ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 23:57 IST
Last Updated 17 ನವೆಂಬರ್ 2025, 23:57 IST
   

ಮೀಸಲಾತಿ: ಕೆನೆಪದರ ನೀತಿ ಅಗತ್ಯ

‘ಪರಿಶಿಷ್ಟ ಜಾತಿಯವರಿಗೆ ಮೀಸಲಾತಿ ನೀಡುವ ವೇಳೆ ಕೆನೆಪದರ ನೀತಿ ಅನ್ವಯಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಹೇಳಿರುವ ಮಾತು ಸಂದರ್ಭೋಚಿತವಾಗಿದೆ. ಮೀಸಲಾತಿ ಸೌಲಭ್ಯ ಪಡೆದ ಕುಟುಂಬವೇ ಪುನಃ ಸೌಲಭ್ಯ ಪಡೆಯುವುದು ಎಷ್ಟು ಸರಿ? ಇದರಿಂದ ಅದೇ ಸಮುದಾಯದ ತಳಮಟ್ಟದಲ್ಲಿ ಇರುವವರಿಗೆ ಮೀಸಲಾತಿಯು ಗಗನಕುಸುಮವಾಗಲಿದೆ. ಗೆಜೆಟೆಡ್ ಅಧಿಕಾರಿ, ರಾಜಕೀಯದಲ್ಲಿ ಮಂತ್ರಿಯಾದ ಅಥವಾ ಅದಕ್ಕೆ ತತ್ಸಮನಾದ ಹುದ್ದೆ ಅಲಂಕರಿಸಿದ ಕುಟುಂಬದ ಮುಂದಿನ ಪೀಳಿಗೆಯ ಮಕ್ಕಳನ್ನು ಮೀಸಲಾತಿಯಿಂದ ಹೊರಗಿಡಬೇಕಿದೆ. ಅದೇ ವರ್ಗದ ಇತರರಿಗೆ ಅವಕಾಶ ಮಾಡಿಕೊಡಬೇಕಿದೆ. ಆಗಷ್ಟೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೀಸಲಾತಿಯ ಋಣ ಸಂದಾಯವಾಗಲಿದೆ. ಪರಿಶಿಷ್ಟ ಜಾತಿಗಷ್ಟೇ ಕೆನೆಪದರ ನೀತಿ ಅನ್ವಯಿಸಬಾರದು. ಮೀಸಲಾತಿ ಪಡೆಯುವ ಎಲ್ಲಾ ಸಮುದಾಯಗಳಿಗೂ ಅನ್ವಯವಾಗಬೇಕು.

- ಕೆ.ಎಂ. ನಾಗರಾಜು, ಮೈಸೂರು

ADVERTISEMENT

ಕೃಷ್ಣಮೃಗಗಳ ಸಾವು: ಯಾರು ಹೊಣೆ?

ಬೆಳಗಾವಿ ಜಿಲ್ಲೆಯ ಭೂತರಾಮನ ಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಮೃತಪಟ್ಟಿರುವ ಸುದ್ದಿ ಓದಿ ದಿಗ್ಭ್ರಮೆಯಾಯಿತು. ಈ ಪ್ರಕರಣವು ಮೃಗಾಲಯ ಸಿಬ್ಬಂದಿಯ ನಿರ್ಲಕ್ಷ್ಯದತ್ತ ಬೆಟ್ಟು ಮಾಡುತ್ತದೆ. ಬೇಸಿಗೆ ಸಮೀಪಿಸುತ್ತಿದೆ. ಪ್ರಾಣಿ– ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾಳ್ಗಿಚ್ಚು ಹರಡದಂತೆ ಅರಣ್ಯ ಇಲಾಖೆಯು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕಿದೆ.  

- ಪ್ರೊ. ಟಿ. ನಾರಾಯಣಪ್ಪ, ಬೆಂಗಳೂರು

ಉದಾತ್ತ ಧ್ಯೇಯ: ಫಲಿತಾಂಶ ಶೂನ್ಯ

ಪ್ರಶಾಂತ ಕಿಶೋರ್‌ ನೇತೃತ್ವದ ‘ಜನ ಸುರಾಜ್‌ ಪಕ್ಷ’ವು ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ನೆಲಕಚ್ಚಿದೆ. 1977ರಲ್ಲಿ ಕೆಂಗಲ್ ಹನುಮಂತಯ್ಯನವರು ‘ಸುರಾಜ್ಯ ಪಕ್ಷ’ ಸ್ಥಾಪಿಸಿದ್ದರು. ಆದರೆ, ಕರ್ನಾಟಕದ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಹಾಗೆಯೇ, ಯೋಗೇಂದ್ರ ಯಾದವ್ ಮತ್ತಿತರರು 2016ರಲ್ಲಿ ಸ್ಥಾಪಿಸಿದ ‘ಸ್ವರಾಜ್ ಇಂಡಿಯಾ’ ಪಕ್ಷ ಇದುವರೆಗೆ ಯಾವುದೇ ಯಶಸ್ಸುಗಳಿಸಿಲ್ಲ. ಎಷ್ಟೇ ಉದಾತ್ತ ಹೆಸರನ್ನು ಇಟ್ಟುಕೊಂಡರೂ, ದೀರ್ಘಾವಧಿಯ ಅಭಿಯಾನ ನಡೆಸಿದರೂ ಜನ ನಂಬಿ ಮತ ನೀಡುವ ಸಾಧ್ಯತೆ ತೀರಾ ಕಡಿಮೆ.  

- ಎಚ್.ಎಸ್. ಮಂಜುನಾಥ, ಗೌರಿಬಿದನೂರು

ಪುಸ್ತಕ ಸಂತೆಯು ‘ಅಕ್ಷರ ಸಂತೆ’ಯಾಗಲಿ 

ಬೆಂಗಳೂರಿನಲ್ಲಿ ವೀರಲೋಕ ಪ್ರಕಾಶನದಿಂದ ಹಮ್ಮಿಕೊಂಡಿದ್ದ ‘ಪುಸ್ತಕ ಸಂತೆ’ಯು ಓದುವ ಸಂಸ್ಕೃತಿಯನ್ನು ಮತ್ತೆ ಉತ್ತೇಜಿಸುವ ಅಗತ್ಯವನ್ನು ನೆನಪಿಸಿದೆ. ಆದರೆ, ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಆಸಕ್ತಿ ಕಡಿಮೆಯಾಗಿದೆ. ಮೊಬೈಲ್ ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಡಿಜಿಟಲ್ ಮನರಂಜನಾ ವೇದಿಕೆಗಳು ಅವರ ಸಮಯ ಮತ್ತು ಗಮನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವುದೇ ಇದಕ್ಕೆ ಕಾರಣ. ಪುಸ್ತಕ ಸಂತೆಯನ್ನು ಕೇವಲ ಪುಸ್ತಕ ಖರೀದಿ, ಮಾರಾಟ ಮೇಳದ ದೃಷ್ಟಿಯಲ್ಲಿ ನೋಡಬಾರದು. ಅದನ್ನು ಜ್ಞಾನ ಹಂಚಿಕೆ, ಓದಿಗೆ ಪ್ರೇರಣೆ ಮತ್ತು ಸೃಜನಶೀಲ ಅಭಿವ್ಯಕ್ತಿಗಳ ವೇದಿಕೆಯಾಗಿ ರೂಪಿಸಬೇಕಿದೆ. ಜೊತೆಗೆ, ‘ಅಕ್ಷರ ಸಂತೆ’ಯಾಗಿಸುವ ಪ್ರಯತ್ನ ಮಾಡಬೇಕಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಓದುವಿಕೆಯ ಮರುಜಾಗೃತಿಗೆ ಇದು ಅನಿವಾರ್ಯವೂ ಹೌದು.

- ಮಂಜುನಾಥ ಜಿ. ಪಾಲವ್ವನಹಳ್ಳಿ, ಚಿತ್ರದುರ್ಗ

ಮಾಯಾನಗರಿ, ಆಗದಿರಲಿ ದುಬಾರಿ!

ಉತ್ತರ ಕರ್ನಾಟಕದಿಂದ ಉದ್ಯೋಗ ಅರಸಿಕೊಂಡು ಬರುವ ಸಾವಿರಾರು ಯುವಕ, ಯುವತಿಯರಿಗೆ ಬೆಂಗಳೂರು ಅನ್ನ ನೀಡುವ ಭಾಗ್ಯನಗರಿ. ಆದರೆ, ಆ ಸಂತೋಷ ಸಂಬಳ ಪಡೆದ ಕೆಲವು ದಿನಗಳಿಗಷ್ಟೇ ಸೀಮಿತ. ಬೆಂಗಳೂರಿನಲ್ಲಿ ಜೀವನ ವೆಚ್ಚ ದುಬಾರಿಯಾಗಿದೆ. ಉದ್ಯೋಗ, ಶಿಕ್ಷಣ ಅರಸಿ ಬರುವವರಿಗೆ ಅನುಕೂಲವಾಗುವಂತೆ ಸರ್ಕಾರ ಹೊಸ ನೀತಿ ರೂಪಿಸಬೇಕಿದೆ.

- ನಾಗಾರ್ಜುನ ಹೊಸಮನಿ, ಕಲಬುರಗಿ

ರೈತರ ಸಂಕಷ್ಟಗಳಿಗೆ ಪರಿಹಾರ ಸಿಗಲಿ 

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರು ಈ ವರ್ಷ ನೀರಿನ ಬಿಕ್ಕಟ್ಟಿನಿಂದಾಗಿ ಎರಡನೇ ಬೆಳೆ ಬೆಳೆಯುವ ಸಾಧ್ಯತೆಯನ್ನು ಕಳೆದುಕೊಂಡಿದ್ದಾರೆ. ಜಲಾಶಯದ ಗೇಟ್‌ಗಳ ದುರಸ್ತಿ ವಿಳಂಬ, ನೀರಾವರಿ ನಿರ್ವಹಣೆಯ ಅಸಮರ್ಪಕತೆ ಮತ್ತು ಯೋಜನಾ ಕೊರತೆಯೇ ಇಂದಿನ ಸ್ಥಿತಿಗೆ ಮುಖ್ಯ ಕಾರಣ. ಬೆಳೆನಾಶವಾಗಿರುವ ಹಿನ್ನೆಲೆಯಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಸರ್ಕಾರವು ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. 

- ವಿಜಯಕುಮಾರ್ ಎಚ್.ಕೆ., ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.