ADVERTISEMENT

ಕನಕದಾಸರು ಕುರುಬರಲ್ಲ, ಬೇಡರು

ಡಾ.ಬಿ.ರಾಜಶೇಖರಪ್ಪ ಚಿತ್ರದುರ್ಗ
Published 27 ನವೆಂಬರ್ 2018, 20:00 IST
Last Updated 27 ನವೆಂಬರ್ 2018, 20:00 IST

‘ಸಾಂಸ್ಕೃತಿಕ ಪಲ್ಲಟ ಹೊಂದುವರೇ’ (ವಾ.ವಾ., ನ. 24) ಪತ್ರವನ್ನು ಓದಿದ ಬಳಿಕ ಈ ಪ್ರತಿಕ್ರಿಯೆ ಅಗತ್ಯ ಎನಿಸಿತು. ಕುರುಬರ ಗುರು ರೇವಣಸಿದ್ಧರು ಎಂಬುದು ಈಗಾಗಲೇ ಆಧಾರಗಳಿಂದ ಖಚಿತವಾದ ಸಂಗತಿ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೊಮ್ಮೆ, ‘ನಮ್ಮ ಕುಲಗುರು ರೇವಣಸಿದ್ಧರು; ನಾವು ಶೈವ ಪರಂಪರೆಯವರು’ ಎಂದು ಹೇಳಿದ್ದರು.ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಪೇಜಾವರ ಶ್ರೀಗಳು, ‘ಕನಕದಾಸರು ವೈಷ್ಣವರು; ಅವರ ಹೆಸರು ಹೇಳುವ ಕುರುಬ ಜನಾಂಗದವರು ಅವರ ನಿಜವಾದ ಅನುಯಾಯಿಗಳಾಗಲು ನಾವು ವೈಷ್ಣವ ದೀಕ್ಷೆ ಕೊಡುತ್ತೇವೆ’ ಎಂದು ಆಹ್ವಾನಿಸಿದ್ದು ನೆನಪಾಗುತ್ತದೆ.

ಕನಕದಾಸರು ಕುರುಬರಲ್ಲ, ಬೇಡರು ಎಂಬುದು ಉಡುಪಿ ಮಠದ ತಾಳೆಗರಿಯಲ್ಲಿರುವ ಉಲ್ಲೇಖದಿಂದ ಹಾಗೂ ಕಾಗಿನೆಲೆಯ ಬಳಿಯೇ ಇರುವ ಅವರ ವಂಶದವರೆನ್ನುವ ಬೇಡ ಕುಲಮೂಲಗಳಿಂದ ಈಗಾಗಲೇ ತಿಳಿದ ಸಂಗತಿ. ಕನಕದಾಸರು ಬೇಡರಾಗಿದ್ದುದರಿಂದ ಅವರ ಬಾಲ್ಯಕಾಲದಲ್ಲೇ ಅವರ ಮೇಲೆ ವೈಷ್ಣವ ಪ್ರಭಾವವಾಗಿದ್ದು, ಅವರು ವಿಷ್ಣುಭಕ್ತರಾದರು.

ADVERTISEMENT

ಅವರು ಸಾಂಕೇತಿಕವಾಗಿ ರಚಿಸಿದ ‘ನಾವು ಕುರುಬರು’ಎಂಬ ಕೀರ್ತನೆಯನ್ನು ಇಟ್ಟುಕೊಂಡು, 20ನೇ ಶತಮಾನದ ಆರಂಭದಿಂದೀಚೆಗೆ, ಕನಕದಾಸರು ಕುರುಬರೆಂದು ಹೇಳುತ್ತಾ ಬಂದು, ಈಗ ಅದನ್ನೇ ಒಪ್ಪಿಕೊಂಡು, ಕುರುಬರು ಕನಕರನ್ನು ಅಪ್ಪಿಕೊಂಡಿದ್ದಾರೆ. ಕುಲಮೂಲಗಳ ವಿಷಯ ಬಂದಾಗ, ರೇವಣಸಿದ್ಧರ ಬಗ್ಗೆ ಹೇಳುತ್ತಾ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಾನು, ಡಾ. ಎಂ.ಎಂ. ಕಲಬುರ್ಗಿ ಹಾಗೂ ದೇವೇಂದ್ರ ಮಾಧವ ಅವರು ಬರೆದಿದ್ದೇವೆ.

ಸಾಧಕರು ಯಾವ ಜಾತಿಯಲ್ಲಿ ಹುಟ್ಟಿದರೂ ಸಾಧಕರೇ. ಆದರೆ ಈಗ ಎದ್ದಿರುವ ಪ್ರಶ್ನೆಗಳಿಂದ ಗೊಂದಲ ಉಂಟಾಗಬಾರದು. ವಯಸ್ಸಾದವರು ತಮ್ಮ ರೇವಣಸಿದ್ಧ ಪರಂಪರೆಯನ್ನೂ ಆಚರಣೆಗಳನ್ನೂ ಹೇಳುವುದು, ಆಧುನಿಕರು ಕನಕದಾಸರ ಬಗ್ಗೆ ಹೇಳುವುದು- ಇದರಿಂದ ಗೊಂದಲ ಉಂಟಾಗುತ್ತಿದೆ.

ಕುರುಬರು ಮೊದಲೇ ಶೈವಾರಾಧಕರಾಗಿದ್ದರಿಂದ ಮತ್ತು ರೇವಣಸಿದ್ಧರನ್ನು ಲಿಂಗಾಯತರು ಕೂಡಾ ತಮ್ಮ ಪೂಜ್ಯರಲ್ಲೊಬ್ಬರೆಂದು ಒಪ್ಪಿಕೊಂಡಿದ್ದರಿಂದ ಸಹಜವಾಗಿಯೇ ಲಿಂಗಾಯತ ಧರ್ಮದ ಪ್ರಭಾವ ಕುರುಬರ ಮೇಲೆ ಆಗಿದೆ. ಪ್ರಾದೇಶಿಕವಾಗಿ ಭಿನ್ನ ಪ್ರಭಾವಗಳೂ ಇರಬಹುದು. ಕನಕದಾಸರು ವೈಷ್ಣವ ಸಂಪ್ರದಾಯಕ್ಕೆ ಸೇರಿದ ಬೇಡರೆಂಬುದನ್ನು ಇನ್ನಾದರೂ ಒಪ್ಪಿಕೊಂಡು, ಗೊಂದಲಗಳಿಗೆ ಪೂರ್ಣವಿರಾಮ ಹಾಕುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.