ADVERTISEMENT

ಕನ್ನಡ ಸಂಸ್ಕೃತಿ ಮತ್ತು ಅಧಿಕಾರದ ಅಹಂ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 20:00 IST
Last Updated 10 ಜನವರಿ 2020, 20:00 IST

ಮೊದಲಿಗೆ, ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ‘ನಾನು ಈ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬರುವುದಿಲ್ಲ’ ಎಂದು ಘೋಷಣೆ; ನಂತರ, ‘ಈ ಸಮ್ಮೇಳನಕ್ಕೆ ಯಾವ ಅನುದಾನವನ್ನೂ ಕೊಡುವುದಿಲ್ಲ’ ಎಂಬ ತೀರ್ಮಾನ; ಆನಂತರ, ಅದರಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒ.ಒ.ಡಿ. ಕೊಡುವುದಿಲ್ಲ ಎಂಬ ನೋಟಿಸ್; ಕೊನೆಗೆ, ಸಮ್ಮೇಳನ ನಡೆಯುವ ದಿನಗಳಲ್ಲಿ ಆ ನಗರದ ‘ಬಂದ್ ಕರೆ’...

ಇಷ್ಟೆಲ್ಲಾ ನಡೆದದ್ದು ‘ತುಂಗಾ ಮೂಲ ಉಳಿಸಿ’ ಹೋರಾಟದಲ್ಲಿ ಹತ್ತಾರು ವರ್ಷ ಸಕ್ರಿಯವಾಗಿ ಭಾಗವಹಿಸಿದ್ದ ಮತ್ತು ತಮ್ಮ ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕಲ್ಕುಳಿ ವಿಠಲ ಹೆಗ್ಡೆ ಅವರು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬಾರದು ಎಂಬುದಕ್ಕಾಗಿ. ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
ಪ್ರಾರಂಭದಲ್ಲಿಯೇ ಜಿಲ್ಲಾ ಆಯ್ಕೆ ಸಮಿತಿಯ ಪರವಾಗಿ ನಿಂತು, ‘ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಆಯ್ಕೆ ಸಮಿತಿ ನಿರ್ಧರಿಸುತ್ತದೆ, ಸರ್ಕಾರವಲ್ಲ’ ಎಂದು ಘೋಷಿಸಬೇಕಿತ್ತು. ಆದರೆ, ಅಧ್ಯಕ್ಷರು ದಿವ್ಯ ಮೌನ ಧರಿಸಿದರು. ಇಷ್ಟೆಲ್ಲಾ ನಡೆದುದು ವಾಗ್ದೇವತೆಯ ಸನ್ನಿಧಿಯಲ್ಲಿ ಎಂಬುದನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ, ದುಃಖವಾಗುತ್ತದೆ.

ಅಧಿಕಾರದಲ್ಲಿ ಇರುವವರ ಇದೇ ನಿಲುವು ಮುಂದುವರಿದರೆ ಬಹುಬೇಗ ‘ಅನುದಾನವನ್ನು ಕೊಡುವವರು ನಾವು, ಆದುದರಿಂದ ಯಾರು ಪರಿಷತ್ತಿನ ಅಧ್ಯಕ್ಷರಾಗಬೇಕು ಎಂದು ನಾವು ನಿರ್ಧರಿಸುತ್ತೇವೆ’ ಎಂದು ಹೇಳುವ ಕಾಲ ಬರಬಹುದು. ಪರಿಷತ್ತಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ (1940) ‘ಇದು ಕನ್ನಡಿಗರೆಲ್ಲರಿಗೂ ಆದ ಅವಮಾನ’ ಎಂದು ಶಿವರಾಮ ಕಾರಂತರು ಹೇಳಿದ್ದುದು, ಇಂದಿನ ಪ್ರಭುತ್ವದ ಸಂದರ್ಭದಲ್ಲಿ ಇನ್ನೂ ಹೆಚ್ಚು ಪ್ರಸ್ತುತವಾಗುತ್ತದೆ.

ADVERTISEMENT

–ಸಿ.ಎನ್.ರಾಮಚಂದ್ರನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.