ಯುವಜನ ಯೋಗಕ್ಷೇಮವೆ ದೇಶಪ್ರೇಮ
ಚಿತ್ತಾಪೂರದಲ್ಲಿ ಆರ್‌ಎಸ್‌ಎಸ್ ತನ್ನ ಪಥಸಂಚಲನಕ್ಕೆ ಸಜ್ಜಾಗಿದೆ. ಭೀಮ್ ಅರ್ಮಿ ಸಂಘಟನೆಯೂ ಪಥ ಸಂಚಲನ ನಡೆಸಲು ಅನುಮತಿ ಕೋರಿದೆ. ಭಾರತದ ಯುವಜನತೆಗೆ ಪ್ರಸ್ತುತ ಅವಶ್ಯವಿರುವುದು ಪಥಸಂಚಲನದ ಪ್ರದರ್ಶನವಲ್ಲ; ದುಡಿಯುವ ಕೈಗಳಿಗೆ ಕೆಲಸ ಮತ್ತು ಉದ್ಯೋಗಕ್ಕೆ ಬೇಕಿರುವ ಕೌಶಲಗಳು. ಯುವಜನರೇ ಈ ದೇಶ, ಅವರ ಶ್ರೇಯೋಭಿವೃದ್ಧಿಯೇ ದೇಶಪ್ರೇಮ ಎಂಬುದನ್ನು ದೇಶಪ್ರೇಮದ ಹೆಸರಲ್ಲಿ ಯುವಕರನ್ನು ಪ್ರಚೋದಿಸುವ ಸಂಘಟನೆಗಳು ಅರಿಯಲಿ.
– ನಾಗಾರ್ಜುನ ಹೊಸಮನಿ, ಕಲಬುರಗಿ
_____________
ರೈತ ಹೋರಾಟ ಎನ್ನುವ ‘ಸತ್ಯ ಸಂಗ್ರಾಮ’
ರೈತ ತನ್ನ ಬೆವರಿನಿಂದ ದೇಶಕ್ಕೆ ಅನ್ನ ನೀಡುತ್ತಾನೆ. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಅವನೇ ಅತಿ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾನೆ. ಸರ್ಕಾರದ ನೀತಿಗಳು, ಮಧ್ಯವರ್ತಿಗಳ ದೌರ್ಜನ್ಯ, ಮಾರುಕಟ್ಟೆಯ ಅಸ್ಥಿರತೆ, ಎಲ್ಲವೂ ರೈತನ ಬದುಕನ್ನು ಹಾಳುಮಾಡಿವೆ. ಕೃಷಿಭೂಮಿಯನ್ನು ರಕ್ಷಿಸಬೇಕಾದ ವ್ಯವಸ್ಥೆಯೇ ರೈತನ ವಿರುದ್ಧ ನಿಂತಿದೆ. ಬೆಳೆಗಾರನಿಗೆ ಸಮರ್ಪಕ ಬೆಲೆ ದೊರಕಿಸಿಕೊಡದ ವ್ಯವಸ್ಥೆ, ‘ಬೇಲಿ ಹೊಲವನ್ನು ಮೇಯುವ’ ಮಾತಿಗೆ ತಕ್ಕಂತಿದೆ. ಇತ್ತೀಚೆಗೆ ನಡೆದ ಕಬ್ಬು ಬೆಳೆಗಾರರ ಹೋರಾಟವು ಈ ಅನ್ಯಾಯದ ವಿರುದ್ಧದ ಎಚ್ಚರಿಕೆಯ ಗಂಟೆ. ಅದು ಒಂದು ಬೇಡಿಕೆಯ ಹೋರಾಟ ಮಾತ್ರವಲ್ಲ; ಬದುಕು, ಗೌರವ ಮತ್ತು ಅಸ್ತಿತ್ವಕ್ಕಾಗಿ ನಡೆದ, ನಡೆಯುತ್ತಿರುವ ಸತ್ಯಸಂಗ್ರಾಮ. ಸಮಾಜವು ರೈತನ ಕಷ್ಟವನ್ನು ಅರಿತು, ನ್ಯಾಯದ ಧ್ವನಿಗೆ ಬೆಂಬಲ ನೀಡಬೇಕಾಗಿದೆ. ಅದೇ ನಿಜವಾದ ಪ್ರಗತಿಯ ದಾರಿ.
– ವಾಸುಕಿ ನಾಗರಾಜ್
_____________
ಸುರಂಗ ಮಾರ್ಗದಂತೆ ಭೂಗರ್ಭನಗರ!
ಬೆಂಗಳೂರು ಮಿತಿ ಮೀರಿ ಬೆಳೆಯುತ್ತಿದೆ. ಅದರ ಧಾರಣಾ ಸಾಮರ್ಥ್ಯ ಕೊನೆಗೊಂಡಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಹನಗಳ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ರಾಜಕಾರಣಿಗಳು, ಮುಂದೆ ಬೆಂಗಳೂರಿನ ನೆಲದಡಿಯಲ್ಲಿ ಮತ್ತೊಂದು ‘ಭೂಗರ್ಭ ಬೆಂಗಳೂರು’ ನಗರ ನಿರ್ಮಿಸಬಹುದೇನೋ!
– ಪ್ರಶಾಂತ್ ಕೆ.ಸಿ., ಚಾಮರಾಜನಗರ
_____________
ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆ ಬಳಸಲಿ
ಬ್ಯಾಂಕ್ ಸಿಬ್ಬಂದಿ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲಿ ಎನ್ನುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಲಹೆ ಸ್ವಾಗತಾರ್ಹ. ನಮ್ಮ ರಾಜ್ಯದ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪರಭಾಷಿಕ ಉದ್ಯೋಗಿಗಳಿದ್ದಾರೆ. ಅವರೊಂದಿಗೆ ಹಿಂದಿ ತಿಳಿಯದವರು ವ್ಯವಹರಿಸುವುದು ಕಷ್ಟ. ಬೇರೆ ರಾಜ್ಯದ ಬ್ಯಾಂಕ್ ನೌಕರರು ಪ್ರಾದೇಶಿಕ ಭಾಷೆಯನ್ನು ಕಲಿತು ಮಾತನಾಡಿದರೆ, ಜನಸಾಮಾನ್ಯರು ಸಲೀಸಾಗಿ ವ್ಯವಹರಿಸಲು ಅನುಕೂಲ ಆಗುತ್ತದೆ.
– ಜಯವೀರ ಎ.ಕೆ., ಖೇಮಲಾಪುರ
_____________
ಲೋಕಾಯುಕ್ತ ಬಲಗೊಳ್ಳಲು ತಿದ್ದುಪಡಿ
ಲೋಕಾಯುಕ್ತ ಕಾಯ್ದೆಯ ತಿದ್ದುಪಡಿ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿರುವುದರಲ್ಲಿ (ಪ್ರ.ವಾ., ನ. 10) ಅರ್ಥವಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಸಮಗ್ರ ತಿದ್ದುಪಡಿ ಅವಶ್ಯಕತೆ ಖಂಡಿತವಾಗಿಯೂ ಇದೆ. ಲೋಕಾಯುಕ್ತ ಸಂಸ್ಥೆ ಕಾಗದದ ಹುಲಿ ಆಗಬಾರದು. ಲೋಕಾಯುಕ್ತ ಅಧಿಕಾರಿಗಳು ಅವ್ಯವಹಾರಗಳನ್ನು ಬಯಲಿಗೆಳೆಯುವುದು ಪ್ರದರ್ಶನದಂತಿದೆಯೇ ಹೊರತು, ಸುಧಾರಣೆಯ ಕ್ರಮದಂತಿಲ್ಲ. ಪ್ರತಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈಗಾಗಲೇ ಲೋಕಾಯುಕ್ತರ ಪ್ರಶ್ನೆಗಳಿಗೆ ಉತ್ತರಿಸಲು ಮಾನಸಿಕವಾಗಿ ಸಿದ್ಧಗೊಂಡಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವೇ ಇಲ್ಲ ಎಂದು ಜನಸಾಮಾನ್ಯರಿಗೆ ಅನ್ನಿಸುತ್ತಿದೆ. ಈ ಮನೋಭಾವ ಬದಲಾಗಿ, ಲೋಕಾಯುಕ್ತ ಬಲಗೊಳ್ಳಲು ಕಾಯ್ದೆಯ ತಿದ್ದುಪಡಿಯೊಂದೇ ದಾರಿ.
– ತಿಮ್ಮೇಶ ಮುಸ್ಟೂರು, ಜಗಳೂರು
_____________
ಜಾರಿ ಬಿದ್ದ ಜಟ್ಟಿ ಮಾತುಗಳಲ್ಲಿ ಜೀವಂತ
ಜಟ್ಟಿ ಜಾರಿ ಬಿದ್ದರೆ ಅದೂ ಒಂದು ಪಟ್ಟು ಎಂದದ್ದು ಹಳೇ ಗಾದೆ. ಆದರೆ ಈಗ, ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ನಿತ್ಯ ನುಡಿ ಜಾರಿ ಬಿದ್ದೂ ಬಿದ್ದೂ, ಗೊಂದಲಕರ ತರಹೇವಾರಿ ಹೇಳಿಕೆ ಕೊಡುವ ಮೂಲಕ ಮಾಧ್ಯಮಗಳಲ್ಲಿ ದಿನ ದಿನ ಜೀವ ಪಡೆವ ಉಪಾಯ ತೋರಿದ್ದಾರೆ. ಅವರಿಗೆ ವಿಶ್ರಾಂತಿ ಅಗತ್ಯವಿದ್ದರೂ ನಿವೃತ್ತಿ ವಿಷಯದಲ್ಲಿ ಪ್ರಧಾನಿ ಅವರೊಂದಿಗೆ ಪೈಪೋಟಿ ನಡೆಸುತ್ತಿರುವಂತಿದೆ.
– ಟಿ. ಗೋವಿಂದರಾಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.