ADVERTISEMENT

ಸರ್ಕಾರಿ ಶಾಲೆಯ ಗೌರವ ಹೆಚ್ಚಿಸಬಹುದಿತ್ತು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 12 ಅಕ್ಟೋಬರ್ 2021, 15:26 IST
Last Updated 12 ಅಕ್ಟೋಬರ್ 2021, 15:26 IST

ತುಮಕೂರು ಜಿಲ್ಲೆ ಕೊರಟಗೆರೆಯ ಹುಡುಗಿ ಗ್ರೀಷ್ಮಾ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಆಕೆಯ ಸಾಧನೆಗೆ ಅಭಿನಂದನೆ. ಆದರೆ, ಬಿಸಿಯೂಟ, ಪಠ್ಯಪುಸ್ತಕ, ಸೈಕಲ್ಲು, ಸಮವಸ್ತ್ರ, ಲ್ಯಾಪ್‍ಟಾಪ್ ಇತ್ಯಾದಿಗಳನ್ನು ಸರ್ಕಾರ ನೀಡಿದರೂ, ತರಬೇತಿ ಪಡೆದ ಶಿಕ್ಷಕರ ಪಡೆ ಇದ್ದರೂ ಪೋಷಕರೇಕೆ ಮಕ್ಕಳ ಶಿಕ್ಷಣಕ್ಕೆ ದೂರದ ಊರುಗಳಲ್ಲಿರುವ ಖಾಸಗಿ ಶಾಲೆಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಬುದ್ಧಿವಂತಳಾದ ಗ್ರೀಷ್ಮಾ ತನ್ನ ಊರಿನ, ಹೆಚ್ಚೆಂದರೆ ತುಮಕೂರಿನ ಶಾಲೆಗೆ ಸೇರಿದ್ದರೂ ಹೆಚ್ಚಿನ ಅಂಕ ಗಳಿಸಿ ಸರ್ಕಾರಿ ಶಾಲೆಯ ಗೌರವ ಹೆಚ್ಚಿಸುತ್ತಿದ್ದಳೋ ಏನೋ. ಯಾಕೆಂದರೆ 10ನೆಯ ತರಗತಿಗೆ ಹೋಗದೆಯೇ ಅಕ್ಕನ ಮಾರ್ಗದರ್ಶನದಲ್ಲಿ ಈ ಅಂಕಗಳನ್ನು ಅವಳು ಪಡೆದಿದ್ದಾಳೆ.

ಇವಳಂತೆ ಎಷ್ಟು ಜನ ಮಕ್ಕಳು ಶುಲ್ಕ ಕಟ್ಟಲಾಗದೆ, ಶಾಲೆಗೆ ಹೋಗಲಾಗದೆ ಪಡಿಪಾಟಲು ಪಟ್ಟಿರುವರೋ. ಆತ್ಮಹತ್ಯೆ ಮಾಡಿಕೊಂಡರೂ ಪರವಾಗಿಲ್ಲ, ಅವಮಾನ ಅನುಭವಿಸಿದರೂ ಪರವಾಗಿಲ್ಲ ಮಕ್ಕಳು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲೇ ಓದಬೇಕು ಎಂಬ ಪೋಷಕರ ಮಹತ್ವಾಕಾಂಕ್ಷೆ ಗಾಬರಿ ಹುಟ್ಟಿಸುತ್ತದೆ. ‘ದೂರದ ಬೆಟ್ಟ ನುಣ್ಣಗೆ’ ಎಂಬುದನ್ನು ಅರಿಯಲಾಗದ ಇಂತಹವರ ಮೌಢ್ಯಕ್ಕೆ ಮದ್ದೆಲ್ಲಿದೆ? ಮಕ್ಕಳು ಪರೀಕ್ಷೆಯ ಫೀಸ್ ಕಟ್ಟದಿದ್ದರೆ ಅವರನ್ನು ಪರೀಕ್ಷೆ ತೆಗೆದುಕೊಳ್ಳುವುದರಿಂದಲೇ ವಂಚಿಸುವ ‘ಹೃದಯಹೀನ’ ವ್ಯವಸ್ಥೆ ಹೊಂದಿರುವ ಶಾಲೆಗಳನ್ನು ‘ಶಿಕ್ಷಣ ಸಂಸ್ಥೆ’ಗಳು ಎಂದು ಕರೆಯಬಹುದೇ? ಒಟ್ಟು ನಮ್ಮ ಜನ, ಸಮಾಜ, ಶಿಕ್ಷಣ ಎಲ್ಲವೂ ದರಿದ್ರಾವಸ್ಥೆ ತಲುಪಿರುವುದನ್ನು ಈ ಪ್ರಕರಣ ಸೂಚಿಸುತ್ತದೆ.

- ಸವಿತಾ ನಾಗಭೂಷಣ,ಶಿವಮೊಗ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.