಗಬೇಕಿದೆ. ಅವುಗಳ ಜೀವಪರಿಸರವನ್ನು ಸಂರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. 

⇒ಹನುಮಂತಿ, ಗಂಗಾವತಿ

ADVERTISEMENT

ಸರ್ಕಾರಿ ಶಾಲೆಗಳಿಗೆ ‘ಕೆಪಿಎಸ್’ ಗ್ರಹಣ!

ಕಳೆದ ಹದಿನೈದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ 17 ಲಕ್ಷದಷ್ಟು ಕಡಿಮೆಯಾಗಿರುವುದು ಆತಂಕಕಾರಿ. ಇದಕ್ಕೆ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಕಾರಣ. ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜೊತೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಈ ಶಾಲೆಗಳತ್ತ ಕರೆತರುವ ಹೊಸ ಯೋಜನೆ ರೂಪಿಸುವುದು ಒಳಿತು. ಮತ್ತೊಂದೆಡೆ, ಸರ್ಕಾರ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಕೆಪಿಎಸ್–ಮ್ಯಾಗ್ನೆಟ್ ಯೋಜನೆಯು ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿದೆ. ಇದರಿಂದ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಶಾಶ್ವತವಾಗಿ ಬೀಗ ಬೀಳಲಿದೆ. ಈ ಯೋಜನೆ ಕೈಬಿಡುವುದೇ ಉತ್ತಮ.

⇒ಕಾಶಿನಾಥ ಎಸ್.ಎಂ., ಕಲಬುರಗಿ

ಜಿ.ಪಂ. – ತಾ.ಪಂ. ಚುನಾವಣೆ ನಡೆಯಲಿ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಅಧಿಕಾರಾವಧಿ ಪೂರ್ಣಗೊಂಡು ನಾಲ್ಕೂವರೆ ವರ್ಷವಾಗಿದೆ. ಆದರೆ, ಈಗಲೂ ಚುನಾವಣೆ ನಡೆಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇದರಿಂದ ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಕಾಲಮಿತಿಯೊಳಗೆ ಚುನಾವಣೆ ನಡೆಸುವ ತನ್ನ ಹೊಣೆಗಾರಿಕೆಯನ್ನು ಸರ್ಕಾರ ಮರೆತಿದೆ. ತ್ವರಿತಗತಿಯಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್‌ ಕೂಡ ಹೇಳಿದೆ. ಯುವಜನರ ರಾಜಕೀಯ ಪ್ರವೇಶಕ್ಕೆ ಸ್ಥಳೀಯ ಸರ್ಕಾರಗಳೇ ಪ್ರಾಥಮಿಕ ಮೆಟ್ಟಿಲು. ಹಾಗಾಗಿ, ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಚುನಾವಣೆ ಘೋಷಿಸಬೇಕಿದೆ. 

⇒ಶಾನು ಯಲಿಗಾರ, ಯರಗುಪ್ಪಿ

ಅರ್ಥಪೂರ್ಣ ಬದುಕಿಗಾಗಿ ಮೌಲಿಕ ಶಿಕ್ಷಣ

ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆಯಂತಹ ಆವಿಷ್ಕಾರದ ನಡುವೆ ಮಾನವೀಯ ಮೌಲ್ಯ, ಕೌಟುಂಬಿಕ ವ್ಯವಸ್ಥೆ ಹಾಗೂ ಮನುಷ್ಯ ಸಹಜ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಮನುಷ್ಯ ಸಂವೇದನಾಶೀಲತೆಯ ಪೊರೆಯನ್ನು ಕಳಚಿಕೊಂಡು ತಾಂತ್ರಿಕತೆಯ ಮಾಂತ್ರಿಕ ಬಲೆಯಲ್ಲಿ ಸಿಲುಕಿ ಕುಬ್ಜನಾಗುತ್ತಿದ್ದಾನೆ. ಗ್ಯಾಜೆಟ್‌ ಲೋಕದಲ್ಲಿ ಯುವಜನತೆ ಮಿಂದೇಳುತ್ತಿದೆ. ಅಗಾಧ ಅವಕಾಶಗಳ ಈ ಯುಗದಲ್ಲಿ
ದಿನಬೆಳಗಾಗುವುದರೊಳಗೆ ವಿಶ್ವವೇ ಗುರುತಿಸುವ ವ್ಯಕ್ತಿಯಾಗುವುದು ಪ್ರತಿ
ಯೊಬ್ಬರ ಹಂಬಲ. ಸಮಾಜದ ಗಮನ ಸೆಳೆಯಲು ಜೀವದ ಹಂಗು ತೊರೆದು
ಅಪಾಯಕಾರಿ ಚಟುವಟಿಕೆಗಳತ್ತ ಹೊರಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣ

ಗಳೇ ಪ್ರೇರಣೆ. ಇದು ಪೋಷಕರು ಮತ್ತು ಸಮಾಜಕ್ಕೆ ಭಯಾನಕ ಭವಿಷ್ಯದ ದಿನಗಳ ಸ್ಪಷ್ಟ ಮುನ್ನುಡಿಯಂತಿದೆ. ಯುವಸಮೂಹ ಮೌಲಿಕ ಶಿಕ್ಷಣ ಪಡೆದು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವತ್ತ ಹೆಜ್ಜೆ ಇಡಬೇಕಿದೆ. 

⇒ಚಂದ್ರಪ್ಪ ಎಚ್., ವಿಜಯನಗರ

ಕಾಡುಪ್ರಾಣಿ ಉಪಟಳ: ರೈತರು ಕಂಗಾಲು

ರೈತರು ಅಡಿಕೆ ಧಾರಣೆಯಿಂದ ಭತ್ತದ ಕಡೆ ಮುಖ ಮಾಡದಿದ್ದರೂ, ಶಿವಮೊಗ್ಗ ತಾಲ್ಲೂಕಿನಲ್ಲಿ 6,500 ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಆದರೆ ಕಾಟಿ, ಆನೆ, ಚಿರತೆ, ಮಂಗ, ನವಿಲುಗಳ ನಿರಂತರ ದಾಳಿಯಿಂದಾಗಿ ತೆನೆಹೊತ್ತ ಗದ್ದೆಗಳು ನಾಶವಾಗುತ್ತಿವೆ. ಸೋಮೇಶ್ವರ, ಮೂಕಾಂಬಿಕಾ, ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಬೆಳೆ ರಕ್ಷಣೆ ಕೃಷಿಕರಿಗೆ ದೊಡ್ಡ ಸವಾಲಾಗಿದೆ. ಚಿರತೆ ಊರೊಳಗೆ ನುಗ್ಗಿ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿ
ದ್ದರೆ, ಪ್ರವಾಸಿಗರ ಆಹಾರದಿಂದ ಮಂಗಗಳ ಹಾವಳಿ ಹೆಚ್ಚಿದೆ. ಬ್ಯಾಂಡ್‌ಸೆಟ್‌, ಮೈಕ್ ಬಳಸಿ ರಾತ್ರಿ ನಿದ್ರೆಗೆಟ್ಟು ಪ್ರಾಣಿ ಓಡಿಸಿದರೂ ಫಸಲು ಕೈಸೇರುತ್ತಿಲ್ಲ. ಬಂದೂಕು ಪರವಾನಗಿ ಸಿಗದೆ ರೈತರು ಅಸಹಾಯಕರಾಗಿದ್ದಾರೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ಮಿತಿಮೀರಿದ್ದು, ರೈತರ ಸಂಕಷ್ಟಕ್ಕೆ ಸರ್ಕಾರ ತುರ್ತು ಪರಿಹಾರ ಒದಗಿಸಬೇಕಿದೆ.

⇒ನಿರಂಜನ್ ಎಚ್.ಬಿ., ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.