ADVERTISEMENT

ಬಸ್‍ಗಳಲ್ಲಿ ಮಾರ್ಗಸೂಚಿ ಪಾಲನೆಯಾಗಲಿ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST

ನಮ್ಮೂರಿನಿಂದ ಬೆಂಗಳೂರಿಗೆ ಇತ್ತೀಚೆಗೆ ಖಾಸಗಿ ಬಸ್‍ನಲ್ಲಿ ಪ್ರಯಾಣಿಸಿದೆ. ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ಮಾರ್ಗಸೂಚಿಯನ್ನು ಅಲ್ಲಿ ವ್ಯಾಪಕವಾಗಿ ಉಲ್ಲಂಘಿಸುತ್ತಿರುವುದು ಕಂಡುಬಂತು. ಶೇ 80ರಷ್ಟು ಪ್ರಯಾಣಿಕರು ಮಾಸ್ಕ್ ಧರಿಸಿರಲಿಲ್ಲ. ಪ್ರಯಾಣಿಕರ ಸುರಕ್ಷತೆ ಕಾಪಾಡಬೇಕಾದ ಹಾಗೂ ಅರಿವು ಮೂಡಿಸಬೇಕಾದ ಬಸ್‍ನ ಚಾಲಕ, ಕಂಡಕ್ಟರ್ ಮತ್ತು ಕ್ಲೀನರ್ ಕೂಡ ಮಾಸ್ಕ್ ಧರಿಸದೆ ಮಾರ್ಗಸೂಚಿಯನ್ನು ಗಾಳಿಗೆ ತೂರಿದ್ದರು. ಇನ್ನು ಕೆಲವು ಪ್ರಯಾಣಿಕರು ಗುಟ್ಕಾ, ಪಾನ್ ಮಸಾಲಾ ಜಗಿಯುತ್ತಿದ್ದುದು ಸಾಮಾನ್ಯವಾಗಿತ್ತು.

ಕೊರೊನಾ ಸೋಂಕು ರಾಷ್ಟ್ರವ್ಯಾಪಿ ಹರಡಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳಲ್ಲಿ ಈ ಯಾವ ನಿಯಮಗಳೂ ಪಾಲನೆಯಾಗದಿರುವುದು ವಿಷಾದಕರ. ಇನ್ನು, ಬಸ್‍ನಲ್ಲೇ ಗುಟ್ಕಾ ಜಗಿಯುವುದರಿಂದ ಸಹಪ್ರಯಾಣಿಕರಿಗೆ ತೊಂದರೆಯಾಗುವುದರ ಜೊತೆಗೆ ಕೊರೊನಾದಂತಹ ಅಪಾಯಕಾರಿ ರೋಗಗಳು ಸುಲಭವಾಗಿ ಹರಡಲು ಮಾರ್ಗವಾಗುತ್ತದೆ. ಗ್ರಾಮೀಣ ಭಾಗದ ಎಷ್ಟೋ ಜನ ಅನಕ್ಷರಸ್ಥರು. ಸರಿಯಾದ ತಿಳಿವಳಿಕೆ ಇಲ್ಲದ ಕಾರಣ ಕೊರೊನಾ ಸೋಂಕಿನ ಅಪಾಯವನ್ನು ನಿರ್ಲಕ್ಷಿಸುವವರೇ ಹೆಚ್ಚು. ಹೀಗೆ ನಿಯಮಗಳನ್ನು ಪಾಲಿಸದ ಬಸ್, ಆಟೊ ಚಾಲಕರು ಮತ್ತು ಪ್ರಯಾಣಿಕರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಸುರಕ್ಷತೆ ಪಾಲಿಸುವಂತೆ ಸೂಚನಾ ಫಲಕಗಳನ್ನು ಆಳವಡಿಸಬೇಕು. ಸಾರ್ವಜನಿಕರನ್ನು ಸಾಗಿಸುವ ವಾಹನಗಳಲ್ಲಿ ಗುಟ್ಕಾ, ಪಾನ್ ಮಸಾಲಾ ಜಗಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.

ಶಿವಶಂಕರ ಎಸ್., ಮುತ್ತರಾಯನಹಳ್ಳಿ, ಮಧುಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.