ಪೋಷಕರನ್ನು ನಿರ್ಲಕ್ಷಿಸುವ ಸರ್ಕಾರಿ ನೌಕರರ ಸಂಬಳ ಕಡಿತಗೊಳಿಸಿ ತಂದೆ–ತಾಯಿಯ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕಾನೂನು ರೂಪಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ. ಈ ಕಾನೂನಿನಡಿ ಅತ್ತೆ, ಮಾವಂದಿರನ್ನೂ ಸೇರಿಸಬೇಕು.
ಹಲವು ಕುಟುಂಬಗಳಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದ ಮಗ ತೀರಿಕೊಂಡಾಗ ಆತನ ವೃದ್ಧ ತಂದೆ–ತಾಯಿ ನಿರಾಶ್ರಿತರಾಗಿ ಬೀದಿಗಳಲ್ಲಿ ಭಿಕ್ಷೆ ಎತ್ತುವುದನ್ನು ಕಂಡಿದ್ದೇವೆ. ಸೊಸೆಯ ಕಾಟಕ್ಕೆ ಬೇಸತ್ತು ಮನೆಯಿಂದ ಹೊರಬಿದ್ದು, ಎಲ್ಲೋ ಬದುಕು ಸವೆಸಿ ಸತ್ತು ಹೋದ ಜೀವಗಳೆಷ್ಟೊ? ಇಂತಹ ಸಂಸಾರಗಳತ್ತ ಸರ್ಕಾರ ಗಮನ ಹರಿಸಲಿ. ಈ ಬಗ್ಗೆ ಸಮೀಕ್ಷೆ ಮಾಡಬೇಕಿದೆ. ಕೆಲವು ಪ್ರಕರಣಗಳಲ್ಲಿ ಸೈನಿಕನಾಗಿದ್ದ ಮಗ ಸತ್ತು ಹೋದರೆ ಪಿಂಚಣಿಯು ಸೊಸೆ, ಮಕ್ಕಳ ಪಾಲಾಗುತ್ತದೆ. ಆ ಸೊಸೆ, ಅತ್ತೆ–ಮಾವನನ್ನು ನಿರ್ಲಕ್ಷಿಸಿದ ನಿದರ್ಶನಗಳಿವೆ. ಬಾಲ್ಯದಲ್ಲಿ ಮಕ್ಕಳನ್ನು ಸಾಕಿ ಸಲಹಿದ ತಂದೆ–ತಾಯಿಗೆ ನ್ಯಾಯ ದೊರಕಿಸುವ ಕಾನೂನುಗಳು ಅಗತ್ಯ.
⇒ಶಿವಶರಣಪ್ಪ ರಾ. ಬಿರಾದಾರ, ಹಿರೆಬೇವನೂರ
ಕಿರಾಣಿ ಅಂಗಡಿಗೆ ಹೋಗಿದ್ದೆ. ಅಂಗಡಿ ಮಾಲೀಕರ ಕುಟುಂಬದ ಹುಡುಗನೊಬ್ಬ ವ್ಯಾಪಾರ ಮಾಡುತ್ತಿದ್ದ. ತೊಗರಿಬೇಳೆ ಕೊಡು ಎಂದು ಕೇಳಿದೆ. ಆ ಬಾಲಕ, ‘ತೂರ್ ದಾಲ ಆಂಟಿ?’ ಎಂದ. ಇಂಗ್ಲಿಷ್ ಮೂಲಕ ತರಕಾರಿ–ಧಾನ್ಯಗಳ ಗುರ್ತಿಸುವ ತಲೆಮಾರಿನವನಂತೆ ಆ ಹುಡುಗ ಕಂಡ. ತಕ್ಷಣಕ್ಕೆ ಟಿ.ವಿ. ಅಡುಗೆ ಶೋಗಳು ನೆನಪಾದವು. ಗಾರ್ಲಿಕ್ ಜಿಂಜರ್ ಪೇಸ್ಟ್, ಜಾಗರಿ, ಬಟರ್, ಕರಿ ಲೀಫ್, ಅಕ್ಕಿಯನ್ನು ಎರಡು ಅವರ್ ಸೊಕ್ ಮಾಡಿರಬೇಕು, ಇನ್ನೊಂದು ಕಡಾಯಿಗೆ ಟ್ರಾನ್ಸ್‌ಫಾರ್ ಮಾಡಿಕೊಬೇಕು– ಶೋಗಳಲ್ಲಿನ ಭಾಷಾ ಬಳಕೆಯ ಕೆಲವು ಉದಾಹರಣೆಗಳಿವು.
ಕನ್ನಡದಲ್ಲಿ ಬೇಳೆಕಾಳು, ತರಕಾರಿಗಳ ಹೆಸರಿನ ಬಗ್ಗೆ ಮನೆಯಲ್ಲಿ ಮಕ್ಕಳಿಗೆ ಹೇಳಿಕೊಡಬೇಕಿದೆ. ಇಲ್ಲದಿದ್ದರೆ ಕನ್ನಡದಲ್ಲಿ ದಿನಸಿ ಪದಾರ್ಥದ ಪದಗಳು ಕ್ರಮೇಣ ಮರೆಯಾಗುವುದರಲ್ಲಿ ಸಂದೇಹವಿಲ್ಲ.
⇒ಟಿ.ಎಸ್. ಪ್ರತಿಭಾ, ಚಿತ್ರದುರ್ಗ
ರಾಜ್ಯದಲ್ಲಿ ಅಸ್ಪೃಶ್ಯತೆ ಮೀರಿ, ವೈಚಾರಿಕತೆಯ ತುಡಿತದಿಂದ ಬುದ್ಧನೆಡೆಗೆ ನಡೆಯುತ್ತಿರುವ ದಲಿತ ಸಮುದಾಯವನ್ನು ಕಂಡು ಮನಸ್ಸು ಹಿಗ್ಗಿತ್ತು. ಇದರ ಬೆನ್ನಲ್ಲೇ ದೇವರ ಕಾರ್ಯಕ್ಕೆ ಹಣ ನೀಡಿಲ್ಲವೆಂಬ ಕಾರಣಕ್ಕಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಂನಲ್ಲಿ ದಲಿತ ಕುಲದ ಯಜಮಾನರೇ, ದಲಿತರಿಗೆ ಬಹಿಷ್ಕಾರ ಹಾಕಿರುವುದು ಮನಸ್ಸಿಗೆ ನೋವುಂಟು ಮಾಡಿತು. ಬಿ.ಆರ್. ಅಂಬೇಡ್ಕರ್ ಅವರು ಇವರ ಮನಕ್ಕಲ್ಲ, ಬಹುಶಃ ಮನೆಗಳಿಗೂ ಇಳಿದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಬಗೆಯ ಮನಃಸ್ಥಿತಿ ಮೀರಲು ಇವರಿಗೆ ಇನ್ನೆಷ್ಟು ಶತಮಾನಗಳು ಬೇಕೋ?
⇒ಅಭಿಲಾಶ, ಬೆಂಗಳೂರು
ಬೆಂಗಳೂರಿನ ‘ಬರ್ಲಿ ಸ್ಟ್ರೀಟ್’ಗೆ ತಮ್ಮ ಹೆಸರು ನಾಮಕರಣ ಮಾಡುವಂತೆ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಅವರು, ಉಪಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಮತ್ತು ಇತರ ಸಾಹಿತ್ಯಿಕ ಪ್ರಶಸ್ತಿಗಳನ್ನು ಪಡೆಯಲು ಶಿಫಾರಸ್ಸಿಗೆ ದುಂಬಾಲು ಬೀಳುವವರ ಬಗ್ಗೆ ಕೇಳಿದ್ದೇವೆ. ಆದರೆ, ಕಿರ್ಮಾನಿ ಅವರು, ರಸ್ತೆಯೊಂದಕ್ಕೆ ತಮ್ಮ ಹೆಸರಿಡಬೇಕೆಂದು ಖುದ್ದಾಗಿ ಅರ್ಜಿ ಹಾಕಿಕೊಂಡಿರುವುದು ಕುತೂಹಲ ಮೂಡಿಸಿದೆ. ಇನ್ನು ಮುಂದೆ ಇದೇ ರೀತಿಯ ಸ್ವಯಂ ಅಹವಾಲುಗಳ ಸಂಖ್ಯೆ ಹೆಚ್ಚಾಗಬಹುದು.
⇒ಹೆಚ್.ವಿ. ಶ್ರೀಧರ್, ಬೆಂಗಳೂರು
ಋತುಚಕ್ರದ ನೋವು ತಡೆದುಕೊಳ್ಳಲಾಗದೆ, ‘ಒಂದು ಸಲವಾದರೂ ಗಂಡಾಗಿ ಹುಟ್ಟಬೇಕು’ ಎಂದು ನನಗೆ ಅನ್ನಿಸಿರುವುದುಂಟು. ಯಾಕೆಂದರೆ ಹೆಣ್ಣಿಗಿರುವಷ್ಟು ದೇಹದ ತೊಂದರೆ ಗಂಡಿಗಿಲ್ಲವಲ್ಲ ಎಂದು ಎನಿಸುತ್ತಿತ್ತು. ಮುಟ್ಟಿನ ಸಂದರ್ಭದಲ್ಲಿ ಕೆಲಸಕ್ಕೆ ಹೋಗುವುದೆಂದರೆ ನರಕಸದೃಶವೇ ಸರಿ.
ಕೆಲಸದ ಸ್ಥಳದಲ್ಲಿ ನೋವು ಹೆಚ್ಚಾದರೂ ಅವಳು ಮುಖ ಸಪ್ಪೆ ಮಾಡಿಕೊಂಡು ಹೊಟ್ಟೆ ಹಿಚುಕಿಕೊಳ್ಳುತ್ತ ತನ್ನ ಕರ್ತವ್ಯದಲ್ಲಿ ನಿರತಳಾಗಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಋತುಚಕ್ರದ ರಜೆ ನೀಡಲು ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ.
⇒ಸುಜಾತಾ ಚಲವಾದಿ, ತಾಳಿಕೋಟಿ
ರಾಜ್ಯದಲ್ಲಿ ಯುವಜನತೆ ಸರ್ಕಾರಿ ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ, ಮೈಸೂರಿನಲ್ಲಿ ಸರ್ಕಾರದಿಂದ ಯುವ ಸಮೃದ್ಧಿ ಸಮ್ಮೇಳನದ ಹೆಸರಿನಡಿ ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸದೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಉದ್ಯೋಗ ಕೊಡಿ, ಖಾಸಗಿ ಉದ್ಯೋಗ ಕೊಡಿಸಲು ನೀವು ಮಧ್ಯವರ್ತಿಗಳಾಗಬೇಡಿ ಎಂದು ಕಾರ್ಯಕ್ರಮವನ್ನು ಧಿಕ್ಕರಿಸಿದ್ದಾರೆ. ಇಂತಹ ಉದ್ಯೋಗ ಮೇಳದಲ್ಲಿ ಓದಿಗೆ ತಕ್ಕ ಕೆಲಸ ಸಿಕ್ಕದಿರುವುದು ವಿಷಾದನೀಯ. ಸರ್ಕಾರಕ್ಕೆ ಯುವಜನತೆ ಬಗ್ಗೆ ಕಾಳಜಿ ಇದ್ದರೆ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಬೇಕಿದೆ.
⇒ದರ್ಶನ್ ಚಂದ್ರ ಎಂ.ಪಿ., ಮುಕ್ಕಡಹಳ್ಳಿ
ಗುಂಡಿಗೆ
ಈಗ ನಮಗೆ ಬೇಕು
ಅಸಾಮಾನ್ಯ ಧೈರ್ಯ
ಎರೆಡೆರಡು ಗುಂಡಿಗೆ...
ಕಾರು ಬೈಕು ಇಳಿಸಬೇಕಲ್ಲ
ಅಡಿಗಡಿಗೂ ಸಿಗುವ
ರಸ್ತೆಯ ಗುಂಡಿಗೆ!
ಆರ್. ಸುನೀಲ್, ತರೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.