ADVERTISEMENT

ವಾಚಕರ ವಾಣಿ: ಓದುಗರ ಪತ್ರಗಳು

ಪ್ರಜಾವಾಣಿ ವಿಶೇಷ
Published 2 ಜೂನ್ 2023, 19:21 IST
Last Updated 2 ಜೂನ್ 2023, 19:21 IST

ಹೋಟೆಲ್‌ ತಿಂಡಿಯ ದರವೂ ಇಳಿಯಲಿ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರಿನ ಬೆಲೆ ಇಳಿದಿದೆ. ಆದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರಗಳು ಇಳಿಕೆ ಕಂಡಾಗ, ಹೋಟೆಲ್, ಕಿರಾಣಿ ವ್ಯಾಪಾರಸ್ಥರು ತಮ್ಮ ಎಂದಿನ ದರಗಳನ್ನೇ ಮುಂದುವರಿಸಿ, ಲಾಭ ಗಿಟ್ಟಿಸುತ್ತಲೇ ಹೋಗುತ್ತಾರೆ. ಇಂಧನದ ಬೆಲೆ ಇಳಿದಾಗ ಪೇಟೆಯಲ್ಲಿ ದಿನಸಿಗಳ ಬೆಲೆಯೂ ಇಳಿಯುವಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ. ಆ ಮೂಲಕ ಹೋಟೆಲ್‌ಗಳಲ್ಲಿ ಆಹಾರದ ದರವೂ ಇಳಿಯುವಂತೆ ಆಗಲಿ.

–ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ

ADVERTISEMENT

ಮೇಕೆದಾಟು: ಸಿಗಲಿ ಸೌಹಾರ್ದದ ಪರಿಹಾರ

ಮೇಕೆದಾಟು ಯೋಜನೆ ಸಂಬಂಧ ಆಕ್ರಮಣಕಾರಿಯಾಗಿ ವರ್ತಿಸಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಮಿಳುನಾಡು ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಜೂನ್‌ 2).

ಈ ಹಿಂದೆ ಶಿವಕುಮಾರ್‌ ಅವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜಾಥಾ (ಬರೀ ಜಾಥಾದಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಜನಪ್ರಿಯತೆ ಸಿಗಬಹುದಷ್ಟೇ ಎಂಬುದು ನಾಯಕರಿಗೆ ಅರ್ಥವಾಗಬೇಕಿದೆ) ಕೈಗೊಂಡ ಹಾಗೂ ಅಣೆಕಟ್ಟು ನಿರ್ಮಾಣ ಸಂಬಂಧ ಅವರ ಹೇಳಿಕೆ ಕಾರಣದಿಂದ ಆ ಸರ್ಕಾರ ಅದನ್ನು ಖಂಡಿಸಿ, ಯೋಜನೆಯನ್ನು ವಿರೋಧಿಸುವುದಾಗಿ ಪುನರುಚ್ಚರಿಸಿದೆ. ಈ ಸಂಘರ್ಷ ಹೀಗೇ ಎಷ್ಟು ಕಾಲ ಮುಂದುವರಿಯಬೇಕು?

ಇದು ಕುಡಿಯುವ ನೀರಿನ ಯೋಜನೆ. ಅದರಿಂದ ನೀರು ಪೋಲಾಗುವುದು ತಪ್ಪಿ, ಎರಡೂ ರಾಜ್ಯಗಳ ಜನರಿಗೆ ನೀರು ಲಭ್ಯವಾಗಬೇಕಾದ ಮಾರ್ಗೋಪಾಯಗಳ ಕುರಿತು ಚರ್ಚಿಸಬೇಕಾಗಿದೆ. ಹಾಗಾಗಿ, ಎರಡೂ ಸರ್ಕಾರಗಳು ಒಟ್ಟಿಗೆ ಕುಳಿತು, ಸೌಹಾರ್ದ ಮತ್ತು ನ್ಯಾಯಯುತವಾಗಿ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಬೇಕು. ಹಟಮಾರಿ ಧೋರಣೆ ಹಾಗೂ ಪ್ರತಿಷ್ಠೆಯನ್ನು ಬದಿಗಿಟ್ಟು ಕಾರ್ಯತಂತ್ರ ರೂಪಿಸಬೇಕು. ಹಾಗಾದರೆ, ಎರಡೂ ರಾಜ್ಯಗಳ ಜನರಿಗೆ ಸಿಗುವ ಯೋಜನೆಯ ಫಲ ಅಷ್ಟಿಷ್ಟಲ್ಲ.

–ಪ್ರೊ. ಎಂ.ಎಸ್.ರಘುನಾಥ್, ಬೆಂಗಳೂರು

ತಜ್ಞರ ಸಮಿತಿ ರಚನೆಯಾಗಲಿ

ಅಕಾಡೆಮಿಗಳು, ನಿಗಮ, ಮಂಡಳಿಗಳು, ರಂಗಾಯಣ, ಪ್ರಾಧಿಕಾರಗಳಲ್ಲಿ ಹೊಸಬರಿಗೆ ಅವಕಾಶ ಸಿಗಲಿ ಎಂಬ ಆಶಯವುಳ್ಳ ಕೆಲವು ಲೇಖಕರ ಪತ್ರದಲ್ಲಿ (ವಾ.ವಾ., ಮೇ 31) ಬಹಳ ಮುಖ್ಯವಾದ ವಿಚಾರವೊಂದನ್ನು ಓದುಗರ ಮುಂದಿಡಲಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಹಿಂದಿನ ಸರ್ಕಾರವು ಅಕಾಡೆಮಿಗಳಿಗೆ, ವಿಶ್ವವಿದ್ಯಾಲಯಗಳ ಸಿಂಡಿಕೇಟ್, ಸೆನೆಟ್‍, ನಿಗಮ, ಮಂಡಳಿ, ಪ್ರಾಧಿಕಾರ, ರಂಗಾಯಣಗಳಿಗೆ ನೇಮಿಸಿದ್ದ ಸದಸ್ಯರ ಸದಸ್ಯತ್ವವನ್ನು ವಾಡಿಕೆಯಂತೆ ಅದು ರದ್ದುಗೊಳಿಸಿದೆ. ಹೊಸದಾಗಿ ಸದಸ್ಯರನ್ನು ನೇಮಕ ಮಾಡಲಿದೆ. ಸದಸ್ಯತ್ವ ಪಡೆಯಲು ಕಾಯ್ದು ಕುಳಿತಿರುವವರು ಲಾಬಿ ನಡೆಸದೇ ಇರರು. ರಾಜಕಾರಣಿಗಳ ಬೆನ್ನುಹತ್ತಿ ಬೆಂಬಲ ಪಡೆಯುವವರಲ್ಲಿ ಈಗಾಗಲೇ ನಾನಾ ಸಮಿತಿಗಳಲ್ಲಿ ಸ್ಥಾನ ಪಡೆದಿದ್ದವರೇ ಇರುವ ಸಾಧ್ಯತೆ ಇಲ್ಲದಿಲ್ಲ.

ಸರ್ಕಾರ ವಿವೇಚನೆಯಿಂದ ಆದಷ್ಟು ದಕ್ಷ, ಪ್ರಾಮಾಣಿಕ ಸದಸ್ಯರನ್ನು ಜೊತೆಗೆ ಯುವಕರನ್ನು ನೇಮಕ ಮಾಡಲು ಹಿರಿಯ ತಜ್ಞರ ಸಮಿತಿ ರಚಿಸಬೇಕು. ಈ ಸಮಿತಿಗೆ ಸ್ವಾಯತ್ತತೆ ನೀಡಿ ಆಯ್ಕೆ ಮಾಡುವ ವಿಧಾನವೊಂದನ್ನು ಜಾರಿ ಮಾಡಬೇಕು. ಆಗ ಎಲ್ಲಾ ಜಿಲ್ಲೆಗಳಲ್ಲಿರುವ ಪ್ರತಿಭಾವಂತರಿಗೆ, ಯುವಕರಿಗೆ ಸದಸ್ಯತ್ವ ಸಿಗುವಂತೆ ಆಗುತ್ತದೆ. ಇಲ್ಲದಿದ್ದರೆ ಈ ಸ್ಥಾನಗಳು ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡಿದಂತೆ ತೋರಿಸಿಕೊಳ್ಳುವವರ ಪಾಲಾಗುವುದು ಖಚಿತ. ಪಕ್ಷಾತೀತರು ಮತ್ತು ಒಳಿತಿನ ಪಕ್ಷಪಾತಿಗಳು ನಾಡಿನಲ್ಲಿ ಬಹಳಷ್ಟು ಜನರಿದ್ದಾರೆ. ಅವರಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ಧ್ಯೇಯವಾಗಲಿ.

–ಡಾ. ನಂದೀಶ್ವರ ದಂಡೆ, ಹೊಸಪೇಟೆ

ಭ್ರಷ್ಟರ ಮರು ನಿಯೋಜನೆ ಸಲ್ಲ

ರಾಜ್ಯದಲ್ಲಿ ಲೋಕಾಯುಕ್ತದ ಕೈ ಬಲಪಡಿಸಿದ್ದರಿಂದ ಭ್ರಷ್ಟ ಅಧಿಕಾರಿಗಳ ಕರ್ಮಕಾಂಡ ಬಯಲಾಗುತ್ತಿರುವುದು ಸಂತಸದ ವಿಷಯ. ಹಾಗೇ ಈ ಅಧಿಕಾರಿಗಳನ್ನು ಹುದ್ದೆಯಿಂದ ವಜಾಗೊಳಿಸಿ ಅವರನ್ನು ಜೈಲಿಗಟ್ಟುವ ಕೆಲಸವನ್ನು ಸರ್ಕಾರ ಮಾಡಬೇಕು. ಯಾಕೆಂದರೆ ಇವರು ಸೇವೆಯಲ್ಲಿ ಮುಂದುವರಿದರೆ ಇಂತಹ ದಾಳಿಯಿಂದ ತಮ್ಮ ಕೈಬಿಟ್ಟುಹೋದ ಹಣವನ್ನು ತುಂಬಿಕೊಳ್ಳಲು ಮತ್ತಷ್ಟು ಹಣ ಕಬಳಿಸಲು ಮುಂದಾಗುತ್ತಾರೆ. ಅವರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಮರು ನಿಯೋಜನೆ ಮಾಡಿಕೊಳ್ಳುವುದು ದೊಡ್ಡ ತಪ್ಪು. ತಪ್ಪು ಮಾಡಿದವರಿಗೆ ಗರಿಷ್ಠ ಶಿಕ್ಷೆ ಆಗುವಂತೆ ಆಗಲಿ.

–ಶಾನು ಯಲಿಗಾರ, ಯರಗುಪ್ಪಿ

‘ಗ್ಯಾರಂಟಿ’ ಕುರಿತೇಕೆ ಮಿತಿಮೀರಿದ ಆಕ್ಷೇಪ?

ನಮ್ಮ ಸುದ್ದಿ ಮಾಧ್ಯಮಗಳು ಮತ್ತು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಇನ್ನಿಲ್ಲದಂತೆ ಟೀಕಿಸುತ್ತಿವೆ. ಅವುಗಳನ್ನು ಜಾರಿಗೆ ತಂದರೆ ರಾಜ್ಯವು ಸಾಲದಲ್ಲಿ ಮುಳುಗಿಹೋಗುತ್ತದೆ, ಜನರನ್ನು ಭಿಕ್ಷುಕರನ್ನಾಗಿ ಮಾಡಲಾಗುತ್ತದೆ, ತೆರಿಗೆದಾರರ ಹಣದ ಲೂಟಿ, ಎಲ್ಲರಿಗೂ ಕೊಡುತ್ತಾರೋ ಇಲ್ಲವೋ, ಸಕಾರಾತ್ಮಕವಾದ ತಾರತಮ್ಯ ನೀತಿಯಲ್ಲಿ ಅನುಷ್ಠಾನಗೊಳಿಸುತ್ತಾರೋ ಇಲ್ಲವೋ ಎಂಬೆಲ್ಲ ಪ್ರಶ್ನೆಗಳನ್ನು ಹರಿಯಬಿಡುತ್ತಿವೆ.

ಹೊಸ ಸರ್ಕಾರ ಅಂದರೆ ‘ಗ್ಯಾರಂಟಿಗಳು’ ಎನ್ನುವಷ್ಟರಮಟ್ಟಿಗೆ ಮಾಧ್ಯಮಗಳು ಅದನ್ನು ಕುಬ್ಜವನ್ನಾಗಿ ಮಾಡಿಬಿಟ್ಟಿವೆ. ಸರ್ಕಾರದ ಹಣಕಾಸು, ತೆರಿಗೆ, ಸಂಪನ್ಮೂಲದ ಬಗ್ಗೆ ರಾಜ್ಯದಾದ್ಯಂತ ಇನ್ನಿಲ್ಲದ ಕಾಳಜಿ ಹಬ್ಬಿದೆ. ಆದರೆ ರಾಜ್ಯಕ್ಕೆ ಒಕ್ಕೂಟ ಸರ್ಕಾರ ಹಣಕಾಸಿನ ವರ್ಗಾವಣೆಯಲ್ಲಿ ಎಷ್ಟು ಅನ್ಯಾಯ ಮಾಡುತ್ತಿದೆ ಎಂಬುದರ ಬಗ್ಗೆ ಯಾರೂ ಬಾಯಿ ಬಿಚ್ಚುತ್ತಿಲ್ಲ. ಗ್ಯಾರಂಟಿಗಳ ಅನುಷ್ಠಾನಕ್ಕೆ ಅಂದಾಜು ವೆಚ್ಚ ₹ 60,000 ಕೋಟಿ ಎನ್ನಲಾಗಿದೆ. ಆದರೆ ಒಕ್ಕೂಟ ಸರ್ಕಾರವು ಕಾರ್ಪೊರೇಟ್‌ ಸಂಸ್ಥೆಗಳಿಗೆ, ವರಮಾನ ತೆರಿಗೆ ಪಾವತಿಸುವವರಿಗೆ, ಕಾರ್ಪೊರೇಟೇತರ ಘಟಕಗಳಿಗೆ 2021-22ರಲ್ಲಿ ನೀಡಿದ್ದ ತೆರಿಗೆ ವಿನಾಯಿತಿ ₹ 4.35 ಲಕ್ಷ ಕೋಟಿ. ಕೆಲವು ಸುದ್ದಿ ಮಾಧ್ಯಮಗಳು ಹಾಗೂ ವಿರೋಧ ಪಕ್ಷಗಳ ಪ್ರಕಾರ, ಬಡವರ ಕಲ್ಯಾಣ ಕಾರ್ಯಕ್ರಮ ಅನುತ್ಪಾದಕವಾದರೆ, ಉಳ್ಳವರಿಗೆ, ಕೈಗಾರಿಕೋದ್ಯಮಗಳಿಗೆ ನೀಡುವ ಸಬ್ಸಿಡಿ ಉತ್ಪಾದಕ. ಇದೊಂದು ಭ್ರಮೆ, ಮೇಲ್ವರ್ಗಗಳ ಸ್ವಹಿತಾಸಕ್ತಿಯ ಅಭಿವ್ಯಕ್ತಿ. ಇದನ್ನು ನಾವು ಅರ್ಥ ಮಾಡಿಕೊಳ್ಳದಿರುವುದು ವಿಪರ್ಯಾಸ.

–ಟಿ.ಆರ್‌.ಚಂದ್ರಶೇಖರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.