ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 23:27 IST
Last Updated 11 ಸೆಪ್ಟೆಂಬರ್ 2025, 23:27 IST
<div class="paragraphs"><p>ವಾಚಕರ ವಾಣಿ</p></div>

ವಾಚಕರ ವಾಣಿ

   

ಸಾಹಿತ್ಯಕ್ಕೆ ಗೌರವ, ಧರ್ಮಕ್ಕೆ ಅಲ್ಲ

ಸಾಹಿತಿ ಬಾನು ಮುಷ್ತಾಕ್‌ ಮತ್ತು ದೀಪಾ ಭಾಸ್ತಿ ಅವರಿಗೆ ಸಂದ ಬುಕರ್‌ ಪ್ರಶಸ್ತಿಯು ಹೆಣ್ಣುಮಕ್ಕಳ ಸಾಮರ್ಥ್ಯಕ್ಕೆ, ಕನಸುಗಳಿಗೆ ಗಡಿಯಿಲ್ಲ; ಪ್ರತಿಭೆಗೆ ಮಿತಿಯಿಲ್ಲ ಎಂಬುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿರುವ ಬಾನು ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನಿರ್ದಿಷ್ಟ ಜಾತಿ, ಧರ್ಮ, ವರ್ಗ, ಲಿಂಗಕ್ಕೆ ಆದ್ಯತೆ ನೀಡದೆ ಅವರ ಸಾಧನೆಗೆ ಮನ್ನಣೆ ನೀಡಿರುವುದು ದಸರಾ, ಸಂಸ್ಕೃತಿ ಮತ್ತು ಸೌಹಾರ್ದದ ಹಬ್ಬ ಎಂಬುದಕ್ಕೆ ನಿಜವಾದ ಅರ್ಥ ನೀಡಿದೆ. ಅನ್ಯಜಾತಿ, ಹೆಣ್ಣೆಂದು ವಿರೋಧಿಸುವುದು ಪುರುಷ ಪ್ರಧಾನತೆಯ ಮೂಢತನ.

ADVERTISEMENT

- ಸಂಧ್ಯಾ ಹೆಚ್.ಎಸ್., ಹಂಪಿ

ಎಲ್ಲದಕ್ಕೂ ರಾಜಕೀಯ ಬೆರಸಬೇಡಿ

ಮೈಸೂರು ದಸರಾ ಎನ್ನುವುದೀಗ ಶ್ರೀಮಂತ ಪ್ರವಾಸಿಗರ ಮತ್ತು ಲಾಭಕೋರರ ದಂಧೆಯಾಗಿದೆ. ಬೆಟ್ಟದ ಚಾಮುಂಡೇಶ್ವರಿಯ ಉತ್ಸವಮೂರ್ತಿ ಬೇರೆ; ಅಂಬಾರಿ ಮೆರವಣಿಗೆ ವಿಗ್ರಹವೇ ಬೇರೆ. ಬೆಟ್ಟದ ಮೇಲಿನ ರಥೋತ್ಸವ, ತೆಪ್ಪೋತ್ಸವ, ಪೂಜೆ–ಪುನಸ್ಕಾರ, ಆಗಮೋಕ್ತವಾಗಿ ಮತ್ತು ಜಾನಪದ ಸಂಪ್ರದಾಯಕ್ಕೆ ಅನುಸಾರವಾಗಿ ಹಿಂದಿನಂತೆಯೇ ನಡೆದುಕೊಂಡು ಹೋಗುತ್ತಿದೆ. ಪ್ರವಾಸೋದ್ಯಮ ಉದ್ದೇಶದ ಈ ದಸರಾ ಉತ್ಸವಕ್ಕೂ ಬೆಟ್ಟದ ಚಾಮುಂಡಿಗೂ ಸಾಂಕೇತಿಕ ಸಂಬಂಧ ಉಂಟಾಗಿರುವುದು, ರಾಜರ ಮೆರವಣಿಗೆ ಇಲ್ಲದ ಇತ್ತೀಚಿನ ದಿನಗಳಲ್ಲಿ. ಎಲ್ಲ ‘ಸಂತೋಷ’ಗಳಂತೆ ಇದಕ್ಕೂ ರಾಜಕೀಯದ ಹುಳಿ ಹಿಂಡುತ್ತಿರುವುದು ಅಚ್ಚರಿಯ ಸಂಗತಿಯೇನೂ ಅಲ್ಲ.

- ಆರ್.ಕೆ. ದಿವಾಕರ, ಬೆಂಗಳೂರು

ಸಹಬಾಳ್ವೆ ವರ್ತಮಾನದ ತುರ್ತು 

ಇತ್ತೀಚೆಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮತ್ತು ಕುರ್ಚಿ ಉಳಿಸಿಕೊಳ್ಳಲು ಎಲ್ಲಾ ಪಕ್ಷಗಳು ಧರ್ಮವನ್ನು ಶಕುನಿಯ ದಾಳಗಳಂತೆ ಬಳಸಿಕೊಳ್ಳುತ್ತಿವೆ. ಇದನ್ನು ಜನರು ಅರಿತುಕೊಂಡು ಧರ್ಮದ್ವೇಷಕ್ಕೆ ಕಡಿವಾಣ ಹಾಕಬೇಕಿದೆ. ಈ ದಿಸೆಯಲ್ಲಿ ಧರ್ಮದ್ವೇಷ, ಪ್ರಚೋದನೆ ನೀಡುವ ಹೇಳಿಕೆಗಳ ಬಗ್ಗೆ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ, ತಪ್ಪಿತಸ್ಥರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕು.

- ಚಂದ್ರಶೇಖರ ಎಚ್‌.ಎಸ್‌., ಬೆಂಗಳೂರು

ಪೊಲೀಸರ ವೈಫಲ್ಯಕ್ಕೆ ಕನ್ನಡಿ 

ರಾಜ್ಯದಲ್ಲಿ ಇತ್ತೀಚೆಗೆ ಹಬ್ಬಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿವೆ. ಮದ್ದೂರು ಪ್ರಕರಣ ಇದಕ್ಕೊಂದು ನಿದರ್ಶನ. ಗಣಪತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿರುವುದು ಅಕ್ಷಮ್ಯ. ಈ ಪ್ರಕರಣವು ಮಂಡ್ಯ ಜಿಲ್ಲಾ ಪೊಲೀಸ್‌ ಇಲಾಖೆಯ ವೈಫಲ್ಯದತ್ತಲೂ ಬೊಟ್ಟು ಮಾಡುತ್ತದೆ. ಕಳೆದ ವರ್ಷ ನಾಗಮಂಗಲದಲ್ಲಿ ನಡೆದ ಇಂತಹದ್ದೇ ಘಟನೆಯ ಹೊರತಾಗಿಯೂ ಪೊಲೀಸರು ಮುನ್ನೆಚ್ಚರಿಕೆ ವಹಿಸದಿರುವುದು ದುರದೃಷ್ಟಕರ. ಇಲ್ಲಿಯವರೆಗೆ ರಾಜಕೀಯ ಲಾಭಕ್ಕಾಗಿ ಮಂಡ್ಯ ಜಿಲ್ಲೆಯು ಕೋಮುವಿವಾದಕ್ಕೆ ಸಾಕ್ಷಿ ಆಗಿರಲಿಲ್ಲ, ಜಿಲ್ಲೆಯನ್ನು ಮತ್ತೊಂದು ಮಂಗಳೂರು ಮಾಡಲು ಹೊರಟಿರುವುದು ಸರಿಯಲ್ಲ. 

- ರಾಜು ಜಿ.ಆರ್., ಗಂಧನಹಳ್ಳಿ 

ಯುವಕ್ರಾಂತಿ: ಟೊಳ್ಳೋ ಗಟ್ಟಿಯೋ?

ಅವ್ಯಾಹತ ಭ್ರಷ್ಟಾಚಾರಕ್ಕೆ ನೇಪಾಳದಲ್ಲಿ ಯುವಶಕ್ತಿಯ ಆಕ್ರೋಶ ಸ್ಫೋಟಗೊಂಡಿರುವುದು ಸಹಜವಾದುದೇ. ಆದರೆ, ಇದೇ ಮಾದರಿಯ ‘ಜೆನ್‌–ಝೀ’ ಹೋರಾಟ ಶ್ರೀಲಂಕಾ, ಬಾಂಗ್ಲಾದೇಶದಲ್ಲೂ ನಡೆದಿತ್ತು. ಈಗ ಆ ಎರಡೂ ರಾಷ್ಟ್ರಗಳಲ್ಲಿ ಏನಾಗುತ್ತಿದೆ ಎಂಬುದು ಸರ್ವವಿದಿತ. ದಶಕಗಳ ಹಿಂದೆ ಅಸ್ಸಾಂನಲ್ಲೂ ಇದೇ ರೀತಿಯ ವಿದ್ಯಾರ್ಥಿ ಚಳವಳಿ ನಡೆದಿತ್ತು. ಆ ರಾಜ್ಯಕ್ಕೆ ಹೊಸ ದಿಕ್ಕನ್ನು ತೋರುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈಗ ಅದೆಲ್ಲ ಸುಳ್ಳಾಗಿ ಅಲ್ಲಿ ಬರಿಯ ಅಧಿಕಾರದ ಮದವಷ್ಟೇ ಮುನ್ನೆಲೆಯಲ್ಲಿದೆ. ನೇಪಾಳದಲ್ಲಿನ ಯುವಕ್ರಾಂತಿಯು ಗುಣಾತ್ಮಕವೋ, ಋಣಾತ್ಮಕವೋ ಎಂಬುದನ್ನು ಕಾದು ನೋಡಬೇಕಿದೆ. 

- ಕೆ.ಎಸ್. ಸೋಮೇಶ್ವರ, ಬೆಂಗಳೂರು 

ಸಂಧ್ಯಾಕಾಲ ಮತ್ತು ಸಾವಿರ ಪಿಂಚಣಿ

ದೇಶದಲ್ಲಿ ಇಪಿಎಸ್–95 ಪಿಂಚಣಿದಾರರ ಸಂಖ್ಯೆ ಸುಮಾರು 80 ಲಕ್ಷವಿದೆ. ಇಪಿಎಫ್‌ಒ ಹಾಗೂ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ 40 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಮಾಸಿಕ ಬರೀ ₹1 ಸಾವಿರದಿಂದ ₹1,500 ಪಿಂಚಣಿ ದೊರೆಯುತ್ತಿದೆ. ಇಷ್ಟು ಹಣದಲ್ಲಿ ಕುಟುಂಬವೊಂದರ ಜೀವನ ನಿರ್ವಹಣೆ ಸಾಧ್ಯವೇ? ಇಪಿಎಫ್ಒ ಹಾಗೂ ಕಾರ್ಮಿಕರ ಸಂಘಟನೆಯ ದುರಾಡಳಿತದಿಂದ ಪಿಂಚಣಿದಾರರು ಸಂಧ್ಯಾಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರವು ಪಿಂಚಣಿ ಹೆಚ್ಚಳ ಕುರಿತಂತೆ ಭರವಸೆ ನೀಡುತ್ತಾ ಕಾಲ ದೂಡುತ್ತಿದೆ. ಪ್ರಧಾನಿ ಮೋದಿ ಅವರು, ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್‌’ ಘೋಷಿಸಿದ್ದಾರೆ. ಇದು ಘೋಷಣೆಯಾಗಿ ಉಳಿಯದೆ ಪಿಂಚಣಿದಾರರಿಗೆ ಬೆಳಕಾಗಲಿ.

- ಕೆ.ಟಿ. ಸೋಮಶೇಖರ, ಬೆಂಗಳೂರು 

ಜನರ ಧ್ವನಿಗೆ ಕಿವಿಗೊಡಲಿ 

ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವು, ಅಸಮಾಧಾನ, ಸಲಹೆಗಳನ್ನು ತೆರೆದ ಮನಸ್ಸಿನಿಂದ ಹಂಚಿಕೊಳ್ಳುತ್ತಿದ್ದಾರೆ. ಪ್ರಶ್ನೆ ಏನೆಂದರೆ ಜನಪ್ರತಿನಿಧಿಗಳು ಇದನ್ನು ಓದುತ್ತಾರೆಯೇ? ಜನರ ಮಾತಿಗೆ ಕಿವಿಗೊಡದೆ, ತಮ್ಮ ಇಚ್ಛೆಯಂತೆ ನಡೆಯುವುದು ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದಂತಲ್ಲವೇ?
ಜನರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದರೆ ತಕ್ಷಣವೇ ಜಾಲತಾಣಗಳಲ್ಲಿನ ಪ್ರತಿಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕುಂದುಕೊರತೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಜನರ ತೀರ್ಪು ಅವರಿಗೆ ತಪ್ಪದು.

- ಜಿ. ನಾಗೇಂದ್ರ ಕಾವೂರು, ಸಂಡೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.