ADVERTISEMENT

ಬಡ್ಡಿ ಮನ್ನಾ– ಆರ್‌ಬಿಐ ವಿತಂಡವಾದ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 18:43 IST
Last Updated 7 ಜೂನ್ 2020, 18:43 IST

‘ಬಡ್ಡಿ ಮನ್ನಾ ಮಾಡುವುದು ಬ್ಯಾಂಕುಗಳ ಆರ್ಥಿಕ ಸ್ಥಿರತೆಯನ್ನು ಅಪಾಯಕ್ಕೆ ಒಡ್ಡುವುದರ ಜತೆಗೆ ಠೇವಣಿದಾರರ ಹಿತಾಸಕ್ತಿಯನ್ನೂ ಹಾಳುಗೆಡವುತ್ತದೆ. ಇದರಿಂದ ಬ್ಯಾಂಕುಗಳಿಗೆ 2 ಲಕ್ಷ ಕೋಟಿಯವರೆಗೂ ನಷ್ಟವಾಗಬಹುದು’ ಎಂದು ಸುಪ್ರೀಂ ಕೋರ್ಟಿನಲ್ಲಿ ಆರ್‌ಬಿಐ ವಾದ ಮಂಡಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ಜನರ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ಕಂತು ಪಾವತಿ ಮುಂದೂಡಿರುವುದು ವಿಶೇಷ ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ವಿನಾ ಸಾಧಾರಣ ಸಮಯದಲ್ಲಿ ಅಲ್ಲ ಎಂಬ ವಾಸ್ತವವನ್ನು ಆರ್‌ಬಿಐ ಮರೆಮಾಚುತ್ತಿದೆ. ಇಂದಿನ
ಪರಿಸ್ಥಿತಿಯಲ್ಲಿ ಆರ್‌ಬಿಐನ ಈ ವಾದ ಅತ್ಯಂತ ಕ್ರೂರ ಎನಿಸುತ್ತದೆ.

ಬ್ಯಾಂಕುಗಳಲ್ಲಿ ಸಾಲ ಪಡೆದವರು ಸಾಲ ಹಿಂತಿರುಗಿಸಲಾರದ ಸ್ಥಿತಿ ತಲುಪಿದಾಗ, ಒಂದು ಬಾರಿಯ ಇತ್ಯರ್ಥ (ಒನ್‌ ಟೈಮ್‌ ಸೆಟಲ್‌ಮೆಂಟ್‌) ಸೌಲಭ್ಯದ ಮೂಲಕ ಸಾಲ ವಸೂಲಿ ಮಾಡುತ್ತಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಗಣ್ಯ ವ್ಯಕ್ತಿಗಳೇ ಆ ಸೌಲಭ್ಯವನ್ನು ಹೆಚ್ಚು ಬಳಸುತ್ತಾರೆ.

ಆ ಮೂಲಕ, ಅನೇಕ ಬಾರಿ ಬ್ಯಾಂಕುಗಳು ಆ ಸಾಲಗಾರನ ಬಡ್ಡಿ ಮನ್ನಾ ಮಾಡಿ ಅಸಲನ್ನು ಮಾತ್ರ ಹಿಂಪಡೆಯುವ ಪ್ರತೀತಿ ಇದೆ. ಈವ್ಯವಹಾರದಲ್ಲಿ ಬ್ಯಾಂಕುಗಳು ಕೋಟ್ಯಂತರ ರೂಪಾಯಿಗಳ ಬಡ್ಡಿಯನ್ನು ಕಳೆದುಕೊಳ್ಳುತ್ತವೆಂಬ ಮಾಹಿತಿ ಇದೆ. ಅದಲ್ಲದೆ ಉದ್ದೇಶಪೂರ್ವಕ ಸುಸ್ತಿದಾರರು ಸಾಲ ಹಿಂತಿರುಗಿಸದೆ ವಿದೇಶಕ್ಕೆ ಓಡಿಹೋದ ನಿದರ್ಶನಗಳು ನಮ್ಮ ಮುಂದಿವೆ. ಆ ಮೂಲಕ ಮತ್ತೆ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ.

ADVERTISEMENT

ಇವುಗಳಲ್ಲದೆ, ಪ್ರತಿವರ್ಷ ಕೆಲವು ಕಂಪನಿಗಳ ಸಾಲ ಮನ್ನಾ ಮಾಡುತ್ತಿರುವುದರಿಂದ ಆಗುತ್ತಿರುವ ನಷ್ಟವನ್ನು ಸೇರಿಸಿದರೆ ಅದು ಇನ್ನೂ ಹೆಚ್ಚಾಗುತ್ತದೆ. ಈ ನಷ್ಟವನ್ನು ತುಂಬಲು ಕೇಂದ್ರ ಸರ್ಕಾರವು ‘ತೆರಿಗೆದಾರರ ಹಣ’ವನ್ನು ಬ್ಯಾಂಕುಗಳಿಗೆ ಉತ್ತೇಜನಕಾರಿ ನಿಧಿಯನ್ನಾಗಿ ನೀಡುತ್ತದೆ. ಈ ವಿಷಚಕ್ರ ನಿರಂತರವಾಗಿ ಸಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳ ದೀರ್ಘಕಾಲದ ಸುಸ್ಥಿರತೆಗೆ ಸುಪ್ರೀಂ ಕೋರ್ಟ್ ಒಂದು ಯೋಜನೆಯನ್ನು ನೀಡಬಹುದೆಂಬ ನಿರೀಕ್ಷೆ ಜನರದ್ದಾಗಿದೆ.
-ಟಿ.ಸುರೇಂದ್ರ ರಾವ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.