ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಆಡಳಿತಗಳ ದಿವ್ಯ ನಿರ್ಲಕ್ಷ್ಯವೇ ಕಾರಣವೆಂದು ಬಿಡಿಸಿಹೇಳಬೇಕಿಲ್ಲ. ಕೌಟುಂಬಿಕ ವ್ಯವಸ್ಥೆಯ ಬೇರುಗಳು ಸಡಿಲಗೊಂಡಿರುವುದೂ ಇದಕ್ಕೆ ಮತ್ತೊಂದು ಕಾರಣ. ಶಾಲೆ ಬಿಟ್ಟ ಬಾಲಕಿಯರನ್ನು ಗುರುತಿಸಿ, ಮರಳಿ ಶಾಲೆಗೆ ಕರೆತರುವುದು ಶಿಕ್ಷಣ ಇಲಾಖೆ ಮತ್ತು ಗ್ರಾ.ಪಂ. ಆಡಳಿತಗಳ ಜವಾಬ್ದಾರಿ. ಇದರ ನಿರ್ವಹಣೆಯಲ್ಲಿ ಎಡವಿರುವುದು ಸ್ಪಷ್ಟ. ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ಹಕ್ಕುಗಳ ಸಮಿತಿ ನೆಪಕ್ಕಷ್ಟೇ ಇದೆ. ಈಗಾಗಲೇ, ಬಾಲತಾಯಂದಿರ ಸಮಸ್ಯೆ ಸರ್ಕಾರಕ್ಕೆ ಸವಾಲಾಗಿದೆ. ಈ ಸಮಸ್ಯೆ ಮತ್ತಷ್ಟು ವ್ರಣವಾಗುವ ಮೊದಲು ಎಚ್ಚತ್ತುಕೊಳ್ಳಬೇಕಿದೆ.
⇒ಎಚ್. ನಾಗಮ್ಮ ಭಂಡಾರ್, ಬೆಂಗಳೂರು
ಇಂದಿನ ತಂತ್ರಜ್ಞಾನಯುಗದಲ್ಲಿ ರೇಡಿಯೊ ಮಾಧ್ಯಮದ ಪ್ರಭಾವ ಕಡಿಮೆ ಆಗುತ್ತಿದೆ. ಸ್ಮಾರ್ಟ್‌ಫೋನ್, ಇಂಟರ್ನೆಟ್, ಒಟಿಟಿ, ಯೂಟ್ಯೂಬ್, ಪಾಡ್‌ಕಾಸ್ಟ್ ಗಳಂತಹ ಡಿಜಿಟಲ್ ಮಾಧ್ಯಮಗಳ ಬೆಳವಣಿಗೆಯೇ ಇದಕ್ಕೆ ಕಾರಣ. ಯುವಜನರು ದೃಶ್ಯ ಮನರಂಜನೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಕಾರಣಕ್ಕೆ ರೇಡಿಯೊ ಕೇಳುಗರು ಹಾಗೂ ಜಾಹೀರಾತು ಆದಾಯ ಎರಡೂ ಕುಸಿಯುತ್ತಿದೆ.
ಪ್ರತಿಕೂಲ ಸನ್ನಿವೇಶದ ನಡುವೆಯೂ ರೇಡಿಯೊ ಮಾಧ್ಯಮ ಸಂಪೂರ್ಣವಾಗಿ ನಶಿಸಿಲ್ಲ. ತುರ್ತು ಪರಿಸ್ಥಿತಿಗಳು, ಗ್ರಾಮೀಣ ಪ್ರದೇಶಗಳು ಮತ್ತು ಕಡಿಮೆ ವೆಚ್ಚದ ಮಾಹಿತಿ ತಲಪಿಸುವ ಸಾಮರ್ಥ್ಯದಿಂದ ಇನ್ನೂ ತನ್ನದೇ ಸ್ಥಾನ ಹೊಂದಿದೆ. ಭವಿಷ್ಯದಲ್ಲಿ ಇಂಟರ್ನೆಟ್ ರೇಡಿಯೊ, ಆನ್‌ಲೈನ್ ಸ್ಟ್ರೀಮಿಂಗ್‌ನಂತಹ ಡಿಜಿಟಲ್ ರೂಪಾಂತರಗೊಂಡರೆ ಹೊಸಹುಟ್ಟು ಪಡೆಯಬಹುದು.
⇒ತೇಜಸ್, ತುಮಕೂರು
ಸರ್ಕಾರಿ ಕಚೇರಿಗಳಲ್ಲಿ ಕೆಲವು ಅಧಿಕಾರಿಗಳು ಲಂಚದ ಆಸೆಗಾಗಿ ನಕಲಿ ದಾಖಲೆ ಸೃಷ್ಟಿಸುವ ದಂಧೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ಗ್ರಾಮ ಪಂಚಾಯಿತಿಗಳಲ್ಲಿ ಈ ದಂಧೆ ಅವ್ಯಾಹತವಾಗಿದೆ. ಸ್ಥಳೀಯ ಪ್ರಭಾವಿ ವ್ಯಕ್ತಿಗಳು, ಜನಪ್ರತಿನಿಧಿಗಳು ಈ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.
⇒ಷಣ್ಮುಖ ಎಸ್.ಎಚ್., ಹಳೇಬಾತಿ
ರಾಜ್ಯದಲ್ಲಿನ ಹೆದ್ದಾರಿಗಳಿಂದ ಹಿಡಿದು ಬಹುತೇಕ ಎಲ್ಲಾ ರಸ್ತೆಗಳು ಸುಗಮ ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿ ಹದಗೆಟ್ಟಿವೆ. ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿಕೊಡಿ ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಜನರು ಹಲವು ಸಾರಿ ಮನವಿ ಮಾಡಿದರೂ ಪರಿಹಾರ ಸಿಗುತ್ತಿಲ್ಲ. ಅನುದಾನ ಇಲ್ಲ ಎಂಬ ಸಿದ್ಧ ಉತ್ತರ ನೀಡುತ್ತಾರೆ. ಆದರೆ, ರಾಜ್ಯಕ್ಕೆ ಪ್ರಧಾನಿ, ಕೇಂದ್ರ ಗೃಹ ಸಚಿವರು ವಿವಿಧ ಕಾರ್ಯಕ್ರಮಕ್ಕೆ ಆಗಮಿಸುವಾಗ ಆಯಾ ಜಿಲ್ಲೆ, ತಾಲ್ಲೂಕಿನ ರಸ್ತೆಗಳು ಶರವೇಗದಲ್ಲಿ ದುರಸ್ತಿ ಕಾಣುತ್ತವೆ. ಹಾಗಾದರೆ ಇದಕ್ಕೆ ನಿಧಿ ಎಲ್ಲಿಂದ ಬರುತ್ತದೆ? ಇಷ್ಟು ಸಾಮರ್ಥ್ಯ ಇರುವ ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರಕ್ಕೆ ಬೇರೆ ಸಮಯಗಳಲ್ಲಿ ಇಂತಹ ಕಾರ್ಯಸಾಮರ್ಥ್ಯ ಯಾಕಿರುವುದಿಲ್ಲ?
⇒ಸುರೇಂದ್ರ ಪೈ, ಭಟ್ಕಳ
ಮಹಾಲೇಖಪಾಲರ (ಎಜಿ) ಕಚೇರಿಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇದರಿಂದ ಸಕಾಲದಲ್ಲಿ ಕೆಲಸಗಳು ಆಗುತ್ತಿಲ್ಲ. ಸಾವಿರಾರು ನಿವೃತ್ತ ನೌಕರರು ಜೀವನದ ಸಂಧ್ಯಾಕಾಲದಲ್ಲಿ ತಮ್ಮದಲ್ಲದ ತಪ್ಪಿಗೆ ಪಶ್ಚಾತ್ತಾಪ ಪಡುವಂತಾಗಿದೆ. ಸೇವಾ ಪುಸ್ತಕದಲ್ಲಿ ಏನಾದರೂ ತಪ್ಪು ನಮೂದಾದರೆ ಅದಕ್ಕೆ ಸಂಬಂಧಪಟ್ಟ ನೌಕರರೇ ಹೊಣೆಗಾರರಾಗುತ್ತಾರೆ. ಆದರೆ, ಅಂತಹ ತಪ್ಪು ಸರಿಪಡಿಸಲು ಎಜಿ
ಕಚೇರಿಗೆ ಅಲೆದಾಡಬೇಕಿದೆ. ತರಬೇತಿ ಕೊರತೆಯಿಂದಾಗಿ ಹಲವಾರು ಕಚೇರಿ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಥಮದರ್ಜೆ ಮತ್ತು ದ್ವಿತೀಯದರ್ಜೆ ಸಹಾಯಕರಿಗೆ ಸೇವಾ ಪುಸ್ತಕದ ನಿರ್ವಹಣೆ ಗೊತ್ತಿಲ್ಲ. ನಿವೃತ್ತಿಯಾದ ನಂತರ ಈ ಸೇವಾ ಪುಸ್ತಕವನ್ನು ಎಜಿ ಕಚೇರಿಗೆ ಕಳಿಸಲಾಗುತ್ತದೆ. ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕೆಲಸಗಳನ್ನು ನಿಭಾಯಿಸುವ ಜವಾಬ್ದಾರಿ ಈ ಕಚೇರಿಗೆ ಇದೆ.
ಇಡೀ ರಾಜ್ಯದ ನಿವೃತ್ತ ನೌಕರರ ಪಿಂಚಣಿ ಪ್ರಕ್ರಿಯೆಯ ಕಾರ್ಯಭಾರವನ್ನು ಈ ಏಕಮಾತ್ರ ಸಂಸ್ಥೆಯೇ ನಿಭಾಯಿಸುತ್ತದೆ. ಆ ಪ್ರಕ್ರಿಯೆಯಲ್ಲಿ ಏರುಪೇರಾದರೆ ನಿವೃತ್ತರು ಕಂಗಾಲಾಗುತ್ತಾರೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಕಚೇರಿಯು ಸಂಪೂರ್ಣವಾಗಿದೆ ಎಡವಿದೆ. ಇಂದಿಗೂ ತನ್ನದೇ ಆದ ವೆಬ್‌ಸೈಟ್ ಹೊಂದಿಲ್ಲ. ಹಾಗಾಗಿ, ನಿವೃತ್ತರಿಗೆ ಕಾಲಕಾಲಕ್ಕೆ ಮಾಹಿತಿ ಲಭಿಸುತ್ತಿಲ್ಲ. ಸರ್ಕಾರವು ಈ ಬಗ್ಗೆ ಗಮನಹರಿಸಬೇಕಿದೆ.
⇒ಎಸ್.ಆರ್. ಬಿರಾದಾರ, ಇಂಡಿ
ಭದ್ರಾವತಿಯ ವಿಶ್ವೇಶ್ವರಾಯ ಉಕ್ಕಿನ ಕಾರ್ಖಾನೆಗೆ ಮರುಜೀವ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವುದು ಒಳ್ಳೆಯ ನಿರ್ಧಾರ. 1923ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಸ್ಥಾಪನೆಯಾದ ಕಾರ್ಖಾನೆ ಇದಾಗಿದೆ. ಒಂದು ಕಾಲದಲ್ಲಿ ದೇಶದಲ್ಲೇ ಅತಿದೊಡ್ಡ ಉಕ್ಕು ತಯಾರಿಕಾ ಘಟಕವಾಗಿತ್ತು. ಕಾರ್ಖಾನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅದಿರು ಪೂರೈಕೆಯಾದರೆ ವರ್ಷಕ್ಕೆ 2.5 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸಬಹುದು. ಜೊತೆಗೆ, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಯುವಜನರಿಗೆ ಅನುಕೂಲವಾಗಲಿದೆ.
ನಿರಂಜನ್ ಎಚ್.ಬಿ., ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.