ADVERTISEMENT

ಯಾರನ್ನು ದೂಷಿಸುವುದು?

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 18:23 IST
Last Updated 6 ಜನವರಿ 2020, 18:23 IST

ಶೃಂಗೇರಿಯಲ್ಲಿ ಇದೇ 10ರಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿರುವ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ನಿರಾಕರಿಸಿರುವುದು ವರದಿಯಾಗಿದೆ (ಪ್ರ.ವಾ., ಜ. 6). ಈ ರೀತಿಯ ಬೆಳವಣಿಗೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿಗೆ ಬಹುದೊಡ್ಡ ಹೊಡೆತ ಬಿದ್ದಂತಲ್ಲವೇ? ಒಂದು ಸಮ್ಮೇಳನದ ಪೂರ್ವಭಾವಿ ತಯಾರಿ ಮತ್ತು ರೂಪುರೇಷೆಗಳು ಯಾವುದೇ ಏಕವ್ಯಕ್ತಿಯಿಂದ ದಿಢೀರನೆ ಆಗುವುದಿಲ್ಲ. ತನ್ನದೇ ಆದ ನಿಯಮಾವಳಿಗಳ ಮೂಲಕವೇ ಈ ಕಾರ್ಯಗಳು ನಡೆದಿರುತ್ತವೆ. ಹಾಗಿದ್ದರೂ ಸಮ್ಮೇಳನದ ದಿನಾಂಕ ನಿಗದಿಯಾಗಿ, ಸರ್ವಾಧ್ಯಕ್ಷರ ಆಯ್ಕೆಯಾದ ಮೇಲೂ ಸಮ್ಮೇಳನವೊಂದು ವಿವಾದಕ್ಕೆ ಸಿಲುಕುತ್ತದೆ ಎಂದರೆ, ಅದಕ್ಕೆ ಯಾರನ್ನು ದೂಷಿಸುವುದು? ಸರ್ಕಾರವನ್ನೇ, ಸಚಿವರನ್ನೇ ಅಥವಾ ಸಾಹಿತ್ಯ ಪರಿಷತ್ತನ್ನೇ? ಇವ್ಯಾವುವನ್ನೂ ಅಲ್ಲ ಎನ್ನುವುದಾದರೆ, ನಮ್ಮ ಸಂಸ್ಕೃತಿಯನ್ನೇ?

ಸಾಹಿತ್ಯ ಕ್ಷೇತ್ರದೊಳಗೆ ರಾಜಕೀಯ ಬೆರೆತುಹೋಗಿ ಬಹಳ ಕಾಲವಾಯಿತು. ಆದರೆ ಅದು ವೈಯಕ್ತಿಕ ಧೋರಣೆಗಳಿಂದ ತುಂಬಿಕೊಳ್ಳುತ್ತಿದೆ ಎನ್ನುವುದಾದರೆ, ಕನ್ನಡ, ಸಾಹಿತ್ಯ, ಸಂಸ್ಕೃತಿ, ಈ ನೆಲ, ಭಾಷೆ ಎಲ್ಲವೂ ತೋರಿಕೆಮಯವಾಗುತ್ತವೆ. ಯಾರನ್ನೋ ಮೆಚ್ಚಿಸಲು, ಮತ್ಯಾವುದೋ ವ್ಯವಸ್ಥೆಯನ್ನು ವಿಜೃಂಭಿಸಲು ಅವುಗಳನ್ನು ಬಳಸಿದಂತೆ ಆಗುತ್ತದೆ. ರಾಜಕೀಯವು ಹೊಲಸಾಗಿರುವುದಂತೂ ಸತ್ಯ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತೂ ಇಂತಹ ಅಸಂಗತ ಕರಿನೆರಳನ್ನು ಹೊದ್ದುಕೊಂಡು ಉಸಿರಾಡಬೇಕಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು?

-ಅಶ್ವತ್ಥ ಕಲ್ಲೇದೇವರಹಳ್ಳಿ, ಕಡೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.