ADVERTISEMENT

ಮಳೆ, ನೆರೆ | ಸಹ್ಯಾದ್ರಿಯ ಭೂಕುಸಿತ ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 4:16 IST
Last Updated 19 ಆಗಸ್ಟ್ 2019, 4:16 IST
   

ಇತ್ತೀಚಿನ ಮಳೆ ಮತ್ತು ನೆರೆಯಿಂದಾಗಿ ಮಲೆನಾಡು ಹಾಗೂ ಕರಾವಳಿಯ ಹಲವೆಡೆ ಭಾರಿ ಭೂಕುಸಿತವಾಗಿದೆ. ಕೊಡಗಿನಲ್ಲಿ ಗುಡ್ಡಗಳೇ ಜರಿಯುತ್ತಿವೆ. ಸಹ್ಯಾದ್ರಿ ತಪ್ಪಲಿನ ಸಕಲೇಶಪುರ, ಮೂಡಿಗೆರೆ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಕಣಿವೆಗಳು ಕುಸಿದು, ತೊರೆಗಳು ದಿಕ್ಕು ಬದಲಿಸುತ್ತಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಅನೇಕ ಸ್ಥಳಗಳಲ್ಲಿ ನೆಲವೇ ಬಿರಿದು ಕಂದಕ ನಿರ್ಮಾಣವಾಗುತ್ತಿದೆ. ಕಳೆದೊಂದು ದಶಕದಿಂದ ಮಲೆನಾಡಿನಾದ್ಯಂತ ಘಟಿಸುತ್ತಿರುವ ಭೂಕುಸಿತದ ವ್ಯಾಪ್ತಿ ಮತ್ತು ಗಂಭೀರತೆ ಈಗ ಒಮ್ಮೆಲೇ ಹೆಚ್ಚಿರುವ ಪರಿಯಿದು. ಮೂಲತಃ ಸಹ್ಯಾದ್ರಿ ಶ್ರೇಣಿಯು ಗಟ್ಟಿಯಾಗಿಲ್ಲ. ಮೇಲ್ಮಣ್ಣು, ತುಂಬ ಸಡಿಲವಾದ ಜಂಬಿಟ್ಟಿಗೆ ಮತ್ತು ಬಾಸಲ್ಟ್ ಬಿರಿದು ನಿರ್ಮಾಣವಾದ ಗುಂಡುಕಲ್ಲುಗಳ ಮಿಶ್ರಣ. ಅದರಡಿ ನುಣುಪಾದ ಅಂಟುಮಣ್ಣು. ಇನ್ನು ಆಳದ ಶಿಲಾವಲಯಗಳಲ್ಲಾದರೋ ಅಪಾರ ಬಿರುಕುಗಳು ಮತ್ತು ಖಾಲಿ ಜಾಗಗಳು! ಒಮ್ಮೆಲೇ ಈ ಆಳಕ್ಕೆ ನೀರು ಇಳಿದಾಗ, ಭೂಪದರಗಳು ಮೇಲಿನ ಒತ್ತಡ ತಾಳಲಾರದೆ ಕುಸಿಯುತ್ತವೆ. ಭೂಮಿಯಾಳದಲ್ಲಿ ನಿರ್ಮಾಣವಾಗುವ ಖಾಲಿ ರಂಧ್ರಗಳ ಮೇಲೆ, ಮಳೆಯಿಂದ ಒದ್ದೆಯಾದ ಮಣ್ಣು ಭಾರ ತಾಳಲಾರದೆ ಕುಸಿದು, ಭಾರಿ ಶಬ್ದದೊಂದಿಗೆ ಸ್ಫೋಟವಾಗುವುದೂ ಇದೆ! ಇದರ ಜೊತೆಗೆ, ಭೂಕಂಪನದ ಸಾಧ್ಯತೆಯಂತೂ ಇದ್ದೇ ಇದೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕು ವ್ಯಾಪ್ತಿಯ ಚಕ್ರಾ ಜಲಾಶಯ ಪ್ರದೇಶದಲ್ಲಿ ಕಳೆದ ಬೇಸಿಗೆಯಲ್ಲೂ ಹಲವು ಸಲ ಭೂಕಂಪನವಾಗಿದೆ!

ಇಷ್ಟು ಸೂಕ್ಷ್ಮವಾದ ಸಹ್ಯಾದ್ರಿ ಶ್ರೇಣಿಯನ್ನು ಈವರೆಗೂ ರಕ್ಷಿಸಿರುವುದು ಅದರ ಮೇಲಿರುವ ಜೀವವೈವಿಧ್ಯಭರಿತ ದಟ್ಟಕಾಡಿನ ರಕ್ಷಣಾ ಹೊದಿಕೆ ಮಾತ್ರ. ಆದರೆ, ಪಶ್ಚಿಮಘಟ್ಟದಾದ್ಯಂತ ಈ ಹಸಿರುಕವಚ ವೇಗವಾಗಿ ಮಾಯವಾಗುತ್ತಿರುವುದರಿಂದ ಭೂಕುಸಿತ ಹೆಚ್ಚಾಗುತ್ತಿದೆ ಎಂಬ ಸತ್ಯವನ್ನು ಈಗಲಾದರೂ ಒಪ್ಪಿಕೊಳ್ಳಬೇಕಿದೆ.

ವ್ಯಾಪಕವಾಗಿರುವ ಅರಣ್ಯ ಅತಿಕ್ರಮಣ, ನದಿತಪ್ಪಲಿನ ಒತ್ತುವರಿ, ಮರಳು ಹಾಗೂ ಹರಳು ಗಣಿಗಾರಿಕೆ, ಮಳೆಕಾಡುಗಳ ನಡುವೆ ಕಟ್ಟುತ್ತಿರುವ ಅಣೆಕಟ್ಟುಗಳು ಮತ್ತು ಬೃಹತ್ ಕಾಲುವೆಗಳು, ಪರ್ವತ ಶ್ರೇಣಿಯನ್ನು ಸೀಳಿ ನಿರ್ಮಿಸುತ್ತಿರುವ ಹೆದ್ದಾರಿಗಳು, ಎಲ್ಲೆಂದರಲ್ಲಿ ಗುಡ್ಡ ಕತ್ತರಿಸಿ ನಿರ್ಮಿಸುವ ರೆಸಾರ್ಟ್‌ಗಳು, ಇಳಿಜಾರಿನ ಕಾಡುಕಡಿದು ರಬ್ಬರ್, ಅಕೇಶಿಯಾದಂಥ ಏಕಸಸ್ಯ ನೆಡುತೋಪು ನಿರ್ಮಿಸುವುದು- ಇವೆಲ್ಲವೂ ಇದಕ್ಕೆ ಕಾರಣವೆಂಬುದನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಮಾಡಿವೆ. ಇವನ್ನು ಈಗಲಾದರೂ ನಿಯಂತ್ರಿಸ ದಿದ್ದರೆ, ಮಲೆನಾಡು ಹಾಗೂ ಕರಾವಳಿಯ ಬದುಕಿಗೆ ಉಳಿಗಾಲವಿಲ್ಲ. ಈ ಭಾಗದಲ್ಲಿ ಭೂಕುಸಿತದ ಸಾಧ್ಯತೆ ಗಳಿರುವ ಎಲ್ಲ ಪ್ರದೇಶಗಳನ್ನು ಸರ್ಕಾರ ನಿಖರವಾಗಿ ಗುರುತಿಸಿ ರಕ್ಷಣಾತ್ಮಕ ಕ್ರಮಗಳನ್ನು ತಕ್ಷಣ ಕೈಗೊಳ್ಳ
ಬೇಕಾಗಿದೆ.

ADVERTISEMENT

ಸಹ್ಯಾದ್ರಿಶ್ರೇಣಿಗೆ ಸಮಗ್ರ ಪರಿಸರಸ್ನೇಹಿ ಭೂಬಳಕೆ ನೀತಿಯೊಂದನ್ನು ಕಟ್ಟುನಿಟ್ಟಾಗಿ ಮತ್ತು ತ್ವರಿತವಾಗಿ ಜಾರಿಗೆ ತರುವುದೊಂದೇ ಭವಿಷ್ಯದ ಬದುಕು ಕಾಯುವ ಹಾದಿ ಎಂಬುದನ್ನು ಅರಿಯಬೇಕಿದೆ.

-ಕೇಶವ ಎಚ್. ಕೊರ್ಸೆ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.