ವಾಚಕರ ವಾಣಿ
79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಕೆಲವೇ ದಿನಗಳು ಉಳಿದಿವೆ. ಕ್ರೀಡಾಂಗಣದ ತುಂಬೆಲ್ಲಾ ತ್ರಿವರ್ಣ ಧ್ವಜ ಹಿಡಿದು ಮಕ್ಕಳು ಓಡಾಡುವುದನ್ನು ಕಂಡು ಆ ದಿನ ಪೋಷಕರೆಲ್ಲರೂ ತಮ್ಮ ಬಾಲ್ಯದ ಸುಂದರ ದಿನಗಳನ್ನು ನೆನೆದು ಮಕ್ಕಳೊಂದಿಗೆ ಮಕ್ಕಳಾಗಿ ಬಿಡುತ್ತೇವೆ.
ಆ ದಿನ ವಿದ್ಯಾರ್ಥಿ ನಿಲಯ, ಶಾಲಾ ಕಟ್ಟಡ, ಸರ್ಕಾರಿ ಕಚೇರಿ, ಸಾರ್ವಜನಿಕ ಕಟ್ಟಡಗಳ ಮೇಲೆ ಹಾಗೂ ಎತ್ತರದ ಕಂಬಕ್ಕೆ ಧ್ವಜ ಕಟ್ಟುವಾಗ ಬಹಳಷ್ಟು ಎಚ್ಚರಿಕೆ ಅಗತ್ಯ. ಕಟ್ಟಡದ ಮೇಲೆ ಹೆಚ್ಚು ವಿದ್ಯುತ್ ಪ್ರವಹಿಸುವ ತಂತಿಗಳು ಹಾದು ಹೋಗಿರುತ್ತವೆ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು, ಶಾಲಾ ಮುಖ್ಯಸ್ಥರು, ಕಟ್ಟಡದ ಮಾಲೀಕರು ಯಾವುದೇ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಧ್ವಜ ಕಟ್ಟುವ ಕೆಲಸವನ್ನು ಶಾಲಾ ಮಕ್ಕಳಿಗೆ ವಹಿಸಬಾರದು. ಸರ್ಕಾರವೂ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕಿದೆ.
⇒ಮಂಜುನಾಥ್ ಪಾಯಣ್ಣ, ಮಂಡ್ಯ
ಕಳೆದ ವರ್ಷದ ಸೆಪ್ಟೆಂಬರ್ 1ರಂದು ಅಪೆಕ್ಸ್ ಬ್ಯಾಂಕ್‌ನ ಸಹಾಯಕರ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಿತು. ಅಂತಿಮ ಪರಿಷ್ಕೃತ ಫಲಿತಾಂಶ ಪಟ್ಟಿಯನ್ನು ಡಿಸೆಂಬರ್‌ನಲ್ಲೇ ಪ್ರಕಟಿಸಲಾಗಿದೆ. 30 ಅಂಕಗಳ ವೈಯಕ್ತಿಕ ಸಂದರ್ಶನ ನಡೆಸುವುದಕ್ಕಾಗಿ ಇಲ್ಲಿಯವರೆಗೂ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಅಪೆಕ್ಸ್ ಬ್ಯಾಂಕ್ ಆಡಳಿತವು ನಿರುದ್ಯೋಗಿ ಪದವೀಧರರ ಜೀವನದ ಜೊತೆ ಚೆಲ್ಲಾಟ ಆಡಬಾರದು. ವಿಳಂಬ ಧೋರಣೆ ನಿಲ್ಲಿಸಿ, ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಬೇಕು.
⇒ಎಸ್.ಎನ್. ರಮೇಶ್, ಸಾತನೂರು
ಉದ್ಯೋಗ ಅರಸಿ ಕೇರಳಕ್ಕೆ ತೆರಳಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುರುಡಿ ತಾಂಡಾದ ಯುವಕ ರಮೇಶ್ ಬೂದಿಹಾಳ, ಚೆನ್ನೈನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿ ಚಾರಿತ್ರಿಕ ಸಾಧನೆ ಮೆರೆದಿದ್ದಾರೆ (ಪ್ರ.ವಾ., ಆಗಸ್ಟ್ 11).
ಹೊಟ್ಟೆಪಾಡಿಗಾಗಿ ಕರ್ನಾಟಕದಿಂದ ಕೇರಳಕ್ಕೆ ವಲಸೆ ಹೋಗಿ ಕೂಲಿ ಕೆಲಸ ಮಾಡುತ್ತಿರುವ ಬಡ ಕುಟುಂಬದ ಹುಡುಗನೊಬ್ಬ ಅಂತರರಾಷ್ಟ್ರೀಯ ಸರ್ಫಿಂಗ್ ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದಿರುವುದು ಹೆಮ್ಮೆಯ ಸಂಗತಿ. ಪ್ರತಿಭೆಗೆ ಪಾರವಿಲ್ಲ. ಸರ್ಕಾರ ಇಂಥ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಉತ್ತೇಜನ ನೀಡಬೇಕಿದೆ.
⇒ಪ್ರೊ. ಶಿವರಾಮಯ್ಯ, ಬೆಂಗಳೂರು
ಕಳೆದ ವರ್ಷದ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ ತೀರ್ಪು ಆಧರಿಸಿ ರಾಜ್ಯ ಸರ್ಕಾರ ಮುತುವರ್ಜಿಯಿಂದ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಸಮೀಕ್ಷೆಗೆ ಕ್ರಮಕೈಗೊಂಡಿತ್ತು. ಈಗ ವರದಿಯು ಸರ್ಕಾರದ ಕೈಸೇರಿದೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಸಾಮಾಜಿಕ ನ್ಯಾಯದ ಜೀವಾಳವಾಗಿವೆ. ಈ ಮೊದಲು ಪರಿಶಿಷ್ಟ ಜಾತಿಯಲ್ಲಿರುವ ಸ್ಪೃಶ್ಯ ಜಾತಿಗಳ ನಾಯಕರು ಒಳಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದ್ದರು.
ಈಗ ಅಸ್ಪೃಷ್ಯ ಜಾತಿಯ ನಾಯಕರು ಒಳ ಮೀಸಲಾತಿ ಸಂಬಂಧ ಪರಸ್ಪರ ಕಿತ್ತಾಡುತ್ತಿರುವುದು ದುರದೃಷ್ಟಕರ. ಸದನದಲ್ಲಿ ಪಕ್ಷಾತೀತವಾಗಿ ಹಾಗೂ ಆರೋಗ್ಯಕರವಾಗಿ ಚರ್ಚಿಸಿ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಸಲ್ಲಿಸಿರುವ ವರದಿಯ ಜಾರಿಗೆ ಸರ್ಕಾರ ಕ್ರಮವಹಿಸಬೇಕಿದೆ.
⇒ಎಂ. ಆಂಜನೇಯ, ಹಾವೇರಿ
ರಾಜ್ಯದ ವಿಶ್ವವಿದ್ಯಾಲಯಗಳು ಶೈಕ್ಷಣಿಕ ವಿಚಾರಗಳಿಗಿಂತ ಹೆಚ್ಚಾಗಿ ಭ್ರಷ್ಟಾಚಾರ, ಜಾತೀಯತೆ ಮತ್ತು ಹಗರಣಗಳ ಚರ್ಚೆಯ ಕೇಂದ್ರಬಿಂದುವಾಗುತ್ತಿವೆ. ಪ್ರಸ್ತುತ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಪ್ರಾಧ್ಯಾಪಕರ ಬಡ್ತಿ ಸಂಬಂಧ ಚರ್ಚೆಗೆ ಗ್ರಾಸವಾಗಿದೆ (ಪ್ರ.ವಾ., ಆಗಸ್ಟ್ 11).
ಬಡ್ತಿ ಪಟ್ಟಿಯಲ್ಲಿ ಇರುವವರಲ್ಲಿ ಕೆಲವರು ವಂಚನೆ, ನಕಲಿ ಪ್ರಮಾಣ ಪತ್ರ ಮತ್ತು ಭ್ರಷ್ಟಾಚಾರದಂತಹ ಗುರುತರ ಆರೋಪಗಳನ್ನು ಎದುರಿಸುತ್ತಿರುವವರೇ ಆಗಿದ್ದಾರೆ. ವಿಶ್ವವಿದ್ಯಾಲಯ ಬಡ್ತಿ ಪ್ರಕ್ರಿಯೆಗೆ ಚಾಲನೆ ನೀಡಿದೆಯೆಂದರೆ, ಇವರೆಲ್ಲರಿಗೂ ಬಡ್ತಿ ಲಭಿಸುವುದರಲ್ಲಿ ಅನುಮಾನವಿಲ್ಲ. ಈಗಾಗಲೇ, ಸಂದರ್ಶನದ ನೆಪದಲ್ಲಿ ಒಬ್ಬೊಬ್ಬರನ್ನೇ ಕರೆದು ಸಂದರ್ಶನ ಪೂರ್ಣಗೊಳಿಸ ಲಾಗಿದೆ. ಉಳಿದಿರುವುದು ನೆಪ ಮಾತ್ರದ ಬಡ್ತಿ ಸಭೆಯಷ್ಟೇ. ಇದನ್ನು ಪ್ರಶ್ನಿಸುವ ಮತ್ತು ಪರಿಶೀಲಿಸುವ ನಿಯಮಗಳು ದುರ್ಬಲ ಆಗಿರುವುದರಿಂದ ಭ್ರಷ್ಟಾಚಾರ ದಿಂದ ಹೊರಬರುವುದು ಸುಲಭ ಪ್ರಕ್ರಿಯೆಯಷ್ಟೆ.
⇒ತಿಮ್ಮೇಶ ಮುಸ್ಟೂರು, ಜಗಳೂರು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡುವ ಸಮಾರಂಭದ ಜಾಹೀರಾತಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಿನ ಮುಂದೆ ಹೊಸದಾಗಿ ‘ಸುಶ್ರೀ’ ಎನ್ನುವ ಉಪಾಧಿ ಇರುವ ಬಗ್ಗೆ
ಚರ್ಚೆಯಾಗುತ್ತಿದೆ. ಕನ್ನಡದಲ್ಲಿ ಕುಮಾರಿ/ ಶ್ರೀಮತಿ ಎಂದು ಬಳಸುವಂತೆ, ಹಿಂದಿಯಲ್ಲಿ ಮಹಿಳೆಗೆ ಗೌರವಸೂಚಕವಾಗಿ ‘ಸುಶ್ರೀ’ ಎಂದು ಬಳಸಲಾಗುತ್ತದೆ. ಶೋಭಾ ಅವರು ಕೇಂದ್ರ ಸಚಿವೆ ಆಗಿರುವುದರಿಂದ, ಹಿಂದಿ ಭಾಷೆಯಲ್ಲಿನ ಈ ಪದವನ್ನು ಬಳಸಲಾಗಿದೆ.
ಪ್ರಕಾಶ್ ಮಲ್ಕಿ ಒಡೆಯರ್, ಹೂವಿನ ಹಡಗಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.