ADVERTISEMENT

ಅಪಘಾತ ಸಂತ್ರಸ್ತರ ರಕ್ಷಿಸುವ ಬದಲು, ವಸ್ತುಗಳನ್ನು ಲಪಟಾಯಿಸುವುದು ಮುಜುಗರದ ಸಂಗತಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:45 IST
Last Updated 4 ನವೆಂಬರ್ 2019, 19:45 IST
   

ಮಾನವೀಯತೆ ತೊಳೆದುಹಾಕಿದ ‘ಲಕ್ಸ್’ (ಪ್ರ.ವಾ., ನ. 4) ಘಟನೆಯು ಅಮಾನವೀಯ ವರ್ತನೆಯ ಕೆಟ್ಟ ನಿದರ್ಶನ. ಅಪಘಾತದಲ್ಲಿ ತೊಂದರೆಗೆ ಸಿಲುಕಿದವರ ಜೀವರಕ್ಷಣೆ ಮಾಡುವುದರ ಬದಲು, ಅಲ್ಲಿ ಅನಾಯಾಸವಾಗಿ ಸಿಗುವ ವಸ್ತುಗಳನ್ನು ಲಪಟಾಯಿಸುವ ಜನರ ಮನೋವೃತ್ತಿ ಅನಾಗರಿಕವಾದುದು.

ಇಂಧನ ತುಂಬಿದ ಟ್ಯಾಂಕರ್ ಒಂದು ಉರುಳಿ ಬಿದ್ದಾಗ ಅಪಾಯವನ್ನು ಲೆಕ್ಕಿಸದೆ, ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದ ಜನರು ಬೆಂಕಿಗೆ ಆಹುತಿಯಾದ ಘಟನೆ ಹಿಂದೆ ವರದಿಯಾಗಿತ್ತು. ಸರಕು ತುಂಬಿದ ಲಾರಿಗಳು ಅಪಘಾತಕ್ಕೀಡಾದಾಗ ಜನರ ಇಂತಹ ನಡೆ ಮುಜುಗರ ಹುಟ್ಟಿಸುತ್ತದೆ.

ಪರಿಸ್ಥಿತಿಗೆ ಸ್ಪಂದಿಸದೆ, ದುರ್ಘಟನೆಯ ದೃಶ್ಯವನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ರವಾನಿಸುವ ವಿಕೃತಿಯನ್ನು ಕೆಲವರು ಮೆರೆಯುತ್ತಾರೆ. ಇದೊಂದು ಕೆಟ್ಟ ಚಾಳಿ. ತೊಂದರೆಗೆ ಸಿಲುಕಿದವರಿಗೆ ಸಹಾಯಹಸ್ತ ಚಾಚುವ ಮಾನವೀಯ ಗುಣ ನಮ್ಮಲ್ಲಿರಬೇಕೇ ವಿನಾ, ಇಂಥ ರಾಕ್ಷಸ ಪ್ರವೃತ್ತಿ ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ನಮ್ಮೊಳಗಿನ ವಿವೇಕ ಜಾಗೃತವಾದಾಗ ಮಾತ್ರ ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬಹುದು.
–ಧರ್ಮಾನಂದ ಶಿರ್ವ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.