ADVERTISEMENT

ವಾಚಕರ ವಾಣಿ | ಕೃಷಿ ಕಾಯ್ದೆ: ಬಿಹಾರ ಪಾಠವಾಗಲಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 17:48 IST
Last Updated 23 ಫೆಬ್ರುವರಿ 2021, 17:48 IST

‘ಕೃಷಿ ಕಾಯ್ದೆಗೆ ಏಕೆ ವಿರೋಧ?’ ಎಂಬ ಎ.ಸೂರ್ಯಪ್ರಕಾಶ್ ಅವರ ಲೇಖನ (ಪ್ರ.ವಾ., ಫೆ. 22) ಒಂದು ಮೇಲ್ನೋಟದ, ಅತ್ಯಂತ ಸರಳವಾದ ವಿಶ್ಲೇಷಣೆಯೇ ಹೊರತು, ಆ ಕಾಯ್ದೆಯ ದೂರಗಾಮಿ ಪರಿಣಾಮಗಳನ್ನಾಗಲೀ ಖಾಸಗೀಕರಣದ ಒಳಸುಳಿಗಳನ್ನಾಗಲೀ ತೆರೆದಿಡುವ ಸೂಕ್ಷ್ಮಾವಲೋಕನವಲ್ಲ ಎಂದೆನಿಸುತ್ತದೆ. ಹೊಸ ಕಾಯ್ದೆಯು ರೈತರಿಗೆ ಮಾರುಕಟ್ಟೆಯನ್ನು ಮುಕ್ತಗೊಳಿಸಿ ಅವರನ್ನು ಸಶಕ್ತರನ್ನಾಗಿಸುತ್ತದೆ ಎಂಬುದು ಭ್ರಮೆ ಅಷ್ಟೆ. ಮೇಲ್ನೋಟಕ್ಕೆ ಹೌದೆನಿಸಿದರೂ ವಾಸ್ತವದಲ್ಲಿ ರೈತ ಬಲಿಷ್ಠ ಕಾರ್ಪೊರೇಟ್ ಕಂಪನಿಗಳ ಕಪಿಮುಷ್ಟಿಗೆ ಪಕ್ಕಾಗಿ ಇನ್ನೂ ಹೀನಾಯ ಸ್ಥಿತಿಗೆ ಹೋಗುತ್ತಾನೆ ಎಂಬುದಕ್ಕೆ ಇಂದು ಬಿಹಾರ ನಮ್ಮ ಮುಂದೆ ಜ್ವಲಂತ ನಿದರ್ಶನವಾಗಿದೆ.

2006ರಲ್ಲಿ ಅಲ್ಲಿ ಅಧಿಕಾರಕ್ಕೆ ಬಂದ ನಿತೀಶ್ ಕುಮಾರ್ ಅವರು ಎಪಿಎಂಸಿಗಳನ್ನು ರದ್ದು ಮಾಡಿ ಕೃಷಿ ಮಾರುಕಟ್ಟೆಯನ್ನು ಮುಕ್ತಗೊಳಿಸಿದರು. 14 ವರ್ಷಗಳ ನಂತರವೂ ರೈತ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ವರ್ತಕರಿಗೆ ತನ್ನ ಸರಕನ್ನು ಮಾರುವ ಅನಿವಾರ್ಯ ಸ್ಥಿತಿಗೆ ಸಿಲುಕಿದ್ದಾನೆ ಎಂದು ವರದಿಗಳು ತಿಳಿಸುತ್ತವೆ. ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಅಪ್ಲೈಡ್‌ ಎಕನಾಮಿಕ್‌ ರಿಸರ್ಚ್‌ ಎಂಬ ಸಂಸ್ಥೆ ತನ್ನ 2019ರ ವರದಿಯಲ್ಲಿ, ಕಾಯ್ದೆಯ ಎಲ್ಲ ನಿರೀಕ್ಷೆಗಳು ಹುಸಿಗೊಂಡಿರುವುದನ್ನು ಸ್ಪಷ್ಟಪಡಿಸಿದೆ. ಸರ್ಕಾರದ ಹಿಡಿತದಲ್ಲೇ ಇರುವ ಎಪಿಎಂಸಿಗಳಲ್ಲಿ ನಡೆಯುತ್ತಿರುವ ದಲ್ಲಾಳಿಗಳ ದೌರ್ಜನ್ಯವನ್ನೇ ಸರಿಪಡಿಸಲಾಗದಿದ್ದರೆ ನಾಳೆ ಕಾರ್ಪೊರೇಟ್ ಕುಳಗಳನ್ನು ನಿರ್ವಹಿಸಲಾದೀತೆ? ಈಗಾಗಲೇ ನೂರಾರು ಎಕರೆ ಭೂಸ್ವಾಧೀನ, ಗೋದಾಮು ನಿರ್ಮಾಣ, ರೈಲ್ವೆಮಾರ್ಗ ಇತ್ಯಾದಿ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಕೆಲವೇ ಬಂಡವಾಳಿಗರ ಏಕಸ್ವಾಮ್ಯವು ವಿಜೃಂಭಿಸಲು ಕಾರಣವಾಗುವ ಈ ಕಾಯ್ದೆಗಳನ್ನು ಸಮರ್ಥಿಸುವುದು ಎಷ್ಟು ಸರಿ

-ಪು.ಸೂ.ಲಕ್ಷ್ಮೀನಾರಾಯಣ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.