ADVERTISEMENT

ವಾಚಕರ ವಾಣಿ: 08 ಜುಲೈ 2025

ವಾಚಕರ ವಾಣಿ
Published 8 ಜುಲೈ 2025, 1:53 IST
Last Updated 8 ಜುಲೈ 2025, 1:53 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಆನ್‌ಲೈನ್ ಬೆಟ್ಟಿಂಗ್‌ ನಿಷೇಧ ಸ್ವಾಗತಾರ್ಹ

ಇತ್ತೀಚೆಗೆ ವ್ಯಾಪಕವಾಗಿ ಹಬ್ಬಿರುವ ಆನ್‌ಲೈನ್‌ ಬೆಟ್ಟಿಂಗ್‌ಗೆ ನಿಷೇಧ ಹೇರಲು ಸರ್ಕಾರ ಮುಂದಾಗಿರುವ ಸುದ್ದಿ ಓದಿ ಆನಂದವಾಯಿತು (ಪ್ರ.ವಾ., ಜುಲೈ 7). ಕಳೆದ ವಾರವಷ್ಟೇ ದಾವಣಗೆರೆಯ ಯುವಕನೊಬ್ಬ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ₹18 ಲಕ್ಷ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ಬೆಟ್ಟಿಂಗ್‌ ಆ‍್ಯಪ್‌ಗಳ ವಂಚನೆ ಬಗ್ಗೆ ವಿವರಿಸಿದ್ದ. ಆತನ ಸಾವಿಗೆ ಸ್ಪಂದನದ ರೂಪದಲ್ಲಿ, ಆನ್‌ಲೈನ್‌ ಬೆಟ್ಟಿಂಗ್‌ಗೆ ಅಂಕುಶ ಹಾಕಲು ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಆನ್‌ಲೈನ್ ಬೆಟ್ಟಿಂಗ್‌ಗೆ ಸಂಪೂರ್ಣ ನಿಯಂತ್ರಣ ಹೇರುವ ಕಾನೂನು ಆದಷ್ಟು ಬೇಗ ಜಾರಿಗೆ ಬಂದು, ಅಮಾಯಕರನ್ನು ಆರ್ಥಿಕ ನಷ್ಟ ಮತ್ತು ಪ್ರಾಣಪಾಯದಿಂದ ರಕ್ಷಿಸಲಿ.

–ಆಶಾ ಅಪ್ರಮೇಯ, ದಾವಣಗೆರೆ

ADVERTISEMENT

ದೇಗುಲದಲ್ಲಿ ವೃದ್ಧರಿಗೆ ಪ್ರತ್ಯೇಕ ಸಾಲಿರಲಿ

ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರುಗಳಂಥ ತೀರ್ಥಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದು ವಾಡಿಕೆ. ಯುವಜನರಿಗೆ ಸಮನಾಗಿ ವಯೋವೃದ್ಧರು ಸರತಿ ಸಾಲಿನಲ್ಲಿ ನಿಂತು ಮುಂದೆ ಸಾಗುವುದು ಪ್ರಯಾಸದ ಕೆಲಸ. ಹಾಗಾಗಿ, ದೇವರ ದರ್ಶನಕ್ಕೆ ಹೆಚ್ಚು ಜನ ಸೇರುವ ಕ್ಷೇತ್ರ

ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಸೂಕ್ತ. ಕಾಲ್ತುಳಿತದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದರಿಂದಲೂ ಹಿರಿಯರ ಸುರಕ್ಷತೆ ಬಗ್ಗೆ ಜಾಗರೂಕತೆ ವಹಿಸಬೇಕಾಗಿದೆ.

–ನರಸಿಂಹಮೂರ್ತಿ, ಬೆಂಗಳೂರು

ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ರದ್ದುಗೊಳಿಸಿ

ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರ್ತಿಸುವ ಪ್ರಕ್ರಿಯೆಯು ಗೊಂದಲದ ಗೂಡಾಗಿದೆ. ಆಯಾ ಶಾಲೆಯಲ್ಲಿ ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಇದ್ದ ಮಕ್ಕಳ ದಾಖಲಾತಿಯ ಮಾನದಂಡದಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರ್ತಿಸಲಾಗು

ತ್ತಿದೆ. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದ ಜೂನ್‌ನಲ್ಲಿ ನಡೆದ ಮಕ್ಕಳ ದಾಖಲಾತಿ ಸಂದರ್ಭದಲ್ಲಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಈಗ ಮಕ್ಕಳು ಹೆಚ್ಚಿದ್ದರೂ ಆಯಾ ಶಾಲೆಯ ಶಿಕ್ಷಕರು ಹೆಚ್ಚುವರಿ ಪ್ರಕ್ರಿಯೆಗೆ ಒಳಪಡುತ್ತಾರೆ.

2017ರ ವೃಂದ ಮತ್ತು ನೇಮಕಾತಿ ನಿಯಮದಂತೆ ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಹಿಂಬಡ್ತಿ ಅನುಭವಿಸುವಂತಾಗಿದೆ. ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿದರೆ, ಆಯಾ ತಾಲ್ಲೂಕಿನ ಒಳಗೆ ಸೂಕ್ತ ಹುದ್ದೆಗಳು ಲಭ್ಯವಾಗದಿದ್ದರೆ ಅಂತರತಾಲ್ಲೂಕು ಅಥವಾ ಅಂತರಜಿಲ್ಲೆಗೆ ವರ್ಗಾವಣೆಯಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ. ಹಾಗಾಗಿ, ವೃಂದ ಮತ್ತು ನೇಮಕಾತಿ ನಿಯಮವು ತಿದ್ದುಪಡಿ ಆಗುವವರೆಗೆ ಹಾಗೂ ಈ ಸಂಬಂಧ ನ್ಯಾಯಾಲಯದ ತೀರ್ಪು ಬರುವವರೆಗೂ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ರದ್ದುಪಡಿಸಬೇಕಿದೆ.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಕನ್ನಡ ನಮ್ಮ ಧ್ವನಿಯಾಗಿರಲಿ

ಪ್ರತಿದಿನವೂ ವಿವಿಧ ಬ್ಯಾಂಕ್‌ಗಳಿಂದ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ ನೀಡುವ ಬಗ್ಗೆ ಮೊಬೈಲ್‌ ಕರೆಗಳು ಬರುತ್ತವೆ. ಸಾಮಾನ್ಯವಾಗಿ ಅವರು ಮಾತನಾಡುವ ಭಾಷೆ ಹಿಂದಿ. ನನಗೆ ಹಿಂದಿ ಅಲ್ಪಸ್ವಲ್ಪ ತಿಳಿದಿದ್ದರೂ ಹಿಂದಿಯಲ್ಲಿ ಪ್ರತಿಕ್ರಿಯಿಸುವುದಿಲ್ಲ. ಇತ್ತೀಚೆಗೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳ ಅಂಗಡಿಗಳು, ಹೋಟೆಲ್‌ಗಳು ಮತ್ತು ಖಾಸಗಿ ಕಚೇರಿಗಳಲ್ಲಿ ಹಿಂದಿ ಭಾಷಿಕರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ನಾವು ಕಡ್ಡಾಯವಾಗಿ ಕನ್ನಡದಲ್ಲಿಯೇ ವ್ಯವಹರಿಸುವುದನ್ನು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ಜಾಗದಲ್ಲಿ ಕನ್ನಡವೊಂದೇ ನಮ್ಮ ಧ್ವನಿಯಾಗಿರಲಿ.

– ಅಶೋಕ ಎನ್.‌ಎಚ್.‌, ಕೋಲಾರ

ನಾಡ ಕಚೇರಿಯಲ್ಲಿ ಕೆಲಸ ವಿಳಂಬ

ಕೆಲ ತಿಂಗಳ ಹಿಂದೆ ನನ್ನ ಕೃಷಿ ಭೂಮಿಗೆ ಸಂಬಂಧಿಸಿದ ಸಣ್ಣ ಕೆಲಸವೊಂದರ ನಿಮಿತ್ತ ನಾಡ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದ್ದೆ. ಅಧಿಕಾರಿಗಳು ‘ಮುಂದಿನ ವಾರ ಬನ್ನಿ’ ಎಂದು ಹೇಳಿದ್ದರು. ಎರಡು, ಮೂರು ತಿಂಗಳು ಕಳೆದರೂ ಬೇಜವಾಬ್ದಾರಿತನದ ಉತ್ತರ ನೀಡುತ್ತಾ ನನ್ನ ಕೆಲಸವನ್ನು ಮಾಡಿಕೊಡದೆ ಅಲೆದಾಡಿಸುತ್ತಿದ್ದಾರೆ. ವಿದ್ಯಾವಂತನಾದ ನನ್ನದೇ ಈ ಪಾಡಾದರೆ, ಅನಕ್ಷರಸ್ಧರ ಗೋಳು ಕೇಳುವವರು ಯಾರು? ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಸುಗಮವಾಗಿ ಆಗುತ್ತಿಲ್ಲ. ಸಾಕಷ್ಟು ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಸಚಿವರು ಈ ಬಗ್ಗೆ ಗಮನಹರಿಸಬೇಕಿದೆ.

– ಸಚಿನ್ ಎಚ್.ಪಿ. ಹೊಳಲು, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.