ವಾಚಕರ ವಾಣಿ
ದ್ವಿದಳ ಧಾನ್ಯಗಳು ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದು, ಪೌಷ್ಟಿಕ ಆಹಾರವನ್ನು ಒದಗಿಸುತ್ತವೆ. ತೊಗರಿ, ಹೆಸರು, ಕಡಲೆ, ಅವರೆ ಮುಂತಾದವುಗಳು ಪ್ರಮುಖ ದ್ವಿದಳ ಧಾನ್ಯಗಳಾಗಿವೆ. ಆರೋಗ್ಯಕರ ಆಹಾರದ ದೃಷ್ಟಿಯಿಂದ ಅವುಗಳ ಮಹತ್ವ ಅಪಾರ. ಮಣ್ಣಿನಲ್ಲಿ ನೈಟ್ರೋಜನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತವೆ. ನೀರಿನ ಅಗತ್ಯ ಕಡಿಮೆ ಇರುವುದರಿಂದ ಬಯಲು ಪ್ರದೇಶಗಳಲ್ಲಿಯೂ ಸುಲಭವಾಗಿ ಬೆಳೆಯಬಹುದು. ಅತಿವೃಷ್ಟಿ ಅಥವಾ ಅನಾವೃಷ್ಟಿಯಂತಹ ವಾತಾವರಣಕ್ಕೂ ಪ್ರತಿರೋಧ ತೋರುವ ಶಕ್ತಿ ಹೊಂದಿವೆ.
ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ದ್ವಿದಳ ಬೆಳೆಗಳು ರೈತರಿಗೆ ಆರ್ಥಿಕ ಸಹಾಯದ ಜೊತೆಗೆ ಪರಿಸರ ರಕ್ಷಣೆಯತ್ತ ದಾರಿಯನ್ನೂ ತೋರಿಸುತ್ತವೆ. ಈ ಬೆಳೆಗಳನ್ನು ಬೆಳೆಯುವಂತೆ ಸರ್ಕಾರ, ಕೃಷಿ ಇಲಾಖೆ ಹಾಗೂ ಸಂಶೋಧನಾ ಸಂಸ್ಥೆಗಳು ರೈತರಿಗೆ ಉತ್ತೇಜನ ನೀಡಬೇಕು. ಉತ್ತಮ ಗುಣಮಟ್ಟದ ಬೀಜಗಳ ವಿತರಣೆಯಿಂದ ಹಿಡಿದು, ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯಗಳವರೆಗೆ ಹಲವು ಹಂತಗಳಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ.
–ವಿಜಯಕುಮಾರ್ ಎಚ್.ಕೆ., ರಾಯಚೂರು
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮುಷ್ಕರ ಮಾಡುವ ದಾರಿಯಲ್ಲಿದ್ದಾರೆ. ಮುಖ್ಯಮಂತ್ರಿಗಳು ಅವರ ಬೇಡಿಕೆಗಳಿಗೆ ಸಹಾನುಭೂತಿಯಿಂದ ಸ್ಪಂದಿಸದೇ ಇರುವುದರಿಂದ ಮುಷ್ಕರ ಅನಿವಾರ್ಯ ಎಂದು ಯೂನಿಯನ್‌ಗಳ ಮುಖ್ಯಸ್ಥರು ಹೇಳಿರುವುದು ವರದಿಯಾಗಿದೆ. ಸಾರಿಗೆ ನೌಕರರ ಬಗ್ಗೆ ಸರ್ಕಾರವು ಮಾನವೀಯತೆಯಿಂದ ನಡೆದುಕೊಳ್ಳಲಿ. ಕಡ್ಡಿತುಂಡು ಮಾಡುವ ಬದಲು, ಕೊಟ್ಟು ತೆಗೆದುಕೊಳ್ಳುವುದು ಆಗಲಿ.
–ಗುರು ಜಗಳೂರು, ಹರಿಹರ
ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಹೇರುತ್ತಿರುವ ಹೆಚ್ಚಿನ ತೆರಿಗೆಯನ್ನು ಖಂಡಿಸಿ, ಈ ‘ಸುಂಕ ಸಮರ’ದಿಂದ ಬಿಡುಗಡೆ ಹೊಂದಲು ಸ್ವದೇಶಿ ಉತ್ಪನ್ನಗಳನ್ನು ಭಾರತೀಯರು ಬಳಸಲು ಕರೆ ಕೊಟ್ಟಿದ್ದಾರೆ.
ಸ್ವದೇಶಿ ಉತ್ಪನ್ನ ಬಳಸಬೇಕೆನ್ನುವುದು ಸ್ವಾಗತಾರ್ಹ. ಆದರೆ, ಸ್ವದೇಶಿ ಉತ್ಪನ್ನ ಎಂದರೆ ಅದಾನಿ– ಅಂಬಾನಿಗಳು ದೇಶದಲ್ಲಿ ಉತ್ಪಾದಿಸಿದ ವಸ್ತುಗಳು ಅಲ್ಲ. ಸ್ವದೇಶಿ ಎಂದರೆ, ಜನ ಸಮುದಾಯಗಳು ಹೆಚ್ಚಿನ ಉತ್ಪನ್ನಗಳನ್ನು ತಮ್ಮ ಪ್ರದೇಶದಲ್ಲೇ ಉತ್ಪಾದಿಸಿ ಬಳಸುವುದೇ ಆಗಿದೆ. ಇದು ಗಾಂಧೀಚಿಂತನೆಯ ಸ್ವರಾಜ್ಯವಾಗಿದೆ. ಆದರೆ, ಎನ್‌ಡಿಎ ಸರ್ಕಾರ ಬಂದ ಮೇಲೆ, ಸ್ಥಳೀಯ ಉತ್ಪನ್ನಗಳ ಮೇಲೆ, ಮುಖ್ಯವಾಗಿ ಖಾದಿ, ಕೈಮಗ್ಗ ಮತ್ತು ಇತರ ಗ್ರಾಮೋದ್ಯೋಗಗಳ ಮೇಲೆ ಜಿಎಸ್‌ಟಿ ಹೇರಿ ಆ ಉದ್ಯಮಗಳ ಉಸಿರುಗಟ್ಟಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ.
ದೊಡ್ಡ ಕಂಪನಿಗಳು ಖಾದಿ ಮಾರ್ಕ್ ಮತ್ತು ಕೈಮಗ್ಗದ ಮಾರ್ಕ್‌ಗಳನ್ನು ಇಲಾಖೆಗಳಿಂದ ಖರೀದಿಸಿ, ಖಾದಿ ಹೆಸರಿನಲ್ಲಿ ಗಿರಣಿ ಬಟ್ಟೆಗಳನ್ನು ರಾಜಾರೋಷವಾಗಿ ಮಾರುತ್ತಿವೆ. ಏಕರೂಪ ತೆರಿಗೆ ರೂಪಿಸುವ ಉದ್ದೇಶದಿಂದ ಬಟ್ಟೆಗಳ ಮೇಲೆ ಸಾರಾಸಗಟು ಶೇ 12ರಷ್ಟು ತೆರಿಗೆ ವಿಧಿಸುವ ಉದ್ದೇಶವಿದೆ ಎನ್ನುವ ಸುದ್ದಿ ಬರುತ್ತಿದೆ. ಅಂದರೆ, ಶೇ 5 ತೆರಿಗೆಯ ಜಾಗದಲ್ಲಿ ಶೇ 12 ತೆರಿಗೆ ಪಾವತಿಸಬೇಕಾಗುತ್ತದೆ. ಖಾದಿ ಗ್ರಾಮೋದ್ಯೋಗ ಮತ್ತು ಕೈ ಮಗ್ಗದ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಸಂಪೂರ್ಣವಾಗಿ ಮುಕ್ತ ಮಾಡಿದರೆ, ಅವುಗಳ ಉಳಿವಿಗೆ ದೊಡ್ಡ ನೆರವಾಗುತ್ತದೆ ಹಾಗೂ ‘ಸ್ವದೇಶಿ ಕರೆ’ಗೆ ಅರ್ಥ ಬರುತ್ತದೆ.
–ಸಂತೋಷ ಕೌಲಗಿ, ಮೇಲುಕೋಟೆ
‘ಅಹಿಂಸೆ ದೌರ್ಬಲ್ಯವಲ್ಲ, ಅನಿವಾರ್ಯ’ (ಲೇ: ಅರವಿಂದ ಚೊಕ್ಕಾಡಿ, ಆಗಸ್ಟ್ 2) ಲೇಖನ ಸಮಂಜಸವೂ, ಸಕಾಲಿಕವೂ, ಸಂಗ್ರಹಾತ್ಮಕ ಭಾರತ ಸ್ವಾತಂತ್ರ್ಯ ಚಳವಳಿಯ ಇತಿಹಾಸವೂ ಆಗಿದೆ. ಗಾಂಧೀಜಿ ಬಗ್ಗೆ ಲಘುವಾಗಿ ಮಾತನಾಡುವವರಿಗೆ ತಕ್ಕ ಉತ್ತರವಾಗಿ ‘ಎದೆಯಿದ್ದರಿಲ್ಲಿ ನಿಂತು ನಗು ನೋಡುವಾ’ ಎಂಬಂತಿದೆ. ಯುಗಯಾತ್ರೀ ಭಾರತೀಯ ಸಂಸ್ಕೃತಿಯ ಅಹಿಂಸಾ ಸಾರಸರ್ವಸ್ವ ಗ್ರಹಿಸಲಾರದ ಬರಡು ಬಣಗುಗಳು ಏನೇ ಅನ್ನಲಿ, ಗಾಂಧಿ ಎಂದರೆ ಕುರುಡರು ಮುಟ್ಟಿದ ಆನೆಯಂತಲ್ಲ; ಯಾವ ಕೊಟ್ಟಿಗೆಗೂ ಕಟ್ಟಲಾರದ ದೇವ ದಿಗ್ಗಜ!
ಕಾರಣಿಕ ಪುರುಷ ಶ್ರೀಕೃಷ್ಣನಾದರೋ ಒಮ್ಮೊಮ್ಮೆ ದುಷ್ಟನಿಗ್ರಹ ಶಿಷ್ಟ ರಕ್ಷಣೆಗಾಗಿ ತನ್ನ ಚಕ್ರ ಹಿಡಿದದ್ದುಂಟು. ಆದರೆ ಅಹಿಂಸೆ–ಸತ್ಯಾಗ್ರಹವೆಂಬ ಅಸ್ತ್ರವನ್ನಿಡಿದ ಗಾಂಧೀಜಿ ಯಾವ ಕಾರಣಕ್ಕೂ ಹಿಂಸೆಗೆ ಪ್ರಚೋದನೆ, ಪ್ರಲೋಭನೆ ಗೈದವರಲ್ಲ. ಈ ಬಡಕಲು ಬೈರಾಗಿ ಕೊಂದು ತಿನ್ನುವೆನೆಂಬ ಹಿಂಸಾರಭಸಮತಿ ಬ್ರಿಟಿಷ್ ವ್ಯಾಘ್ರನೆದುರು ತನ್ನ ಬಿಸಿರಕ್ತದ ಗುಂಡಿಗೆಯನೊಡ್ಡಿ ನಿಂತ ಪುಣ್ಯಕೋಟಿ!
ಅಹಿಂಸೆ ಅವರ ನಾಡಿಮಿಡಿತ; ಸತ್ಯಾಗ್ರಹ ಅವರ ಗಾಯತ್ರಿ! ಭಾರತೀಯ ಜನತಾಪ್ರಜ್ಞೆಯ ಕೆನೆಪದರ ಅವರು. ಸರ್ವಜನಾಂಗದ ಶಾಂತಿಯ ತೋಟದ ಕಾವಲು ಕಾಯುತ್ತಾ ಅದಕ್ಕಾಗಿ ನೆತ್ತರು ಹರಿಸಿದವರು. ಜನರಿಂದ, ಜನರಿಗಾಗಿ, ಜನರ ಹಿತಕ್ಕಾಗಿ ಮಾಡಿ ಮಡಿದವರು. ಆದ್ದರಿಂದಲೇ ಅವರು ಮಹಾತ್ಮರಾದರು.
–ಪ್ರೊ. ಶಿವರಾಮಯ್ಯ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.