ADVERTISEMENT

ತೆರಿಗೆ ದಾಳಿ: ಗಂಭೀರವಾದ ಕ್ರಮ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಅಕ್ಟೋಬರ್ 2021, 19:30 IST
Last Updated 12 ಅಕ್ಟೋಬರ್ 2021, 19:30 IST

ರಾಜಕಾರಣಿಗಳ ಮತ್ತು ಅವರೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳ ಮೇಲೆ ತೆರಿಗೆ ದಾಳಿಗಳಾದಾಗ, ತೆರಿಗೆ ಇಲಾಖೆಯನ್ನು ರಾಜಕೀಯ ಪಕ್ಷಗಳು (ಮುಖ್ಯವಾಗಿ ಆಡಳಿತ ಪಕ್ಷ) ತಮ್ಮ ದಾಳವನ್ನಾಗಿ ಬಳಸುತ್ತವೆ ಎನ್ನುವ ಮಾತು ಕೇಳಿಬರುತ್ತದೆ. ಅರ್ಥಾತ್, ತೆರಿಗೆ ಇಲಾಖೆಯು ಆಡಳಿತಾರೂಢ ಪಕ್ಷದ ಕೈಗೊಂಬೆಯಂತಿದೆ ಎನ್ನುವುದು ಪ್ರತೀತಿ. ಇಲಾಖೆ ತನ್ನದೇ ಶ್ರಮದಿಂದ ಮಾಹಿತಿ ಸಂಗ್ರಹಿಸಿ ಒಬ್ಬ ರಾಜಕೀಯ ವ್ಯಕ್ತಿಯ ವಿರುದ್ಧ ದಾಳಿ ಮಾಡಿದರೂ ಅದಕ್ಕೆ ರಾಜಕೀಯ ಬಣ್ಣ ಬಳಿಯುವುದು ಸಾಮಾನ್ಯವಾಗಿದೆ.

ವಾಸ್ತವದಲ್ಲಿ ತೆರಿಗೆ ದಾಳಿ ಬಹಳ ಗಂಭೀರವಾದ ಕ್ರಮ. ತೆರಿಗೆಗೆ ಸಂಬಂಧಿಸಿದಂತೆ ಬಗೆಬಗೆಯ ಮಾಹಿತಿಗಳು ಇಲಾಖೆಗೆ ವಿವಿಧ ಮೂಲಗಳಿಂದ ಬರುತ್ತವೆ. ರಾಜಕೀಯ ವ್ಯಕ್ತಿಗಳ ವಿರುದ್ಧದ ವೈಷಮ್ಯದಿಂದಲೂ ಮಾಹಿತಿ ಬರಬಹುದು. ಆದರೆ, ಅಂತಿಮವಾಗಿ ಮಾಹಿತಿಯ ಸ್ವರೂಪ, ಖಚಿತತೆ, ತೆರಿಗೆ ವಂಚನೆ ಸಾಧ್ಯತೆ ಕುರಿತ ಸತ್ಯಾಸತ್ಯತೆಯನ್ನು ಇಲಾಖೆ ತನ್ನದೇ ವಿಧಾನದಿಂದ, ಮೂಲದಿಂದ ತನಿಖೆ ನಡೆಸಿ ಖಚಿತ ಮಾಡಿಕೊಳ್ಳುತ್ತದೆ. ಹೀಗೆ ಹಲವು ಹತ್ತು ಕೋನಗಳಿಂದ ಖಚಿತಪಡಿಸಿಕೊಂಡು, ನಿರ್ದಿಷ್ಟ ಮೇಲಧಿಕಾರಿಗಳಿಂದ ಅನುಮತಿ ಪಡೆದೇ ದಾಳಿಗೆ ಮುಂದಾಗಬೇಕು. ಇನ್ನೂ ಮುಖ್ಯವಾದ ಮಾತೆಂದರೆ, ಹೀಗೆ ಅನುಮತಿ ನೀಡುವಮೇಲಧಿಕಾರಿ ಕೂಡ ದಾಖಲೆಗಳೆಲ್ಲವನ್ನೂ ಸ್ವತಃ ಅವಲೋಕಿಸಿ, ದಾಳಿಯ ಅಗತ್ಯ ಮನವರಿಕೆ ಮಾಡಿಕೊಂಡು, ದಾಳಿಗೆ ಅನುಮತಿ ನೀಡುತ್ತಿರುವುದೇಕೆ ಎನ್ನುವುದನ್ನು ವಿವರವಾಗಿ ಲಿಖಿತ ರೂಪದಲ್ಲಿ ದಾಖಲಿಸಿರುತ್ತಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಇದನ್ನು ಪರೀಕ್ಷಿಸುವ ಅಧಿಕಾರ ಹೊಂದಿವೆ.‌ ಅಚ್ಚರಿ ಎಂದರೆ, ತಮ್ಮವರ ಮೇಲೆ ನಡೆದ ತೆರಿಗೆ ದಾಳಿಗಳ ಬಗ್ಗೆ ಹೌಹಾರುವ ರಾಜಕೀಯ ವ್ಯಕ್ತಿಗಳು, ದಾಳಿಗಳು ರಾಜಕೀಯ ಪ್ರೇರಿತವಾಗಿವೆ, ಕಾಯ್ದೆ ಬಾಹಿರವಾಗಿವೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಹೋಗಿರುವ ಸಂದರ್ಭಗಳಿವೆಯೇ? ಇಲ್ಲ. ಏಕೆಂದರೆ ದಾಳಿ ನಡೆದಾಗ ತೆರಿಗೆ ವಂಚನೆಯ ಕುರಿತು ಪುರಾವೆಗಳು ಸಿಕ್ಕಿರುತ್ತವೆ. ಎಂದರೆ, ದಾಳಿಗಳು ಯಾರದೋ ಮನೋಲಹರಿಗೆ ಅನುಗುಣ ವಾಗಿಯೇ ನಡೆದುವಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಬೇಕು.

- ಸಾಮಗ ದತ್ತಾತ್ರಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.