ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಮಂಗಳವಾರ, 16 ಸೆಪ್ಟೆಂಬರ್ 2025

ವಾಚಕರ ವಾಣಿ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
   

ಜ್ಞಾನಸೇತು: ಮಕ್ಕಳ ಕೈಗೆ ಮೊಬೈಲ್

ಶಿಕ್ಷಣ ಇಲಾಖೆಯು ಇತ್ತೀಚೆಗೆ ಖಾನ್ ಅಕಾಡೆಮಿಯ ಸಹಭಾಗಿತ್ವದಡಿ ‘ಜ್ಞಾನಸೇತು’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ಗೆ ಸಂಬಂಧಿಸಿದಂತೆ ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ ಬಳಸಿ ವೈಯಕ್ತಿಕ ಲಾಗಿನ್ ಮೂಲಕ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್ ಇಲ್ಲ. ಇದರಿಂದ ಮಕ್ಕಳಿಗೆ ಮನೆಯಲ್ಲಿಯೇ ಸ್ಮಾರ್ಟ್‌ಫೋನ್ ಬಳಸಿ ವಾರದಲ್ಲಿ ಮೂರು-ನಾಲ್ಕು ದಿನ ಕಲಿಕೆಯಲ್ಲಿ ತೊಡಗಿಸಲು ಖಾನ್ ಸಂಸ್ಥೆ ಹೇಳುತ್ತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳ ಪೋಷಕರು ಅನಕ್ಷರಸ್ಥರು. ಅವರಿಗೆ ಮಕ್ಕಳು ಮೊಬೈಲ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಗೊತ್ತಾಗುವುದಿಲ್ಲ. ಈಗಾಗಲೇ, ಮೊಬೈಲ್ ಗೀಳಿನಿಂದ ಹಾಳಾಗುತ್ತಿರುವ ವಿದ್ಯಾರ್ಥಿಗಳು ಮತ್ತೆ ಮೊಬೈಲ್ ವ್ಯಸನಕ್ಕೆ ಬೀಳುವ ಅಪಾಯ ಇದೆ. ಶಾಲೆಯಲ್ಲಿಯೇ ಟ್ಯಾಬ್ ಅಥವಾ ಕಂಪ್ಯೂಟರ್ ಮೂಲಕ ಈ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವುದು ಒಳ್ಳೆಯದು.  

–ರಾಧಾ ಅಶೋಕ ಚನ್ನಳ್ಳಿ, ಹಿರೇಕೆರೂರು 

ADVERTISEMENT

**********

ಹೈಕೋರ್ಟ್‌ನ ನ್ಯಾಯಯುತ ತೀರ್ಪು 

ಸಾಹಿತಿ ಬಾನು ಮುಷ್ತಾಕ್ ಅವರು, ಈ ಬಾರಿಯ ದಸರಾ ಉದ್ಘಾಟಿಸುವುದನ್ನು ವಿರೋಧಿಸಿ ಮೂವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿರುವುದಷ್ಟೇ ಅಲ್ಲ; ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ‘ಕೆಟ್ಟದರ ಮೇಲೆ ಒಳ್ಳೆಯದರ ವಿಜಯ’ ಎಂಬುದನ್ನು ಒತ್ತಿ ಹೇಳಿದೆ. ನಾಡಹಬ್ಬ ನಾಡಿನ ಎಲ್ಲರಿಗೂ ಸಮಾನ ಹಬ್ಬ. ಇಷ್ಟಕ್ಕೂ ಸೃಜನಶೀಲ ಮನಸ್ಸಿಗೆ ಯಾವುದೇ ಧರ್ಮದ ಕಟ್ಟುಪಾಡುಗಳಿರುವುದಿಲ್ಲ. ಈ ತೀರ್ಪು ಕೇವಲ ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ಮಾತ್ರ ಮುಖಭಂಗ ಅಲ್ಲ, ಬಾನು ಅವರ ಆಯ್ಕೆ ವಿರೋಧಿಸಿದ ಎಲ್ಲರ ಮನಃಸ್ಥಿತಿಗೂ ಚಾಟಿ ಬೀಸಿದೆ.

–ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

**********

ಮಾಧ್ಯಮ ಸ್ವಾತಂತ್ರ್ಯದ ವಿಡಂಬನೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯುನ್ಮಾನ ಮಾಧ್ಯಮಗಳು ಎಲ್ಲಿಲ್ಲದ ಬಣ್ಣ ಹಚ್ಚಿ ಷಡ್ಯಂತ್ರಕ್ಕೆ ಮಾದರಿ ಎಂಬಂತೆ ತುತ್ತೂರಿ ಊದುತ್ತಿವೆ. ಇದು ಮಾಧ್ಯಮ ಸ್ವಾತಂತ್ರ್ಯದ ವಿಡಂಬನೆಯೇ ಸರಿ.

–ಚನ್ನಬಸವ ಪುತ್ತೂರ್ಕರ‌, ಉಡುಪಿ

**********

ಸಿ.ಎಂ ಹೇಳಿಕೆ ಒಪ್ಪಿಗೆಗೆ ಅರ್ಹ

ಹಿಂದೂ ಧರ್ಮದಿಂದ ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಆಯಾ ಧರ್ಮಕ್ಕೆ ಸೇರಿದವರಾಗಿರುತ್ತಾರೆಯೇ ಹೊರತು ಮತ್ತೆ ಹಿಂದೂ ಧರ್ಮೀಯರಾಗುವುದಿಲ್ಲ. ಈ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ‘ಮತಾಂತರ ಗೊಂಡವರು ಕ್ರೈಸ್ತರೇ’ ಎಂದು ಹೇಳಿರುವುದು ಸರಿಯಾಗಿಯೇ ಇದೆ. (ಪ್ರ.ವಾ., ಸೆಪ್ಟೆಂಬರ್ 13). ಹಿಂದೂ ಧರ್ಮದ ಜಾತಿಗಳು ಪ್ರಧಾನವಾಗಿ ಕಸುಬು ಆಧಾರಿತವಾದವು ಮತ್ತು ಪ್ರತಿಯೊಂದು ಜಾತಿಗೂ ಅದರದೇ ಆದ ಕುಲದೇವರು ಅರ್ಥಾತ್ ಕುಟುಂಬಕ್ಕೆ ಮನೆದೇವರು, ಆಚಾರ, ವಿಚಾರಗಳಿರುತ್ತವೆ. ಇವನ್ನೆಲ್ಲ ತೊರೆದ ಮೇಲೆ ಮತ್ತು ಅನ್ಯಧರ್ಮೀಯ ದೇವರು ಮತ್ತು ಆಚಾರ ವಿಚಾರವನ್ನು ಒಪ್ಪಿ ಅಪ್ಪಿಕೊಂಡ ಮೇಲೆಯೂ ಅವರು ಮೂಲ ಜಾತಿ, ಧರ್ಮ ಹೇಳುವುದು ಇಬ್ಬಂದಿತನ. ಮತಾಂತರಗೊಂಡವರನ್ನು ಅವರ ಹೊಸ ಧರ್ಮದ ಹೆಸರಿನಲ್ಲಿಯೇ ಗುರುತಿಸಬೇಕು ಮತ್ತು ನಮೂದಿಸಬೇಕು.  

–ಹೊರೆಯಾಲ ದೊರೆಸ್ವಾಮಿ, ಮೈಸೂರು 

**********

ನಿರಂತರ ಕಣ್ಗಾವಲು ಅಗತ್ಯ

ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಕಲ್ಲುತೂರಾಟ ಮತ್ತು ಭಾರತದ ವಿರೋಧಿ ಘೋಷಣೆ ಕೂಗುವವರು ಅಮಾಯಕರಲ್ಲ. ಪರಿಸ್ಥಿತಿ ನೋಡಿಕೊಂಡು ಅವರು ಗಲಭೆ ಎಬ್ಬಿಸುತ್ತಾರೆ. ಇಂಥವರ ಮೇಲೆ ನಿರಂತರ ಕಣ್ಗಾವಲು ಇಡಬೇಕಿದೆ. ಕೋಮುಗಲಭೆ ಹತ್ತಿಕ್ಕಲು ಪೊಲೀಸರು ಕೈಗೊಳ್ಳುವ ಕ್ರಮಗಳು ಅಪರಾಧ ಪ್ರವೃತ್ತಿಯ ಜನರಲ್ಲಿ ಕಾನೂನಿನ ಬಗ್ಗೆ ಭಯ ಹುಟ್ಟಿಸುವಂತಿರಬೇಕು. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಮನದಟ್ಟಾದರೆ ಅವರಲ್ಲಿ ಭಯ ಮೂಡಲಿದೆ. ಇಂಥ ಸಂದರ್ಭಗಳಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡದೆ ಪೊಲೀಸರಿಗೆ ಮುಕ್ತ ಅವಕಾಶ ನೀಡಬೇಕು. 

–ಉದಯ ಮ. ಯಂಡಿಗೇರಿ, ಧಾರವಾಡ

**********

ದಸರಾ ರಜೆ ಮೊಟಕು ಮಾಡಬೇಡಿ

ನವರಾತ್ರಿ ಹಬ್ಬವು ಈ ಬಾರಿ ಮುಂಚಿತವಾಗಿ ಪ್ರಾರಂಭವಾಗಿದೆ. ಶಾಲೆಗಳಿಗೆ ಸೆಪ್ಟೆಂಬರ್ 21ರಿಂದ ಅಕ್ಟೋಬರ್‌ 7ರವರೆಗೆ ದಸರಾ ರಜೆ ನೀಡಬೇಕೆಂದು ಶಿಕ್ಷಣ ಇಲಾಖೆಯು ಆದೇಶಿಸಿದೆ. ಆದರೆ, ಪ್ರತಿ ವರ್ಷ ಹಲವು ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆ ಆದೇಶವನ್ನು ಮೀರಿ, ದಸರೆ ರಜೆಯನ್ನು ಮೊಟಕುಗೊಳಿಸುತ್ತವೆ. ರಜೆ ನೀಡುವುದು ಮಕ್ಕಳಿಗೆ ವಿರಾಮ ಸಿಗಲಿ ಎಂದಲ್ಲ. ಅವರಿಗೆ ನಾಡಿನ ಕಲೆ, ಸಂಸ್ಕೃತಿಯ ಪರಿಚಯವಾಗಲಿ, ಸಾಮರಸ್ಯ ಒಡಮೂಡಲಿ ಎನ್ನುವುದು ರಜೆಯ ಉದ್ದೇಶವಾಗಿದೆ. ಶಾಲೆಯ ಹೊರಗೂ ಒಂದು ಕಲಿಕೆ‌ ನಡೆಯುತ್ತದೆ ಎನ್ನುವ ಪ್ರಜ್ಞೆಯು, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಲ್ಲಿ ಮೂಡಬೇಕಿದೆ. ಈ ಬಾರಿ ಪೂರ್ಣ ಪ್ರಮಾಣದ ದಸರಾ ರಜೆ ಖಾಸಗಿ ಶಾಲೆ ಮಕ್ಕಳಿಗೂ ದೊರೆಯಲಿ.

–ಸುರೇಂದ್ರ ಪೈ, ಭಟ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.